Sunday, April 28, 2024
Homeಇದೀಗ ಬಂದ ಸುದ್ದಿವೀಲಿಂಗ್ ಮಾಡಿದರೆ ವಾಹನ ಸೀಜ್, ಡ್ರೈವಿಂಗ್ ಲೈಸೆನ್ಸ್ ರದ್ದು

ವೀಲಿಂಗ್ ಮಾಡಿದರೆ ವಾಹನ ಸೀಜ್, ಡ್ರೈವಿಂಗ್ ಲೈಸೆನ್ಸ್ ರದ್ದು

ಬೆಂಗಳೂರು,ಮಾ.1- ರಸ್ತೆಗಳಲ್ಲಿ ವೀಲಿಂಗ್ ಮಾಡುವವರೇ ಎಚ್ಚರ… ಇನ್ನು ಮುಂದೆ ನೀವು ಎಲ್ಲೆಂದರಲ್ಲಿ ವೀಲಿಂಗ್ ಮಾಡಿದರೆ ಪೊಲೀಸರು ಎಫ್‍ಐಆರ್ ದಾಖಲಿಸಿ ಲೈಸೆನ್ಸ್ ರದ್ದು ಮಾಡುವುದರ ಜೊತೆಗೆ ನಿಮ್ಮ ವಾಹನಗಳನ್ನು ಜಪ್ತಿ ಮಾಡಲಿದ್ದಾರೆ ಇರಲಿ ಎಚ್ಚರ..! ಇತ್ತೀಚೆಗೆ ಜನನಿಬಿಡ ರಸ್ತೆಗಳಲ್ಲಿ ವೀಲಿಂಗ್ ಮಾಡುತ್ತಾ ಬೇರೆ ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಸಂಚಾರಿ ಪೊಲೀಸರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಫೆಬ್ರವರಿ 21 ರಿಂದ 29ರವರೆಗೆ ನಗರದಲ್ಲಿ ಸಂಚಾರಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 91 ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದುವರೆಗೂ 91 ಪ್ರಕರಣಗಳ ಪೈಕಿ 74 ವಾಹನಗಳನ್ನು ಜಪ್ತಿ ಮಾಡಿ 59 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ 24 ಮಂದಿ ಅಪ್ರಾಪ್ತರಾಗಿರುವುದು ವಿಶೇಷವಾಗಿದೆ. ವೀಲಿಂಗ್ ಮಾಡುತ್ತಿದ್ದ ಅಪ್ರಾಪ್ತರ 23 ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದು 18 ಮಂದಿಯ ಲೈಸೆನ್ಸ್‍ಗಳನ್ನು ಅಮಾನತುಪಡಿಸಲಾಗಿದೆ. ಇದರ ಜೊತೆಗೆ 38 ವಾಹನಗಳ ಆರ್‍ಸಿ ರದ್ದಿಗೆ ಆರ್‍ಟಿಒ ಕಚೇರಿಗೆ ರವಾನಿಸಲಾಗಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹದೇವಪುರದಲ್ಲೂ ಕಾರ್ಯಾಚರಣೆ:
ಫೆಬ್ರವರಿ 29 ರಂದು ಮಹದೇವಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿಶೇಷ ಕಾರ್ಯಾಚರಣೆ ಸಂದರ್ಭದಲ್ಲಿ ಬಿ ನಾರಾಯಣಪುರ ಹೊರವರ್ತುಲ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿ ಸವಾರನ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಕುಲ್ದೀಪ್‍ಕುಮಾರ್ ಆರ್.ಜೈನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ದಂಡ ಪಾವತಿಗೂ ಬಂತು ಕ್ಯೂಆರ್ ಕೋಡ್

ಬೆಂಗಳೂರು, ಮಾ.1- ಇಂದಿನಿಂದ ಸಂಚಾರ ನಿಯಮ ಉಲ್ಲಂಘನೆ ವಾಹನಗಳ ಮಾಲೀಕರಿಗೆ ಕಳುಹಿಸುವ 133 ನೊಟೀಸ್‍ನ ಬಲಭಾಗದಲ್ಲಿ ಕ್ಯೂಆರ್ ಕೋಡ್‍ಗಳನ್ನು ಕಳುಹಿಸಲಾಗುತ್ತದೆ. ನಗರ ಸಂಚಾರ ವಿಭಾಗದಲ್ಲಿ ಸಂಪರ್ಕ ರಹಿತ ನಿಯಮ ಜಾರಿಯಡಿ ದಾಖಲು ಮಾಡುವ ನಿಯಮ ಉಲ್ಲಂಘನಾ ಪ್ರಕರಣಗಳಿಗೆ ಆಟೋಮೇಷನ್ ಸೆಂಟರ್ ವಿಭಾಗದಿಂದ ನಿಯಮ ಉಲ್ಲಂಘನೆ ಮಾಡುವ ವಾಹನ ಮಾಲೀಕರಿಗೆ ಮೋಟಾರು ವಾಹನ ಕಾಯ್ದೆಯಡಿ ನೊಟೀಸ್‍ಗಳನ್ನು ಮುದ್ರಿಸಿ ಅಂಚೆ ಮುಖಾಂತರ ಕಳಿಸಲಾಗುತ್ತದೆ.

ಈ ಕ್ಯೂಆರ್ ಕೋಡ್ ಮುಖಾಂತರ ನಿಯಮ ಉಲ್ಲಂಘನೆಯ ವಿಧ, ಸ್ಥಳ, ದಿನಾಂಕ, ಸಮಯ ಹಾಗೂ ದಂಡದ ಮೊತ್ತದ ವಿವರಗಳ ಜೊತೆಗೆ ಬಹುಮುಖ್ಯವಾಗಿ ಸಾಕ್ಷ್ಯಾಧಾರಿತ ಛಾಯಾಚಿತ್ರವನ್ನು ಸಹ ವೀಕ್ಷಿಸಬಹುದಾಗಿದೆ.
ಉಲ್ಲಂಘನೆಯ ದಂಡದ ಮೊತ್ತವನ್ನು ಆನ್‍ಲೈನ್‍ನಲ್ಲಿ ಪಾವತಿಸಲು ಸಾರ್ವಜನಿಕರಿಗೆ ಅನುವು ಮಾಡಿಕೊಡಲು ಅದೇ ಕ್ಯೂಆರ್ ಕೋಡ್‍ನಲ್ಲಿ ಪಾವತಿಯ ಲಿಂಕ್‍ನ್ನು ಸಹ ಒದಗಿಸಲಾಗಿರುತ್ತದೆ.

ನಿಯಮ ಉಲ್ಲಂಘನೆಗಳಿಗೆ ಸಂಬಂಧಪಟ್ಟ ಯಾವುದೇ ದೂರು, ವಿವಾದಗಳಿದ್ದಲ್ಲಿ btp.gov.in ಲಾಗಿನ್ ಆಗುವ ಮೂಲಕ ಅಥವಾ ಕೆಎಸ್‍ಪಿ ಆ್ಯಪ್‍ನ್ನು ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಉಲ್ಲಂಘನೆ ವಿವರಗಳನ್ನು ವೀಕ್ಷಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ. ಅಥವಾ ದಂಡ ಪಾವತಿಸಬಹುದಾಗಿದೆ.
2021ರ ನಂತರದ ನಿಯಮ ಉಲ್ಲಂಘನೆಗಳಿಗೆ ಮಾತ್ರ ಸಾಕ್ಷ್ಯಾಧಾರಿತ ಛಾಯಾಚಿತ್ರಗಳು ಅದರಲ್ಲಿ ಲಭ್ಯವಿರುತ್ತದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಅನುಚೇತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News