ಬೆಂಗಳೂರು,ಸೆ.6– ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಪರಿಶಿಷ್ಟ ಪಂಗಡಗಳ ಕಾಲೋನಿ ಅಭಿವೃದ್ಧಿಗೆ ಕೇವಲ 2 ಕೋಟಿ ರೂಪಾಯಿ ಅನುದಾನ ಪಡೆಯಲು ಮುಖ್ಯಮಂತ್ರಿಗಳಿಗೆ ಕೃಷಿ ಸಚಿವರು ಬರೆದಿರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಶೋಕ್ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದ ಕೃಷಿ ಸಚಿವರು, 4ನೇ ಬಾರಿಗೆ ಶಾಸಕರಾಗಿ ಆರಿಸಿ ಬಂದಿರುವವರು ತಮ ಕ್ಷೇತ್ರದ ಪರಿಶಿಷ್ಟ ಪಂಗಡಗಳ ಕಾಲೋನಿ ಅಭಿವೃದ್ಧಿಗೆ ಕೇವಲ 2 ಕೋಟಿ ರೂಪಾಯಿ ಅನುದಾನ ಪಡೆಯಲು ಮುಖ್ಯಮಂತ್ರಿಗಳ ಬಳಿ ಅಂಗಲಾಚಬೇಕು ಎಂದರೆ ಕಾಂಗ್ರೆಸ್ ಸರ್ಕಾರ ಎಷ್ಟು ದಿವಾಳಿ ಅನ್ನುವುದನ್ನು ನೀವೇ ಊಹಿಸಿಕೊಳ್ಳಿ ಎಂದು ಹೇಳಿದ್ದಾರೆ.
ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಕಾಲಿಗೆ ಬೀಳಬೇಕು ಎನ್ನುತ್ತಾರೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಶ್ರೀ ಬಸವರಾಜ ರಾಯರೆಡ್ಡಿ ಅವರು ನಿಮಗೆ ರಸ್ತೆ ಬೇಕಾದರೆ ಗ್ಯಾರಂಟಿ ಯೋಜನೆ ಬಂದ್ ಮಾಡುತ್ತೇವೆ ಎನ್ನುತ್ತಾರೆ. ಶಾಸಕ ಗವಿಯಪ್ಪನವರಂತೂ ಪಾಪ ಒಂದು ಹೆಜ್ಜೆ ಮುಂದೆ ಹೋಗಿ ಇದೇ ರೀತಿ ಮುಂದುವರಿದೆ ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂದೆ ಆತಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇನ್ನು ಬಿ.ಆರ್.ಪಾಟೀಲ, ರಾಜು ಕಾಗೆ ಅವರೂ ಸೇರಿದಂತೆ ಅನೇಕ ಶಾಸಕರು ಅನುದಾನವಿಲ್ಲದೆ ತಮ ಕ್ಷೇತ್ರಗಳಲ್ಲಿ ತಲೆ ಎತ್ತಿಕೊಂಡು ಓಡಾಡಲೂ ಆಗುತ್ತಿಲ್ಲ ಎನ್ನುವುದರ ಬಗ್ಗೆ ಸೂಪರ್ ಸಿಎಂ ಸುರ್ಜೆವಾಲಾ ಅವರಿಗೆ ದೂರು ಕೊಟ್ಟಿರುವುದನ್ನು ಮಾಧ್ಯಮಗಳು ಬಿತ್ತರಿಸಿವೆ. ಇನ್ನೆಷ್ಟು ದಿನ ಸಿಎಂ ಸಿದ್ದರಾಮಯ್ಯ ಅವರೇ ಈ ಭಂಡ ಬಾಳು?! ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ ಎಂದು ಆಗ್ರಹಿಸಿದ್ದಾರೆ.