Friday, November 22, 2024
Homeರಾಜ್ಯಮಂತ್ರಿಗಿರಿ ಉಳಿಸಿಕೊಳ್ಳಲು ಚುನಾವಣಾ ಕಣದಲ್ಲಿ ಬೆವರು ಹರಿಸುತ್ತಿರುವ ಸಚಿವರು

ಮಂತ್ರಿಗಿರಿ ಉಳಿಸಿಕೊಳ್ಳಲು ಚುನಾವಣಾ ಕಣದಲ್ಲಿ ಬೆವರು ಹರಿಸುತ್ತಿರುವ ಸಚಿವರು

ಬೆಂಗಳೂರು,ಏ.10- ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳಿಗಷ್ಟೇ ಅಲ್ಲ, ಸಂಪುಟದ ಹಲವು ಸಚಿವರಿಗೂ ರಾಜಕೀಯ ಭವಿಷ್ಯದ ಅಳಿವು-ಉಳಿವಿನ ಪ್ರಶ್ನೆಯ ಸವಾಲಾಗಿದೆ. ಗೆಲುವು ಅನಿವಾರ್ಯ ಎಂಬ ಕಾರಣಕ್ಕೆ ಅಭ್ಯರ್ಥಿಗಳೊಂದಿಗೆ ಸಚಿವರು, ಪ್ರಮುಖ ನಾಯಕರು ಹಗಲಿರುಳು ಬೆವರು ಸುರಿಸುತ್ತಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಹಲವಾರು ವಿಪ್ಲವಗಳು ನಡೆಯುವ ಸಾಧ್ಯತೆಯಿದೆ.ಈ ಹಿಂದೆ ವಿಧಾನಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದ ಸಂಧಾನದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಲೋಕಸಭಾ ಚುನಾವಣೆಯವರೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವುದಾಗಿ ಹೈಕಮಾಂಡ್ ಘೋಷಣೆ ಮಾಡಿತ್ತು. ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾಗುವ ಸಾಧ್ಯತೆಯಿದೆ. ಜೊತೆಯಲ್ಲಿ ಹಲವು ಸಚಿವರ ಸ್ಥಾನಪಲ್ಲಟವಾಗುವ ನಿರೀಕ್ಷೆಗಳಿವೆ.

ಸಚಿವ ಸಂಪುಟ ವಿಸ್ತರಣೆ ವೇಳೆ ಹಲವಾರು ಮಂದಿ ಅಸಮಾಧಾನಗೊಂಡು ಬಂಡಾಯದ ಕಹಳೆ ಊದಲಾರಂಭಿಸಿದರು. ಆ ವೇಳೆ ಅತೃಪ್ತರನ್ನು ಸಮಾಧಾನಪಡಿಸಿದ ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆವರೆಗೂ ಸಮಾಧಾನದಿಂದಿರಿ. ಸಂಪುಟ ಪುನರ್ ರಚನೆಯಾಗಲಿದೆ. ಎಲ್ಲರಿಗೂ ಅವಕಾಶ ಸಿಗಲಿದೆ ಎಂದು ಸಮಾಧಾನ ಪಡಿಸಿದರು.

ಕೆಲವು ಅತೃಪ್ತರಿಗೆ ಇತ್ತೀಚೆಗೆ ನಿಗಮಮಂಡಳಿಗಳಲ್ಲಿ ಅವಕಾಶ ಕಲ್ಪಿಸಿ ಸಮಾಧಾನಪಡಿಸುವ ಪ್ರಯತ್ನವೂ ನಡೆದಿತ್ತು. ಎಲ್ಲರಿಗೂ ಲೋಕಸಭಾ ಚುನಾವಣೆ ಬಳಿಕ ಅವಕಾಶ ದೊರೆಯಲಿದೆ ಎಂಬ ಭರವಸೆಯನ್ನು ನೀಡಲಾಗಿತ್ತು.

ಬಹಳಷ್ಟು ಮಂದಿ ಲೋಕಸಭಾ ಚುನಾವಣೆ ಮುಗಿಯುವುದನ್ನೇ ಕಾದು ಕುಳಿತಿದ್ದಾರೆ. ತಮಗೆ ಈ ಬಾರಿ ಅಧಿಕಾರ ಸಿಗಲಿದೆ ಎಂಬ ನಿರೀಕ್ಷೆಗಳೊಂದಿಗೆ ಚುನಾವಣೆಗಾಗಿ ಶ್ರಮಿಸುತ್ತಿದ್ದಾರೆ. ಅದರಲ್ಲೂ ಸಂಪುಟದ ಸಚಿವರುಗಳಿಗೆ ಆಯಾ ಜಿಲ್ಲಾ ಉಸ್ತುವಾರಿ ಇರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲೇಬೇಕು ಎಂಬ ಷರತ್ತು ವಿಸಲಾಗಿದೆ.

ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡರೆ ಅದಕ್ಕೆ ಉಸ್ತುವಾರಿ ಸಚಿವರು ಹೊಣೆಗಾರರು ಎಂಬ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಸಂಪುಟದ ಸಚಿವರು ತನು-ಮನ-ಧನದ ಜೊತೆಗೆ ಕಾಯಾವಾಚಾ ಕಾಂಗ್ರೆಸ್‍ನ ಗೆಲುವಿಗಾಗಿ ಬೆವರು ಸುರಿಸುತ್ತಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿಯಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ಹಿನ್ನಡೆ ಅನುಭವಿಸುವ ಆತಂಕವಿದೆ. ಅಂತಹ ಕ್ಷೇತ್ರಗಳಿಗೆ ಹೆಚ್ಚಿನ ಸಂಪನ್ಮೂಲ ಒದಗಿಸುವಂತೆ ಸಚಿವರು ಪಕ್ಷದ ವರಿಷ್ಠ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ.

ಬಹಳಷ್ಟು ಮಂದಿ ಸಚಿವರಿಗೆ ಆರ್ಥಿಕವಾಗಿ ಸಂಪತ್ಭರಿತವಾದ ಇಲಾಖೆಗಳು ದೊರೆತಿಲ್ಲ ಎಂಬ ಅಸಮಾಧಾನಗಳಿವೆ. ಅಂತವರು ಲೋಕಸಭಾ ಚುನಾವಣೆಯಲ್ಲಿ ತಮಗೆ ಸಹಾಯ ಮಾಡಿ ಎಂದು ವರಿಷ್ಠ ನಾಯಕರ ಬಳಿ ಹೆಚ್ಚಿನ ಬೇಡಿಕೆ ಇಡುತ್ತಿರುವುದು ಕಂಡುಬಂದಿದೆ.
ಈ ಮೊದಲು ಸಚಿವ ಕೆ.ಎಚ್.ಮುನಿಯಪ್ಪ ಎರಡೂವರೆ ವರ್ಷದ ಬಳಿಕ ಸಚಿವರು ಬೇರೆಯವರಿಗೆ ಅವಕಾಶ ಮಾಡಿಕೊಡಲು ಹುದ್ದೆ ತ್ಯಾಗ ಮಾಡಬೇಕು ಎಂದು ಈ ಹಿಂದೆ ಬಹಿರಂಗವಾಗಿ ಹೇಳಿದ್ದರು.

ಆ ವೇಳೆ ಅವರಿಗೆ ಕೋಲಾರ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ರ್ಪಸುವ, ರಾಷ್ಟ್ರ ರಾಜಕಾರಣಕ್ಕೆ ತೆರಳುವ ಇರಾದೆಯಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮುನಿಯಪ್ಪ ಅಥವಾ ಅವರ ಕುಟುಂಬಕ್ಕೆ ಲೋಕಸಭೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿಲ್ಲ. ಈಗಲೂ ಅವರು ಸಚಿವ ಸ್ಥಾನ ತ್ಯಾಗದ ಇರಾದೆಯಲ್ಲಿಯೇ ಇದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ಬಹಳಷ್ಟು ಮಂದಿ ಸಚಿವರು ಅಭಿವೃದ್ಧಿಗಿಂತಲೂ ವಿವಾದಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿದ್ದಾರೆ.

ಅಂತವರಿಗೆ ಲೋಕಸಭಾ ಚುನಾವಣೆ ಬಳಿಕ ಕೋಕ್ ಸಿಗುವ ಸಾಧ್ಯತೆಯಿದೆ. ಹೊಸಬರಿಗೆ ಅವಕಾಶ ಕೊಡುವುದು ಮತ್ತು ಸಂಪುಟದಲ್ಲಿ ಸುದೀರ್ಘ ಸೇವೆ ಸಲ್ಲಿಸಿದವರನ್ನು ಪಕ್ಷಸಂಘಟನೆಗೆ ತೊಡಗಿಸಿಕೊಂಡು ಮುಂದಿನ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ ಮಾಡಿರುವುದು ಕಾಂಗ್ರೆಸ್ ನಾಯಕರ ಅಭಿಲಾಷೆ ಎಂದು ಹೇಳಲಾಗುತ್ತಿದೆ.

RELATED ARTICLES

Latest News