Wednesday, October 15, 2025
Homeರಾಜ್ಯ6ನೇ ಗ್ಯಾರಂಟಿ ಜಾರಿ ಮುಂದಾದ ಕಾಂಗ್ರೆಸ್‌‍ ಸರ್ಕಾರ : ಬಿ -ಖಾತಾದಾರರಿಗೆ ಎ-ಖಾತಾ ಭಾಗ್ಯ

6ನೇ ಗ್ಯಾರಂಟಿ ಜಾರಿ ಮುಂದಾದ ಕಾಂಗ್ರೆಸ್‌‍ ಸರ್ಕಾರ : ಬಿ -ಖಾತಾದಾರರಿಗೆ ಎ-ಖಾತಾ ಭಾಗ್ಯ

Congress government to implement 6th guarantee: B-Khataholders to get A-Khata

ಬೆಂಗಳೂರು, ಅ.15- ರಾಜ್ಯ ಕಾಂಗ್ರೆಸ್‌‍ ಸರ್ಕಾರ ಭೂಮಿ ಹಕ್ಕಿನ 6ನೇ ಗ್ಯಾರಂಟಿಯನ್ನು ಜಾರಿಗೊಳಿಸುತ್ತಿದ್ದು, ಬಿ ಖಾತಾಗಳನ್ನು ಎ ಖಾತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.ವಿಧಾನಸೌಧದ ಸಮೇಳನ ಸಭಾಂಗಣದಲ್ಲಿಂದು ಬಿ ಖಾತೆಯಿಂದ ಎ ಖಾತೆಗೆ ಆಸ್ತಿ ಪರಿವರ್ತಿಸಲು ಸಿದ್ಧಪಡಿಸಿರುವ ವೆಬ್‌ಸೈಟ್‌ಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳಿವೆ. ಅದರಲ್ಲಿ 7.5 ಲಕ್ಷ ಎ ಖಾತೆಗಳಿದ್ದು, ಇನ್ನೂ 7.5 ಲಕ್ಷ ಬಿ ಖಾತೆಗಳಿವೆ. ಸುಮಾರು 8 ರಿಂದ 9 ಲಕ್ಷ ಅಸ್ತಿಗಳನ್ನೂ ಖಾತೆ ನೋಂದಣಿಗಾಗಿ ಮನವಿ ಸಲ್ಲಿಕೆಯಾಗಿವೆ ಎಂದು ವಿವರಿಸಿದರು.ನಮ ರಾಜ್ಯದಲ್ಲಿನ ಆಸ್ತಿ ದಾಖಲಾತಿಗಳ ಕ್ರಮ ಬದ್ಧತೆ ಮತ್ತು ಡಿಜಿಟಲೀಕರಣಕ್ಕಾಗಿ ಕೇಂದ್ರ ಸರ್ಕಾರ ನಮಗೆ ಪ್ರಶಸ್ತಿ ನೀಡಿದೆ ಎಂದು ಹೇಳಿಕೊಂಡರು.

ಕರ್ನಾಟಕ ಪಟ್ಟಣ ಮತ್ತು ನಗರ ಯೋಜನಾ ಕಾಯ್ದೆ (ಕೆಟಿಸಿಪಿ ಆ್ಯಕ್ಟ್‌) 1961ರ ಅಡಿಯಲ್ಲಿ ಅನುಮೋದನೆಗೊಂಡ ಕೃಷಿ ಜಮೀನುಗಳ ಕಂದಾಯ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡಿದ್ದರೆ, ಕೆಲವು ಪರಿವರ್ತನೆಯಾಗಿದ್ದು, ಇನ್ನೂ ಕೆಲವು ಪರಿವರ್ತನೆಯಾಗದೇ ಇದ್ದರೆ, ಈ ಆಸ್ತಿಗಳ ಮಾಲೀಕರಿಗೆ ಬ್ಯಾಂಕಿನಿಂದ ಸಾಲ ಪಡೆಯಲು ಮತ್ತು ಕಟ್ಟಡ ನಿರ್ಮಾಣಕ್ಕೆ ನಿಯಮ ಬದ್ಧವಾಗಿ ನಕ್ಷೆ ಅನುಮೋದನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಎ ಪರಿವರ್ತನಾ ಅಭಿಯಾನವನ್ನು ಆರಂಭಿಸಿದ್ದೇವೆ.

ನಿರ್ಮಾಣಗೊಂಡಿರುವ ಕಟ್ಟಡದ ಸಕ್ರಮೀಕರಣಕ್ಕೆ ನಾವು ಕೈ ಹಾಕುತ್ತಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.ಕಂದಾಯ ಲೇಔಟ್‌ಗಳಲ್ಲಿ ಭೂ ಮಾಲೀಕರು ರಸ್ತೆಗಳನ್ನು ತಮ ಹೆಸರಿಗೆ ಇರಿಸಿಕೊಂಡು, ಇಬ್ಬಿಬ್ಬರಿಗೆ ನೋಂದಣಿ ಮಾಡಿ, ಸಾರ್ವಜನಿಕರಿಗೆ ಮೋಸ ಮಾಡುವ ಪ್ರಯತ್ನ ಮಾಡುತ್ತಿದ್ದರು. ಹೀಗಾಗಿ ಮೂರ್ನಾಲ್ಕು ತಿಂಗಳ ಹಿಂದೆ ನಡೆದ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ತಂದು ಎಲ್ಲಾ ರಸ್ತೆಗಳನ್ನು ಸರ್ಕಾರದ ಆಸ್ತಿಗಳೆಂದು ಘೋಷಣೆ ಮಾಡಿದ್ದೇವೆ ಎಂದರು.

ಕಂದಾಯ ನಿವೇಶನಗಳು, ಪರಿವರ್ತನೆಯಾಗದ ಭೂಮಿ, ಯೋಜನೆ ಅನುಮೋದನೆಯಿಲ್ಲದ ಬಿ ಖಾತೆ ನಿವೇಶನಗಳನ್ನು ಎ ಖಾತೆಯನ್ನಾಗಿ ಪರಿವರ್ತಿಸಿಕೊಳ್ಳಲು 100 ದಿನಗಳ ಕಾಲಾವಕಾಶ ನೀಡಲಾಗುತ್ತಿದೆ.
ನವೆಂಬರ್‌ 1 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಸಾರ್ವಜನಿಕರು 500 ರೂ. ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದರು.

ಪ್ರತಿಯೊಂದು ಪಾಲಿಕೆಯಲ್ಲೂ ಎರಡು ಕಡೆ ಕಚೇರಿಗಳನ್ನು ಆರಂಭಿಸಿ, ಸಹಾಯ ಕೇಂದ್ರಗಳ ಮೂಲಕ ನೆರವು ನೀಡಲಾಗುವುದು. ಬೆಂಗಳೂರು ಒನ್‌ ಕೇಂದ್ರದಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ಯಾರಿಗೆ ಯಾರೂ ಕೂಡ ಒಂದು ರೂ. ಲಂಚ ನೀಡಬಾರದು. ಅಧಿಕೃತವಾದ ಶುಲ್ಕ ಮಾತ್ರ ಪಾವತಿಸಬೇಕು ಎಂದರು.
ಸಧ್ಯಕ್ಕೆ 2 ಸಾವಿರ ಚದರ ಮೀಟರ್‌ (20 ಸಾವಿರ ಚದರ ಅಡಿ) ನಿವೇಶನಗಳನ್ನು ಎ ಖಾತೆಗಳನ್ನಾಗಿ ಯಾಂತ್ರಿಕೃತವಾಗಿ ಪರಿವರ್ತಿಸಲಾಗುತ್ತದೆ. ಅದಕ್ಕೆ ಮೇಲ್ಪಟ್ಟ ನಿವೇಶನಗಳ ಪರಿವರ್ತನೆಗೆ ದಾಖಲಾತಿಗಳ ಪರಿಶೀಲನೆ ಹಾಗೂ ಇತರ ಪ್ರಕ್ರಿಯೆಗಳನ್ನು ಪಾಲಿಸಬೇಕಿದೆ ಎಂದರು.

ಕಂದಾಯ ಇಲಾಖೆಗೆ ಭೂ ಪರಿವರ್ತನೆಗಾಗಿ (ಅಲಿನೇಷನ್‌)ಗಾಗಿ ಶುಲ್ಕ ಪಾವತಿಸದೇ ಇದ್ದವರಿಂದ ಈಗ ಶುಲ್ಕ ವಸೂಲಿ ಮಾಡಿ ಆ ಹಣವನ್ನು ಕಂದಾಯ ಇಲಾಖೆಗೆ ಪಾವತಿಸಲಾಗುತ್ತದೆ. ನಗರ ಯೋಜನಾ ಪ್ರಾಧಿಕಾರವಾದ ಬಿಡಿಎ ಅಥವಾ ಬಿಬಿಎಂಪಿಗೆ ಡೆವಲಪ್‌ಮೆಂಟ್‌ ಚಾರ್ಜ್‌ ಕಟ್ಟದೇ ಇದ್ದರೆ ಅದನ್ನು ಕೂಡ ಈ ಸಂದರ್ಭದಲ್ಲಿ ವಸೂಲಿ ಮಾಡಲಾಗುವುದು. ಈ ಎರಡು ಶುಲ್ಕಗಳಿಗಾಗಿ ಮಾರ್ಗಸೂಚಿ ಮೌಲ್ಯದ ಶೇ. 5ರಷ್ಟು ಶುಲ್ಕವನ್ನು ವಸೂಲಿ ಮಾಡಲಾಗುವುದು. 100 ದಿನದ ಬಳಿಕ ಈ ಶುಲ್ಕವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದರು.

ಎ ಖಾತಾ ಪರಿವರ್ತನೆಯಾದ ನಿವೇಶನಗಳಿಗೆ ವಿದ್ಯುತ್‌, ನೀರು, ಒಳಚರಂಡಿ, ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಪಾಲಿಕೆ ಒದಗಿಸಲಿದೆ. ಬೆಂಗಳೂರು ಹಾಗೂ ಹೊರ ವಲಯದ ನಿವೇಶನಗಳಲ್ಲಿ ಈ ಅಭಿಯಾನ ಚಾಲ್ತಿಯಲ್ಲಿರುತ್ತದೆ. ಎ ಖಾತಾ ಪರಿವರ್ತನೆಯಿಂದ ಆಸ್ತಿಯ ಮೌಲ್ಯ ಹೆಚ್ಚಾಗಲಿದ್ದು, ಅಧಿಕೃತ ಗೌರವವು ಕೂಡ ದೊರೆಯುತ್ತದೆ ಎಂದರು.

ಓಸಿ ಮತ್ತು ಸಿಸಿಗೂ ಇದಕ್ಕೂ ಸಂಬಂಧ ಇಲ್ಲ. ಬೆಂಗಳೂರು ನಗರದಲ್ಲಿ 15 ಲಕ್ಷ ಆಸ್ತಿ ಮಾಲೀಕರಿಗೆ ಅಭಿಯಾನದಿಂದ ಅನುಕೂಲವಾಗಬಹುದು. ಕಳೆದ 50 ವರ್ಷಗಳಿಂದಲೂ ಯಾವ ಸರ್ಕಾರವು ಜಾರಿ ಮಾಡದೇ ಇರುವ ವ್ಯವಸ್ಥೆಯನ್ನು ನಮ ಸರ್ಕಾರ ರೂಪಿಸಿದೆ. ಏಕಗವಾಕ್ಷಿ ಯೋಜನೆಯಡಿ ಖಾತೆ ಪರಿವರ್ತನೆ ಮಾಡಿಕೊಡಲಾಗುತ್ತದೆ ಎಂದರು. ಅನಧಿಕೃತ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆಸ್ತಿಗಳ ಮಾರಾಟಕ್ಕೆ ಇನ್ನು ಮುಂದೆ ಅವಕಾಶವಿರುವುದಿಲ್ಲ. ಬಿ ಖಾತಾ ಫ್ಲಾಟ್‌ಗಳು ಅಥವಾ ಬಹುಮಹಡಿ ಕಟ್ಟಡಗಳಿಗೆ ಇದು ಅನ್ವಯಿಸುವುದಿಲ್ಲ. ಮೊದಲಿಗೆ ನಿವೇಶನ ಮತ್ತು ಅದರಲ್ಲಿ ನಿರ್ಮಿಸಿರುವ ಕಟ್ಟಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ.

ಪಾಲಿಕೆ ಅಧಿಕಾರಿಗಳು ಪ್ರತಿ ಆಸ್ತಿಗಳನ್ನು ಮಾಲೀಕರ ಸಹಿತವಾಗಿ ಫೋಟೋ, ವಿಡಿಯೋ ತೆಗೆದು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಿದ್ದಾರೆ. ಜನ ಅದನ್ನು ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸಬಹುದು. ಯಾರದೋ ಜಾಗಕ್ಕೆ ಇನ್ಯಾರೋ ಖಾತೆ ಮಾಡಿಸಿಕೊಳ್ಳಲು ಅವಕಾಶವಿರುವುದಿಲ್ಲ ಎಂದರು.

ಸರ್ಕಾರದ ಆಸ್ತಿ, ಪಿಟಿಸಿಎಲ್‌ ವಿವಾದಿತ ಮತ್ತು ನ್ಯಾಯಾಲಯದ ತಗಾದೆ ಇರುವ ಆಸ್ತಿಗಳಿಗೆ ಈ ಅಭಿಯಾನ ಅನ್ವಯಿಸುವುದಿಲ್ಲ. ಸ್ವಂತ ಮಾಲೀಕರು ಪಂಚಾಯಿತಿ ಸೇರಿದಂತೆ ಯಾವುದೇ ಸಂಸ್ಥೆಗಳಲ್ಲಿ ಭೂಮಿ ನೋಂದಾಯಿಸಿಕೊಂಡಿದ್ದರೆ ಅವರು ಸದಾವಕಾಶ ಬಳಸಿಕೊಳ್ಳಬಹುದು ಎಂದರು.ಖಾತಾ ಪರಿವರ್ತನ ಅಭಿಯಾನದಲ್ಲಿ ಸಂಗ್ರಹವಾಗುವ ಶುಲ್ಕಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಇದು ಆಯಾ ಪಾಲಿಕೆಗಳ ಗಳಿಕೆ ಮಾತ್ರ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬೆಂಗಳೂರು ಬಿಟ್ಟು ಯಾವ ಖಾಸಗಿ ಸಂಸ್ಥೆಗಳೂ ಹೊರಹೋಗುವುದಿಲ್ಲ. ಉದ್ಯಮಗಳು ಹಾಗೂ ಕೈಗಾರಿಕೆಗಳಿಗೆ ಸರ್ಕಾರ ಭೂಮಿ ಸೇರಿದಂತೆ ಸಾಕಷ್ಟು ನೆರವು ನೀಡಿದೆ. ಅದನ್ನು ಮರೆತು ಟೀಕೆ ಮಾಡಿದರೆ ಅದು ದೇಶ ದ್ರೋಹವಾಗುತ್ತದೆ. ಉದ್ಯಮದವರು ನೀವೇ ನಿಮ ಮನೆಯನ್ನು ಹಾಳುಮಾಡಿಕೊಳ್ಳಬೇಡಿ ಎಂದು ಕೈ ಮುಗಿದು ಪ್ರಾರ್ಥಿಸುವುದಾಗಿ ಹೇಳಿದರು.

RELATED ARTICLES

Latest News