Monday, April 7, 2025
Homeರಾಜ್ಯಬೆಲೆ ಏರಿಕೆಗೆ ಕೇಂದ್ರ ಸರ್ಕಾರವನ್ನು ದೂರಿದ ಗ್ಯಾರಂಟಿ ಸರ್ಕಾರ

ಬೆಲೆ ಏರಿಕೆಗೆ ಕೇಂದ್ರ ಸರ್ಕಾರವನ್ನು ದೂರಿದ ಗ್ಯಾರಂಟಿ ಸರ್ಕಾರ

Congress government blames central government for price hike

ಬೆಂಗಳೂರು,ಏ.7- ಬಿಜೆಪಿಯ ಜನಾಕ್ರೋಶ ರ್ಯಾಲಿಗೆ ಕಾಂಗ್ರೆಸ್‌‍ ತಿರುಗೇಟು ನೀಡಿದ್ದು, ಕೇಂದ್ರ ಸರ್ಕಾರದ ನೀತಿಗಳಿಂದ ದೈನಂದಿನ ಬೆಲೆ ಏರಿಕೆ ಗಗನ ಮುಟ್ಟಿದೆ. ಮೊದಲು ಅದರ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಹಲವು ಸಚಿವರು, ಬಿಜೆಪಿಯ ಪ್ರತಿಭಟನೆಗೆ ಟಾಂಗ್‌ ನೀಡಿದ್ದಾರೆ. ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರೋನಾದಲ್ಲೂ ಭ್ರಷ್ಟಾಚಾರ ಮಾಡಲಾಯಿತು. ಬಿಜೆಪಿಯವರೇ ಆಗಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರೇ ಈ ಬಗ್ಗೆ ಹೇಳಿಕೆ ನೀಡಿದ್ದರು. ಕಾಂಗ್ರೆಸ್‌‍ ಅನ್ನು ಟೀಕಿಸುವ ಮುನ್ನ ಬಿಜೆಪಿಯವರು ಆತಾವಲೋಕನ ಮಾಡಿಕೊಳ್ಳಲಿ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿಯಲ್ಲಿ ಆಂತರಿಕ ಸಮಸ್ಯೆಗಳು ನೂರಾರಿವೆ. ಮನೆಯೊಂದು ನೂರು ಬಾಗಿಲು ಎಂಬಂತಾಗಿದೆ. ಅದನ್ನು ದಿಕ್ಕು ತಪ್ಪಿಸಲು ಪ್ರತಿಭಟನೆ ಎಂಬ ಯಾತ್ರೆ ಆರಂಭಿಸಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕೋಟ್ಯಂತರ ರೂಪಾಯಿ ಬಾಕಿ ಬಿಲ್‌ಗಳನ್ನು ಉಳಿಸಿ ಹೋಗಿದ್ದರು. ಅವರು ಮಾಡಿದ ಪಾಪವನ್ನು ನಾವು ತೀರಿಸುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

ಹಿಂದಿನ ಹಣಕಾಸಿನ ತೊಂದರೆಗೆ ಬಿಜೆಪಿಯವರು ಬೇಕಾಬಿಟ್ಟಿ ಕಾಮಗಾರಿಗಳನ್ನು ಗುತ್ತಿಗೆ ನೀಡಿದ್ದೇ ಕಾರಣ ಎಂದು ವಾಗ್ದಾಳಿ ನಡೆಸಿದರು.ಮತ್ತೊಬ್ಬ ಶಾಸಕ ಈಶ್ವರ್‌ ಖಂಡ್ರೆ ಮಾತನಾಡಿ, ಬಿಜೆಪಿಯವರಿಗೆ ನೈಜ ಕಾಳಜಿಯಿಲ್ಲ. ಅವರು ಹೋರಾಟ ನಡೆಸಬೇಕಾಗಿರುವುದು ಕೇಂದ್ರ ಸರ್ಕಾರದ ವಿರುದ್ಧ. ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗಿದೆ.

ತೈಲ ಬೆಲೆ ಏರಿಕೆಯಿಂದ ಕೋಟ್ಯಾಧಿಪತಿಗಳಿಗೆ ಅನುಕೂಲವಾಗಿದೆ. ಬಡವರಿಗೆ ತೊಂದರೆಯಾಗಿದೆ. ಮೊದಲು ಪೆಟ್ರೋಲ್‌, ಡೀಸೆಲ್‌ ಮೇಲಿನ ದರ ಕಡಿಮೆ ಮಾಡಲಿ ಎಂದು ಸವಾಲು ಹಾಕಿದರು.

ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳ ಅಧ್ಯಯನಕ್ಕೆ ಬೇರೆಬೇರೆ ರಾಜ್ಯಗಳಿಂದಲೂ ಜನ ಆಗಮಿಸುತ್ತಿದ್ದಾರೆ. ಇದನ್ನು ನೋಡಿ ಬಿಜೆಪಿಯವರಿಗೆ ಹೊಟ್ಟೆ ಉರಿಯುತ್ತಿದೆ ಎಂದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಹಾಗಾಗಿ ಅದರ ಬಗ್ಗೆ ಚರ್ಚೆ ಅನಗತ್ಯ. ಹೈಕಮಾಂಡ್‌ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

RELATED ARTICLES

Latest News