Friday, November 22, 2024
Homeರಾಜಕೀಯ | Politicsಲೋಕಸಭಾ ಚುನಾವಣೆ ಬಳಿಕ ಅಸ್ಥಿತ್ವ ಕಳೆದುಕೊಳ್ಳಲಿದೆ ಕಾಂಗ್ರೆಸ್ ಸರ್ಕಾರ : ಗೌಡರ ಭವಿಷ್ಯ

ಲೋಕಸಭಾ ಚುನಾವಣೆ ಬಳಿಕ ಅಸ್ಥಿತ್ವ ಕಳೆದುಕೊಳ್ಳಲಿದೆ ಕಾಂಗ್ರೆಸ್ ಸರ್ಕಾರ : ಗೌಡರ ಭವಿಷ್ಯ

ಬೇಲೂರು, ಏ.17- ಲೋಕಸಭಾ ಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವದಲ್ಲೇ ಇರುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಇಬ್ಬೀಡು ಗ್ರಾಮದಲ್ಲಿಮಂಗಳವಾರ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,ಈ ದೇವೇಗೌಡರಿಗೆ 91 ವರ್ಷ, ಬುದ್ದಿ ಭ್ರಮಣೆಯಿಂದ ಏನೇನೋ ಹೇಳ್ತಾನೆ ಅಂತಿದ್ದಾರೆ.

ಆದರೆ ನಾನು ಬದುಕಿದ್ದೇನೆ, ಬದುಕಿರುತ್ತೇನೆ ನೋಡಲು ಈ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಹಿಳೆಯರ ಬಗ್ಗೆ ನೀಡಿದ ಹೇಳಿಕೆಯನ್ನು ತಿರುಚಿ ಬರೆದಿದ್ದಾರೆ. ಅವರು ಯಾವ ಅರ್ಥದಲ್ಲಿ ಹೇಳಾದ್ದಾರೋ ಅದನ್ನು ಬಿಟ್ಟು ಬೇರೆಯದೆ ಅರ್ಥ ನೀಡಿದರು.ಆದರೂ ಕುಮಾರಸ್ವಾಮಿ ಬೇಷರತ್ ಕ್ಷಮೆ ಕೇಳಿದ್ದಾರೆ.

ಒಬ್ಬ ಮನುಷ್ಯ ಕ್ಷಮೆ ಕೇಳುವುದಕ್ಕಿಂತ ಇನ್ನೇನು ಮಾಡಬೇಕು? ಎಂದು ಪುತ್ರನ ಪರ ಬ್ಯಾಟ್ ಬೀಸಿದ ಅವರು, ಪಾಪ ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ ಎಲ್ಲ ಕಡೆಗಳಲ್ಲೂ ಕುಮಾರಸ್ವಾಮಿ ವಿರುದ್ಧ ಕ್ಕಾರ ಕೂಗಿಸುತ್ತಿದ್ದಾರೆ. ಕ್ಕಾರ ಕೂಗಿಸಿ ಕೂಗಿಸಿ ಮುಳುಗುತ್ತಿರುವ ಕಾಂಗ್ರೆಸ್‍ಗೆ ಶಕ್ತಿ ತುಂಬಿಕೊಳ್ಳುತ್ತಿದ್ದಾರೆ.

ಡಿ.ಕೆ.ಶಿವಕುಮಾರ್ ಬಗ್ಗೆ ಬೇಕಾದರೆ ಎಲ್ಲ ಬಿಚ್ಚಿಡಬಲ್ಲೆ. ಆದರೆ ನಾನು ಈ ವಯಸ್ಸಿನಲ್ಲಿ ಅಷ್ಟೊಂದು ಕೆಳಮಟ್ಟಕ್ಕೆ ಇಳಿಯಲ್ಲ. ದಿನದಿಂದ ದಿನಕ್ಕೆ ಕಾಂಗ್ರೆಸ್ ಕುಸಿಯುತ್ತಿದೆ. ಇದನ್ನು ಮೇಲೆತ್ತಲು ಯಾರಿಂದಲೂ ಸಾಧ್ಯವಿಲ್ಲ. ಲೋಕಸಭಾ ಚುನಾವಣೆ ಕಳೆದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ.

ನಾನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅಧಿಕಾರದಲ್ಲಿದ್ದಂತಹ ಸಂದರ್ಭ ಅಭಿವೃದ್ಧಿಪರ ಕೆಲಸ ಮಾಡಿದ್ದೇನೆ. ಈ ಬಾರಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಬೇಕು ಅಂದರೆ ಅವರ ಕೈ ಬಲಪಡಿಸಬೇಕು. ಆದ್ದರಿಂದ ಹಾಸನದಲ್ಲಿ ಎನ್‍ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಗೆಲ್ಲಿಸಿ ಕಳುಹಿಸಿಕೊಡಿ ಎಂದರು.

ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್‍ನಲ್ಲಿ ನಾಯಕತ್ವದ ಕೊರತೆ ಇದ್ದು ಈಗಾಗಲೇ ಕುತ್ತಿಗೆ ತನಕ ಮುಳುಗಿದೆ. ತಲೆ ಮಾತ್ರ ಬಾಕಿ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ವೆಂಟಿಲೇಟರ್‍ನಲ್ಲಿದ್ದು ಎದೆ ಡವ ಡವ ಅಂತ ಬಡಿದು ಕೊಳ್ಳುತ್ತಿದೆ. ಆದರೆ ಈ ಲೋಕಸಭಾ ಚುನಾವಣೆ ನಂತರ ಅದೂ ಸಹ ನಿಂತು ಹೋಗುತ್ತದೆ.

ಇದು ದೇಶದ ಚುನಾವಣೆಯಾಗಿದ್ದು ದೇಶದ ಅಳಿವು ಉಳಿವು ಮತ್ತು ಭದ್ರತೆ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಆದರೆ ಕಾಂಗ್ರೆಸ್ ಬರೀ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾ ಜನರ ದಾರಿ ತಪ್ಪಿಸುತ್ತಿದೆ. ಇದರಿಂದ ಕಾಂಗ್ರೆಸ್‍ಗೆ ಭವಿಷ್ಯವಿಲ್ಲ. ದೇಶದ ಭವಿಷ್ಯ ಬರೆಯುವ ನಾಯಕ ಎಂದರೆ ನರೇಂದ್ರ ಮೋದಿ, ಅವರ ನಾಯಕತ್ವವನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಬೇಕು ಹಾಗಾಗಿ ಪ್ರಜ್ವಲ್ ಭವಿಷ್ಯದ ನಾಯಕ ಅವರನ್ನು ಗೆಲ್ಲಿಸಿ ಪಾರ್ಲಿಮೆಂಟಿಗೆ ಕಳುಹಿಸಿ ಎಂದರು.

ಎನ್‍ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಕಾಂಗ್ರೆಸ್‍ನವರು ಬರಿ ಗ್ಯಾರಂಟಿಗಳ ಮೇಲೆ ರಾಜ್ಯದಲ್ಲಿ ರಾಜಕಾರಣ ಮಾಡುತ್ತ ಬಂದಿದ್ದಾರೆ. ಇವರಿಗೆ ಮತ ಕೇಳಲು ನೈತಿಕತೆ ಇಲ್ಲ. ಅಭಿವೃದ್ಧಿಯಲ್ಲಿ ಶೂನ್ಯ. ನಾನು ಈ ತಾಲೂಕಿನ 350ಕ್ಕೂ ಹೆಚ್ಚು ಪಂಚಾಯಿತಿಗಳಿಗೆ ಭೇಟಿ ನೀಡಿದ್ದೇನೆ.

ಈಗಾಗಲೇ ಕಾಂಗ್ರೆಸ್ ವಿರುದ್ಧದ ಕೂಗು ಹೊರಬಿದ್ದಿದೆ. ಹೆಣ್ಣು ಮಕ್ಕಳಿಗೆ 2 ಸಾವಿರ ಗ್ಯಾರಂಟಿ ಹಣ ಒಬ್ಬರಿಗೆ ಬಂದರೆ ಒಬ್ಬರಿಗೆ ಬರುತ್ತಿಲ್ಲ. ಈ ತಿಂಗಳು ಚುನಾವಣೆ ಇರುವುದರಿಂದ ಹಾಕಿದ್ದಾರೆ. ಇದನ್ನು ಅವರ ಅಪ್ಪನ ಮನೆಯಿಂದ ತಂದು ಕೊಡುತ್ಹಿಲ್ಲ ನಿಮ್ಮ ಗಂಡಂದಿರ ಜೇಬಿನಿಂದ ಕಿತ್ತು ಕೊಡುತ್ತಿದ್ದಾರೆ. ಇವರಿಗೆ ಮತ ಕೇಳಲು ಯಾವ ನೈತಿಕತೆ ಇದೆ ಹೇಳಿ ಎಂದರು.

ಶಾಸಕ ಎಚ್.ಕೆ.ಸುರೇಶ್, ಮಾಜಿ ಶಾಸಕ ಕೆ.ಎಸ್.ಲಿಂಗೇಶ್. ಜೆಡಿಎಸ್ ತಾಲೂಕು ಅಧ್ಯಕ್ಷ ಅನಂತ ಸುಬ್ಬರಾಯ, ಬಿಜೆಪಿ ತಾಲೂಕು ಅಧ್ಯಕ್ಷ ಆನಂದ್, ಜಿಪಂ ಮಾಜಿ ಅಧ್ಯಕ್ಷ ಚಂದ್ರೇಗೌಡ, ಮಾಜಿ ಸದಸ್ಯರಾದ ಪ್ರಕಾಶ್, ಲತಾ ದಿಲೀಪ್, ಲತಾ ಮಂಜೇಶ್ವರಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಹೆಚ್.ಮಹೇಶ್, ಗ್ರಾಪಂ ಮಾಜಿ ಅಧ್ಯಕ್ಷ ಲೋಕೇಶ್ ಸೇರಿದಂತೆ ಇತರರಿದ್ದರು.

RELATED ARTICLES

Latest News