Friday, November 22, 2024
Homeರಾಜ್ಯಶಾಮನೂರು ಹೇಳಿಕೆಗೆ ಪೂರಕವಾಗಿ ಲಿಂಗಾಯತ ಸಮುದಾಯದ ಅಧಿಕಾರಿಗಳಿಂದ ದೂರು

ಶಾಮನೂರು ಹೇಳಿಕೆಗೆ ಪೂರಕವಾಗಿ ಲಿಂಗಾಯತ ಸಮುದಾಯದ ಅಧಿಕಾರಿಗಳಿಂದ ದೂರು

ಬೆಂಗಳೂರು,ಅ.4- ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪಕ್ಕೆ ಪೂರಕವಾಗಿ ಕೆಲವರಿಗೆ ಉದ್ದೇಶಪೂರಕವಾದ ಕಿರುಕುಳ ನೀಡುತ್ತಿರುವ ದೂರುಗಳು ಕೇಳಿಬಂದಿವೆ. ಪಕ್ಷದ ಹಿರಿಯ ಶಾಸಕರಾದ ಶ್ಯಾಮನೂರು ಶಿವಶಂಕರಪ್ಪ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಸಮುದಾಯದ ಅಧಿಕಾರಿಗಳದ್ದು ನಾಯಿ ಪಾಡಾಗಿದೆ ಎಂದು ಬಹಿರಂಗ ಆರೋಪ ಮಾಡಿದರು.

ಇದಕ್ಕೂ ಮೊದಲು ಸಮುದಾಯದ ಹಲವಾರು ಪ್ರಮುಖ ಅಧಿಕಾರಿಗಳ ನಿಯೋಗ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದೆ ಎಂದು ಹೇಳಲಾಗಿದೆ.ಐಎಎಸ್, ಕೆಎಎಸ್ ಹಾಗೂ ಪತ್ರಾಂಕಿತ ಅಧಿಕಾರಿಗಳ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಉದ್ದೇಶಪೂರಕವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಕೆಲವರು ಕೆಎಟಿ ಹಾಗೂ ಸಿಎಟಿ ಯಂತಹ ನ್ಯಾಯಾಕರಣಗಳಿಂದ ತಡೆಯಾಜ್ಞೆ ತಂದಿದ್ದಾರೆ. ಇದನ್ನೇ ಗುರಿಯಾಗಿಸಿಕೊಂಡು ಸದರಿ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ದೂರುಗಳಿವೆ.

ಈ ಹಿಂದೆ ಸದರಿ ಅಧಿಕಾರಿಗಳು ಕೆಲಸ ಮಾಡಿದ ಅವಧಿಯಲ್ಲಿ ಮಾಡಿರಬಹುದಾದಂತಹ ಲೋಪಗಳನ್ನು ಬೆನ್ನಟ್ಟಿ ತನಿಖೆ ಮಾಡಲು ಸೂಚಿಸಲಾಗಿದೆ. ಕೆಎಟಿ ಮೆಟ್ಟಿಲೇರಿದ ಬಹಳಷ್ಟು ಅಧಿಕಾರಿಗಳಿಗೆ ಈ ರೀತಿಯ ತನಿಖೆ ಹಾಗೂ ವಿಚಾರಣೆಯ ಬಿಸಿ ತಟ್ಟಿದೆ. ಇದರಿಂದಾಗಿ ಕಂಗಾಲಾದ ಅಧಿಕಾರಿಗಳು ಸಮುದಾಯದ ಸಚಿವರನ್ನು ಭೇಟಿ ಮಾಡಲು ಯತ್ನಿಸಿದರು. ಆದರೆ ತಾವು ಅಸಹಾಯಕರು ಎಂದು ಸಚಿವರು ಕೈಚೆಲ್ಲಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಅಕಾರಿಗಳ ನಿಯೋಗ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ಮಾಡಿ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡಿದೆ ಎನ್ನಲಾಗಿದೆ.

ಲಾಲೂಪ್ರಸಾದ್ ಯಾದವ್ ಕುಟುಂಬಕ್ಕೆ ಬಿಗ್ ರಿಲೀಫ್

ಅಧಿಕಾರಿಗಳ ಮೇಲಾಗುತ್ತಿರುವ ಕಿರುಕುಳದ ಮಾಹಿತಿ ಪಡೆದುಕೊಂಡ ಬಳಿಕ ವ್ಯಘ್ರರಾದ ಶ್ಯಾಮನೂರು ಶಿವಶಂಕರಪ್ಪ ಸಮುದಾಯದ ಕೆಲ ಸಚಿವರಿಗೆ ವಿಷಯ ತಿಳಿಸಿ ಲೋಪಗಳನ್ನು ಸರಿಪಡಿಸುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ ಈ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡಲು ಧೈರ್ಯ ತೋರಿಸದೆ ಹಿಂದೇಟು ಹಾಕಿದ್ದರು ಎಂಬ ಮಾಹಿತಿ ಇದೆ.

ಈ ಹಿನ್ನೆಲೆಯಲ್ಲಿ ಖುದ್ದು ಶ್ಯಾಮನೂರು ಶಿವಶಂಕರಪ್ಪನವರೇ ಅಖಾಡಕ್ಕೆ ಇಳಿದಿರುವುದಾಗಿ ತಿಳಿದುಬಂದಿದೆ. ಇದರ ಹಿಂದೆ ಒಂದಿಷ್ಟು ರಾಜಕೀಯ ಲೆಕ್ಕಾಚಾರ ಕೂಡ ಕೇಳಿಬಂದಿವೆ. ಸಿದ್ದರಾಮಯ್ಯನವರು ಈ ಹಿಂದೆ ಜೆಡಿಎಸ್‍ನಿಂದ ಉಪಮುಖ್ಯಮಂತ್ರಿಯಾಗಿದ್ದಾಗ ನೇರವಾಗಿಯೇ ಅಹಿಂದ ಸಮಾವೇಶ ನಡೆಸಲು ಮುಂದಾಗಿದ್ದರು. ಅದನ್ನು ಪಕ್ಷದ ವೇದಿಕೆಯಿಂದಲೇ ಮಾಡುವಂತೆ ಆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದರು.

ಆದರೆ ಅದಕ್ಕೆ ಸಿದ್ದರಾಮಯ್ಯ ಕಿವಿ ಕೊಟ್ಟಿರಲಿಲ್ಲ. ಪರಿಣಾಮ ರಾಜಕೀಯವಾಗಿ ಕ್ಷಿಪ್ರ ಬೆಳವಣಿಗೆಗಳಾದವು.
ಇತ್ತೀಚೆಗೆ ಸಿದ್ದರಾಮಯ್ಯ ಅವರ ಆಪ್ತ ಬಳಗ, ಕೆಲ ನಾಯಕರು ಅಖಿಲ ಭಾರತ ಕುರುಬರ ಸಮಾವೇಶವನ್ನು ಸಂಯೋಜಿಸಿದ್ದರು. ಪಕ್ಷಾತೀತವಾಗಿ ನಡೆದ ಈ ಸಮಾವೇಶದಲ್ಲಿ ಬಿಜೆಪಿ, ಜೆಡಿಎಸ್‍ನ ಹಲವು ನಾಯಕರು ಭಾಗಿಯಾಗಿದ್ದರು. ಮೂಲ ಕಾಂಗ್ರೆಸಿಗರಿಗೆ ಇದು ನುಂಗಲಾರದ ಬಿಸಿ ತುಪ್ಪವಾಗಿತ್ತು.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪಕ್ಷದ ವೇದಿಕೆಯಿಂದಲೇ ಈ ರೀತಿಯ ಸಮಾವೇಶಗಳನ್ನು ನಡೆಸಬಹುದಿತ್ತು. ಸರ್ಕಾರದ ಸಂಪನ್ಮೂಲ ಮತ್ತೂ ಪ್ರಭಾವಗೊಳಿಸಿ ಸಿದ್ದರಾಮಯ್ಯ ತಮ್ಮ ವೈಯಕ್ತಿಕ ವರ್ಚಸ್ಸು ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಹೀಗಾಗಿ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ತೊಂದರೆಯಾಗಬಹುದು ಎಂಬ ಆತಂಕ ಕಾಂಗ್ರೆಸಿಗರನ್ನು ಕಾಡುತ್ತಿದೆ.

2024ರ ವೇಳೆಗೆ ಅತ್ಯಾಕರ್ಷಕ ಸ್ಲೀಪರ್ ಕೋಚ್ ವಂದೇ ಭಾರತ್

ಲೋಕಸಭೆ ಚುನಾವಣೆ ಬಳಿಕ ಸ್ಥಾನ ಪಲ್ಲಟಗಳಾಗಲಿವೆ ಎಂಬ ವದಂತಿಗಳ ನಡುವೆಯೇ ನಡೆಯುತ್ತಿರುವ ಜಾತಿವಾರು ಸಮಾವೇಶಗಳು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಅದರ ಜೊತೆಯಲ್ಲಿ ಕೆಲವು ಸಮುದಾಯದ ಅಧಿಕಾರಿಗಳ ಮೇಲೆ ಉದ್ದೇಶಪೂರಕವಾದ ಹಗೆತನ ಸಾಧಿಸಲಾಗುತ್ತಿದೆ ಎಂಬ ಅಸಮಾಧಾನಗಳು ಶ್ಯಾಮನೂರು ಶಿವಶಂಕರಪ್ಪ ಅವರ ಸಿಟ್ಟು ಸೋಟಗೊಳ್ಳಲು ಕಾರಣ ಎನ್ನಲಾಗುತ್ತಿದೆ.

ಈ ಮೊದಲು ಬಿ.ಕೆ.ಹರಿಪ್ರಸಾದ್ ಅವರು ಹಿಂದುಳಿದ ಸಮುದಾಯಗಳ ವಿಷಯವಾಗಿ ಹೇಳಿಕೆ ನೀಡಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದರು. ಅದರ ಬೆನ್ನಲ್ಲೇ ಶ್ಯಾಮನೂರು ಅವರ ಟೀಕೆ ಕಾಂಗ್ರೆಸ್‍ಗೆ ದುಬಾರಿಯಾಗಿ ಪರಿಣಮಿಸಿದೆ.

ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಸಮುದಾಯದ ಜೊತೆಗೆ ಲಿಂಗಾಯತ ಸಮುದಾಯವೂ ಕಾಂಗ್ರೆಸ್ ಬೆನ್ನಿಗೆ ನಿಂತಿದ್ದರಿಂದಾಗಿಯೇ 135 ಸ್ಥಾನಗಳ ಅಭೂತಪೂರ್ವ ಯಶಸ್ಸು ಗಳಿಸಲು ಸಾಧ್ಯವಾಗಿತ್ತು. ಈಗ ಲೋಕಸಭೆ ಚುನಾವಣಾ ವೇಳೆ ಲಿಂಗಾಯತ ಸಮುದಾಯದ ಕ್ರೋಧಾಗ್ನಿ ಪಕ್ಷಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಇದೆ ಎಂಬ ಚರ್ಚೆಗಳು ನಡೆಯುತ್ತಿವೆ.

ಹೇಳಿಕೆ ನೀಡಿದ ಶ್ಯಾಮನೂರು ಶಿವಶಂಕರಪ್ಪ ಅವರ ಜೊತೆ ತಾವು ಚರ್ಚೆ ಮಾಡುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆದರೆ ಮೂರು ದಿನ ಕಳೆದಿದ್ದು, ಹೇಳಿಕೆಗಳ ಮೇಲೆ ಹೇಳಿಕೆಗಳು ಹೊರಬರುತ್ತಲೇ ಇವೆ. ದಿನೇ ದಿನೇ ಸಮುದಾಯದಲ್ಲಿ ಅಸಮಾಧಾನ ಮಡುಗಟ್ಟುತ್ತಿದ್ದು, ನಕಾರಾತ್ಮಕವಾದ ಸಂದೇಶಗಳು ರವಾನೆಯಾಗುತ್ತಿವೆ.

RELATED ARTICLES

Latest News