Friday, May 24, 2024
Homeರಾಜ್ಯಪಾಕ್ ಪರ ಘೋಷಣೆ : ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟ ಸರ್ಕಾರದ ನಡೆ

ಪಾಕ್ ಪರ ಘೋಷಣೆ : ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟ ಸರ್ಕಾರದ ನಡೆ

ಬೆಂಗಳೂರು,ಮಾ.1- ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯಸರ್ಕಾರದ ನಿಧಾನಗತಿಯ ಕ್ರಮಗಳು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳನ್ನು ಮೂಡಿಸಿದ್ದು, ಚುನಾವಣಾ ಸಂದರ್ಭದಲ್ಲಿ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಘಟನೆ ನಡೆದು 36 ಗಂಟೆಗಳು ಕಳೆದರೂ ಈವರೆಗೂ ಯಾರನ್ನೂ ಬಂಧಿಸದೇ ಇರುವುದು ಪ್ರಶ್ನಾರ್ಹವಾಗಿದೆ. 12 ಮಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ತನಿಖೆಯಲ್ಲಿ ಸತ್ಯಾಂಶ ಪತ್ತೆಯಾಗಿದ್ದರೆ ಸರ್ಕಾರ ಅದನ್ನಾದರೂ ಧೈರ್ಯವಾಗಿ ಪ್ರಕಟಿಸದೆ ಮೀನಾಮೇಷ ಎಣಿಸುತ್ತಿರುವುದು ಅಚ್ಚರಿ ಮೂಡಿಸಿದೆ.

ವಿಧಾನಸೌಧದಲ್ಲಿ ನಡೆದ ಘಟನೆಯಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಲಾಗಿದೆಯೇ ಎಂಬ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ದೃಶ್ಯಾವಳಿಗಳನ್ನು ಎಫ್‍ಎಸ್‍ಎಲ್‍ಗೆ ರವಾನಿಸಲಾಗಿತ್ತು. ಅದರಲ್ಲಿ ಕೆಲವು ವಿಡಿಯೋಗಳ ಎಫ್‍ಎಸ್‍ಎಲ್ ವರದಿ ಬಂದಿದೆಯಾದರೂ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಮತ್ತಷ್ಟು ವಿಡಿಯೋಗಳು ಹಾಗೂ ಧ್ವನಿ ಮಾದರಿಗಳನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳಲಾಗುತ್ತಿದೆ.

ಬಿರುಸುಗೊಂಡ ರಾಜಕೀಯ ವಾಗ್ವಾದ: ರಾಜ್ಯ ಸರ್ಕಾರದ ನಿಧಾನಗತಿಯ ಧೋರಣೆಯನ್ನೇ ಆಧಾರವಾಗಿಟ್ಟುಕೊಂಡು ಬಿಜೆಪಿ ಹೆಜ್ಜೆ ಹೆಜ್ಜೆಗೂ ಕಾಂಗ್ರೆಸ್ ಸರ್ಕಾರ ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿದೆ ಎಂದು ಟೀಕೆ ಮಾಡುತ್ತಿದೆ. ಭಯೋತ್ಪಾದಕರು ವಿಧಾನಸೌಧದ ಆವರಣಕ್ಕೇ ಬರಲು ಬಿಡಲಾಗಿದೆ. ಇದೇ ರೀತಿ ಮುಂದುವರೆದರೆ ದೇಶದ ಭದ್ರತೆಗೆ ಅಪಾಯ ಬಂದೊದಗಲಿದೆ ಎಂದು ಸಾರ್ವಜನಿಕವಾಗಿ ವ್ಯಾಪಕ ಪ್ರಚಾರ ಮಾಡುತ್ತಿದೆ. ಬಿಜೆಪಿಯ ಟೀಕೆಗಳಿಗೆ ಕಾಂಗ್ರೆಸ್‍ನ ಪ್ರತಿಕ್ರಿಯೆಗಳು ನೀರಸವಾಗಿವೆ. ತನ್ನ ಹಳೆಯ ಸಾಂಪ್ರದಾಯಿಕ ಶೈಲಿಯಲ್ಲಿ ಕಾಂಗ್ರೆಸ್, ನಾವು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ದೇಶದ ಪ್ರೇಮದ ಬಗ್ಗೆ ನಮಗೆ ಪಾಠ ಕಲಿಸಬೇಕಿಲ್ಲ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗಿದ್ದೇ ನಿಜವಾಗಿದ್ದರೆ, ಆರೋಪಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದೆಲ್ಲಾ ಸಮರ್ಥನೆ ಗಳನ್ನು ನೀಡುತ್ತಿದೆ.

ಸಚಿವರು, ಮುಖ್ಯಮಂತ್ರಿ ಹೇಳಿಕೆಗಳು ಬಿಜೆಪಿಯ ಆಕ್ರಮಣಕಾರಿ ವಾಗ್ದಾಳಿಗಳ ಮುಂದೆ ಸಪ್ಪೆ ಎನಿಸಲಾರಂಭಿಸಿವೆ. ಜನಮಾನಸದಲ್ಲಿ ಕಾಂಗ್ರೆಸ್ ಸರ್ಕಾರದ ನಡಾವಳಿಯ ಮೇಲೆ ಅನುಮಾನಗಳು ಗಟ್ಟಿಗೊಳ್ಳುತ್ತಿವೆ. ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ವ್ಯವಸ್ಥಿತ ವಾಗಿ ಮುಚ್ಚಿ ಹಾಕುತ್ತಿದೆ ಎಂದು ಬಿಜೆಪಿ ಈಗಾಗಲೇ ಜನರನ್ನು ನಂಬಿಸಿದೆ. ಒಂದು ವೇಳೆ ಪ್ರಕರಣದ ನೈಜತೆ ಹೊರಬಂದರೂ ಕೂಡ ಜನ ಅದನ್ನು ಅನುಮಾನದ ದೃಷ್ಟಿಯಿಂದಲೇ ನೋಡುವಂತಾಗಿದೆ.

ಎಫ್‍ಎಸ್‍ಎಲ್ ವರದಿಯಲ್ಲಿ ಈ ರೀತಿ ಘಟನೆ ನಡೆದಿಲ್ಲ ಎಂದು ವರದಿ ಬಂದರೆ ಅದನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಮತ್ತಷ್ಟು ವಾಗ್ದಾಳಿಗೆ ಇಳಿಯುವ ಸಾಧ್ಯತೆಯಿದೆ. ಪ್ರಕರಣ ನಡೆದು 36 ಘಂಟೆ ಕಳೆದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಹಂತಹಂತವಾಗಿ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ.
ಪ್ರಯೋಗಾಲಯ ಸೇರಿದಂತೆ ಎಲ್ಲಾ ಹಂತ ದಲ್ಲೂ ಪ್ರಭಾವ ಬಳಸಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿ ಕೊಳ್ಳಲಾಗಿದೆ ಎಂಬ ಆರೋಪಗಳು ಬಿಜೆಪಿಯಿಂದ ತೂರಿಬರುವ ಸಾಧ್ಯತೆಯಿದೆ.
ಸೂಕ್ಷ್ಮವಾಗಿರುವ ಇಂತಹ ಬಹಳಷ್ಟು ಪ್ರಕರಣಗಳಲ್ಲಿ ಮೊದಲು ಆರೋಪಿಗಳನ್ನು ಬಂಧಿಸಿ ಅನಂತರ ವಿಚಾರಣೆ ನಡೆಸುವುದು ಕಂಡುಬರುತ್ತದೆ. ಆದರೆ ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದರೆ ಅಮಾಯಕರ ವಿರುದ್ಧ ಕ್ರಮ ಕೈಗೊಂಡಂತಾಗುತ್ತದೆ ಎಂಬ ಧೋರಣೆಯನ್ನು ಸರ್ಕಾರ ಅನುಸರಿಸುತ್ತಿದೆ. ಇದು ಅಲ್ಪಸಂಖ್ಯಾತರ ತುಷ್ಟೀಕರಣ ಎಂದು ಬಿಜೆಪಿ ಟೀಕಿಸುತ್ತಿದೆ.

ಸೈದ್ಧಾಂತಿಕ ರಾಜಕೀಯ ಕುರಿತಂತೆ ಜನಸಾಮಾನ್ಯ ರಲ್ಲಿ ಈಗಾಗಲೇ ಸ್ಪಷ್ಟ ವಿಭಜನೆ ಕಂಡುಬಂದಿದೆ. ಕಾಂಗ್ರೆಸ್ ಬೆಂಬಲಿತ ಸೈದ್ಧಾಂತಿಕ ನಿಲುವನ್ನು ಹೊಂದಿರುವವರು ಬಿಜೆಪಿಯ ಧೋರಣೆಗಳನ್ನು ಟೀಕಿಸುವುದು ಒಂದೆಡೆಯಾದರೆ, ಬಿಜೆಪಿ ಮತ್ತು ಅದರ ಬೆಂಬಲಿತ ಸಿದ್ಧಾಂತದ ಅನುಯಾಯಿಗಳು ಕಾಂಗ್ರೆಸ್ ಪಕ್ಷ ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿದೆ ಎಂದು ನಂಬುವಂತಹ ವಾತಾವರಣ ನಿರ್ಮಾಣವಾಗುತ್ತಿದೆ.
ಸೈದ್ಧಾಂತಿಕ ತಟಸ್ಥತೆ ಹೊಂದಿರುವವರಿಗೆ ರಾಜ್ಯಸರ್ಕಾರದ ನಡವಳಿಕೆಗಳು ಗೊಂದಲ ಮೂಡಿಸುತ್ತಿದ್ದು, ಉದ್ದೇಶಪೂರ್ವಕವಾಗಿಯೇ ಸರ್ಕಾರ ತನಿಖೆಯನ್ನು ವಿಳಂಬ ಮಾಡು ತ್ತಿದೆಯೇ? ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿ ದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ.

ವಿಧಾನಮಂಡಲದ ಅವೇಶನ ನಡೆಯುತ್ತಿ ದ್ದರೂ ಸರ್ಕಾರ ಘಟನೆಗೆ ಸ್ಪಷ್ಟತೆಯ ತಾರ್ಕಿಕ ಅಂತ್ಯ ನೀಡುವಲ್ಲಿ ವೈಫಲ್ಯ ಅನುಭವಿಸಿದೆ. ದಿನೇದಿನೇ ಇದೇ ಘಟನೆಯನ್ನು ಆಧಾರ ವಾಗಿಟ್ಟುಕೊಂಡು ಹಿಂದಿನ ಹಲವು ಪ್ರಕರಣಗಳನ್ನು ಜೊತೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ವಿರುದ್ಧ ವ್ಯಾಪಕ ಟೀಕೆಗಳು ಕಂಡುಬರುತ್ತಿವೆ. ಎಫ್‍ಎಸ್‍ಎಲ್ ಈವರೆಗೂ ನೀಡಿರುವ ವರದಿಯನ್ನು ಬಹಿರಂಗಪಡಿಸಲೂ ಕೂಡ ಸರ್ಕಾರ ಹಿಂದೇಟು ಹಾಕುತ್ತಿರುವುದು ಮತ್ತಷ್ಟು ಅನುಮಾನಗಳಿಗೆ ಪುಷ್ಟಿ ನೀಡಿದಂತಾಗಿದೆ.

RELATED ARTICLES

Latest News