Thursday, August 7, 2025
Homeರಾಜ್ಯನೌಕರರಿಗೆ ವೇತನ ಕೊಡಲು ಸಾಧ್ಯವಾಗದ ಕಾಂಗ್ರೆಸ್‌‍ ಸರ್ಕಾರ ದಿವಾಳಿಯಾಗಿದೆ : ಆರ್‌.ಅಶೋಕ್‌ ವಾಗ್ದಾಳಿ

ನೌಕರರಿಗೆ ವೇತನ ಕೊಡಲು ಸಾಧ್ಯವಾಗದ ಕಾಂಗ್ರೆಸ್‌‍ ಸರ್ಕಾರ ದಿವಾಳಿಯಾಗಿದೆ : ಆರ್‌.ಅಶೋಕ್‌ ವಾಗ್ದಾಳಿ

Congress government is bankrupt : R. Ashok attacks

ಬೆಂಗಳೂರು,ಆ.5- ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌‍ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಸಾರಿಗೆ ನೌಕರರಿಗೆ ವೇತನ ಕೊಡಲು ಸಾಧ್ಯವಾಗದ ಪಾಪರ್‌ ಹಂತಕ್ಕೆ ಬಂದಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶವೇ ಕೋವಿಡ್‌ ವೇಳೆ ಆರ್ಥಿಕವಾಗಿ ತತ್ತರಿಸಿತ್ತು. ಅಂತ ಸಂದರ್ಭದಲ್ಲೂ ನಮ ಸರ್ಕಾರ ಸಾರಿಗೆ ನೌಕರರಿಗೆ ಸಂಕಷ್ಟದ ಸಂದರ್ಭದಲ್ಲೂ ಅರ್ಧ ವೇತನವನ್ನು ನೀಡಿತ್ತು. ಎಲ್ಲವೂ ಸರಿಯಾಗಿರುವಾಗ ಬೇಡಿಕೆ ಈಡೇರಿಸಲು ಏಕೆ ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನಿಸಿದರು.

ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಘೋಷಣೆ ಮಾಡಿಬಿಡಿ. ಆಗ ನಿಮನ್ನು ಯಾರೂ ಕೂಡ ಏನೂ ಕೇಳುವುದಿಲ್ಲ. ನೌಕರರ ಬೇಡಿಕೆ ಈಡೇರಿಸದಿದ್ದರೆ ಇದೊಂದು ನಾಗರಿಕ ಸರ್ಕಾರ ಎನ್ನಬೇಕೇ ಎಂದು ತರಾಟೆಗೆ ತೆಗೆದುಕೊಂಡರು.

ನಮ ಸರ್ಕಾರದ ಖಜಾನೆ ತುಂಬಿದೆ ಎಂದು ಬೊಬ್ಬೆ ಹೊಡೆಯುತ್ತೀರಿ. ನಾನು ಸಾರಿಗೆ ಮಂತ್ರಿಯಾಗಿದ್ದಾಗ ನೌಕರರ ಶೇ.15 ರಷ್ಟು ವೇತನವನ್ನು ಹೆಚ್ಚಳ ಮಾಡಿದ್ದೆ. 4 ಲಕ್ಷ ಕೋಟಿಗೂ ಅಧಿಕ ಬಜೆಟ್‌ ಮಂಡನೆ ಮಾಡುವ ನಿಮಗೆ ಅವರ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲವೇ? ಎಂದು ಹರಿಹಾಯ್ದರು.

ನೌಕರರು ಮುಂದಿಟ್ಟಿರುವ ಬೇಡಿಕೆಗಳು ನ್ಯಾಯಯುತವಾಗಿದೆ. ಅದನ್ನು ಈಡೇರಿಸುವುದು ಸರ್ಕಾರದ ಕರ್ತವ್ಯ. ಅದನ್ನು ಬಿಟ್ಟು ಅವರ ಮೇಲೆ ಶಿಸ್ತು ಕ್ರಮದ ಬೆದರಿಕೆ ಹಾಕುವುದು ಸರಿಯಲ್ಲ. ಮೊದಲು ನಿದ್ರೆ ಮಾಡುವುದನ್ನು ಬಿಟ್ಟು ಸಮಸ್ಯೆ ಪರಿಹರಿಸಿ ಎಂದು ಒತ್ತಾಯಿಸಿದರು.

ನೌಕರರ ನ್ಯಾಯಯುತ ಬೇಡಿಕೆಗೆ ನಮ ಸಂಪೂರ್ಣವಾದ ಬೆಂಬಲ ಇದೆ. ಸಮಸ್ಯೆ ಪರಿಹರಿಸಿ, ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ. ಜನರಿಗೆ ನೀವು ಏಕೆ ಸಮಸ್ಯೆ ಕೊಡುತ್ತಿದ್ದೀರಿ? ಎಂದು ಅಶೋಕ್‌ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

RELATED ARTICLES

Latest News