ಬೆಂಗಳೂರು, ಫೆ.19- ಪ್ರತಿದಿನ ನಗರದ ಫ್ರೀಡಂಪಾರ್ಕ್‌ನಲ್ಲಿ ವೇತನ, ಅನುದಾನ, ಪರಿಷ್ಕರಣೆ, ಹೆಚ್ಚಳಕ್ಕಾಗಿ ಸಾವಿರಾರು ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ನಯಾಪೈಸೆಯೂ ಬಿಡುಗಡೆ ಮಾಡದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಪಾಪರ್ ಆಗಿದೆ ಎಂದು ಮಾಜಿ ಸಚಿವ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಗಳಿಗೆ ಹಣ ನೀಡಲು ಸರ್ಕಾರದ ಖಜಾನೆಯಲ್ಲಿ ಹಣವೇ ಇಲ್ಲ. ಫ್ರೀಡಂಪಾರ್ಕ್‌ನಲ್ಲಿ ಕಳೆದ ಹಲವು ತಿಂಗಳಿನಿಂದ ಸಾವಿರಾರು ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೊಂದು ಪಾಪರ್ ಸರ್ಕಾರ ಅಲ್ಲವೇ ಎಂದು ಪ್ರಶ್ನಿಸಿದರು.
ಗ್ಯಾರಂಟಿಗಳು ತಿಂಗಳ ಸಂಬಳ ಅಲ್ಲವಲ್ಲ ಎಂಬ ಸಚಿವ ಕೆ.ಜೆ. ಜಾರ್ಜ್ ಹೇಳಿಕೆಗೆ ಪ್ರತಿಕ್ರಿಸಿದ ಅವರು, ಸಚಿವರು ಗ್ಯಾರಂಟಿಗಳಿಗೆ ಕಳಂಕ ಹಚ್ಚುವ ಮಾತಾಡಿದ್ದಾರೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ, ನೌಕರರಿಗೆ ವೇತನ ಕೊಡಲು ಆಗುತ್ತಿಲ್ಲ. ಎಲ್ಲ ಪದಾರ್ಥಗಳ ಬೆಲೆ ಏರಿಕೆ ಮಾಡಿದ್ದಾರೆ. ಬೆಲೆ ಏರಿಕೆ ಮಾಡಲು ಅಧಿಕಾರಕ್ಕೆ ಬಂದ್ದೀರಾ? ಮೋಸ ಮಾಡುವುದಕ್ಕೆ ಗ್ಯಾರಂಟಿಗಳ ಘೋಷಣೆ ಮಾಡಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂಭ ಮೇಳದ ನದಿ ನೀರು ಸ್ನಾನಕ್ಕೆ ಯೋಗ್ಯವಲ್ಲ ಎಂಬ ವರದಿ ಕುರಿತು ಮಾತನಾಡಿದ ಅವರು, ಯಾವ ದೃಷ್ಟಿಯಿಂದ ವರದಿ ಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ ಇದು ಭಾವನೆಗಳ ಪ್ರಶ್ನೆ. ಹರಿಯುವ ನದಿಗೆ ದೋಷ ಇರುವುದಿಲ್ಲ ಎಂಬುದು ನಮ್ಮ ನಂಬಿಕೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.