ಬೆಂಗಳೂರು, ಮೇ 31- ವಾಲ್ಮೀಕಿ ಅಭಿವೃದ್ಧಿ ನಿಗಮದ ಬೃಹತ್ ಹಗರಣದಲ್ಲಿ ಸಚಿವ ನಾಗೇಂದ್ರ ಅವರ ತಲೆದಂಡವನ್ನು ತಪ್ಪಿಸಲು ನಾನಾ ರೀತಿಯ ಸರ್ಕಸ್‌ಗಳು ನಡೆಯುತ್ತಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ 162 ಕೋಟಿ ರೂ.ಗಳ ಹಗರಣವನ್ನು ಕೆಣಕಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 187 ಕೋಟಿ ರೂ.ಗಳು ನಿಗಮದ ಉಪಖಾತೆಗಳಿಗೆ ವರ್ಗಾವಣೆಯಾಗಿರುವಂತೆ ಅಲ್ಲಿಂದ ಬೇರೆ ಬೇರೆ ಖಾತೆಗಳಿಗೂ ಸಂದಾಯವಾಗಿದೆ ಎಂಬ ಆರೋಪಗಳಿದ್ದು, ಸಂಪುಟದಲ್ಲಿ ಬಹಳಷ್ಟು ಮಂದಿ ಈ ಹಗರಣದ ಬಗ್ಗೆ ಸಿಡಿಮಿಡಿಗೊಂಡಿದ್ದಾರೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂಬ ಚರ್ಚೆಗಳು ತೀವ್ರವಾಗಿ ನಡೆಯುತ್ತಿವೆ.
ಬಿಜೆಪಿ ಸಚಿವ ನಾಗೇಂದ್ರ ಅವರ ತಲೆದಂಡಕ್ಕೆ ಪಟ್ಟು ಹಿಡಿದು ಜೂನ್ 6 ರವರೆಗೂ ಗಡುವು ನೀಡಿದೆ. ಕಾಂಗ್ರೆಸ್‌ನ ಒಂದು ಪಾಳಯ ಸಚಿವ ನಾಗೇಂದ್ರ ಅವರ ತಲೆದಂಡವಾಗಲಿ ಎಂದು ಹೇಳುತ್ತಿದೆ. ಹೈಕಮಾಂಡ್ ಮಟ್ಟದಲ್ಲೂ ಇದಕ್ಕೆ ಸಕಾರಾತಕ ಸೂಚನೆಗಳು ಬಂದಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಪ್ರತ್ಯೇಕ ಸಭೆ ನಡೆಸಿ ತನಿಖೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ ಏಕಾಏಕಿ ನಾಗೇಂದ್ರ ಅವರಿಂದ ರಾಜೀನಾಮೆ ಪಡೆದುಕೊಂಡರೆ ಸರ್ಕಾರ ಮತ್ತಷ್ಟು ಮುಜುಗರಕ್ಕೊಳಗಾಗಬೇಕಾಗುತ್ತದೆ, ಹಗರಣವನ್ನು ಒಪ್ಪಿಕೊಂಡಂತಾಗುತ್ತದೆ ಎಂಬ ಗೊಂದಲಗಳು ಕಾಂಗ್ರೆಸ್ಸಿಗರನ್ನು ಕಾಡುತ್ತಿವೆ.
ವಿರೋಧ ಪಕ್ಷ ಬಿಜೆಪಿ ಕೂಡ ಈ ಹಗರಣದಲ್ಲಿ ನಿರೀಕ್ಷಿತ ಮಟ್ಟ ಧ್ವನಿಯೇರಿಸದೆ ಮೃದು ಧೋರಣೆಯಿಂದ ಪ್ರತಿಕ್ರಿಯಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಮೂಲ ಕಾರಣ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಯ ನಿಗಮವೊಂದರಲ್ಲಿ ನಡೆದಿರುವ 162 ಕೋಟಿ ರೂ.ಗಳ ಹಗರಣ ಎಂದು ಹೇಳಲಾಗುತ್ತಿದೆ.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಬಿಜೆಪಿಯ ಹಿಂದಿನ ಸರ್ಕಾರದ ಹಲವು ಹಗರಣಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿತ್ತು. ಸರ್ಕಾರ ರಚನೆಯಾದ ಮೇಲೆ ಇದ್ದಕ್ಕಿದ್ದಂತೆ ಕಾಂಗ್ರೆಸ್ ಸರ್ಕಾರವು ನಿಧಾನಗತಿಯನ್ನು ಅನುಸರಿಸುತ್ತಿದೆ. ಕೆಲವು ಗಂಭೀರ ಸ್ವರೂಪದ ಹಗರಣಗಳ ತನಿಖೆಗೆ ಎಸ್‌ಐಟಿ ಹಾಗೂ ನ್ಯಾಯಾಂಗ ತನಿಖಾ ಸಮಿತಿಗಳನ್ನು ರಚಿಸಿದ್ದು ಬಿಟ್ಟರೆ ಉಳಿದಂತೆ ಯಥಾರೀತಿಯಲ್ಲಿ ನಡೆದುಕೊಂಡು ಹೋಗಲಿ ಎಂಬ ಧೋರಣೆಯಲ್ಲಿದ್ದಂತಿದೆ.
ಈಗ ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ಅಧೀಕ್ಷಕ ಚಂದ್ರಶೇಖರನ್ ಅವರ ಆತಹತ್ಯೆಯಿಂದಾಗಿ 187 ಕೋಟಿ ರೂ.ಗಳ ಹಗರಣ ಬೆಳಕಿಗೆ ಬಂದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ರೀತಿಯ ಹಗರಣಗಳು ಹೊಸದಲ್ಲ. ಈ ಹಿಂದೆ ಕೂಡ ತುಂಬಾ ನಡೆದಿವೆ ಎಂಬ ಚರ್ಚೆಗಳು ನಡೆಯುತ್ತಿವೆ.
ಸಮುದಾಯವಾರು ಅಭಿವೃದ್ಧಿ ನಿಗಮಗಳಲ್ಲಿ ಅಕ್ರಮ ಹಣ ವರ್ಗಾವಣೆ ಸಾಮಾನ್ಯ ಎಂಬ ಧೋರಣೆ ಮನೆ ಮಾಡಿದೆ. ಈ ಹಿಂದೆ ಬಿಜೆಪಿ ಅವಧಿಯಲ್ಲಿ ನಿಗಮವೊಂದರಿಂದ 162 ಕೋಟಿ ರೂ.ಗಳನ್ನು ವಿವಿಧ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ. ಅವುಗಳಲ್ಲಿ ಬಹುತೇಕ ಸಂಸ್ಥೆಗಳು ನಕಲಿ ಎಂದು ತಿಳಿದುಬಂದಿದೆ.
ವರ್ಗಾವಣೆಯಾದ ಹಣವನ್ನು ಹತ್ತು ನಿಮಿಷದಲ್ಲೇ ಬಿಜೆಪಿ ಶಾಸಕರೊಬ್ಬರ ಪುತ್ರನ ಹೆಸರಿನಲ್ಲಿದ್ದ ಟ್ರಸ್ಟ್‌ಗೆ ಸಂದಾಯ ಮಾಡಲಾಗಿತ್ತು. ಆರು ತಿಂಗಳ ಬಳಿಕ ಆ ಟ್ರಸ್ಟ್ ಕೂಡ ಪರಿಸಮಾಪ್ತಿಯಾಗಿದೆ, ಹಣ ಎಲ್ಲಿಹೋಗಿದೆ? ಎಂಬ ಮಾಹಿತಿಯೇ ಇಲ್ಲ ಎಂದು ತಿಳಿದುಬಂದಿದೆ.
ಈ ಕುರಿತು ಸಿಐಡಿ ತನಿಖೆ ನಡೆಯುತ್ತಿದ್ದು, ಹಲವು ವರ್ಷ ಕಳೆದರೂ ತಾರ್ಕಿಕ ಅಂತ್ಯ ಕಂಡಿಲ್ಲ ಎಂದು ಹೇಳಲಾಗಿದೆ.
ಹಿಂದಿನ ಹಗರಣದ ದಾಖಲಾತಿಗಳನ್ನು ಸಜ್ಜು ಮಾಡಿಟ್ಟುಕೊಂಡಿರುವ ಕಾಂಗ್ರೆಸ್ಸಿಗರು ಬಿಜೆಪಿಯ ಪ್ರತಿ ಟೀಕೆಗಳಿಗಾಗಿ ಕಾದು ಕುಳಿತಿದ್ದಾರೆ. ವಾಲೀಕಿ ಅಭಿವೃದ್ಧಿ ನಿಗಮದ ವಿಚಾರದಲ್ಲಿ ಬಿಜೆಪಿ ರೊಚ್ಚಿಗೆದ್ದು ಸಂಘರ್ಷದ ವಾತಾವರಣಕ್ಕಿಳಿದರೆ ಆಗ ಬಿಜೆಪಿ ಅವಧಿಯಲ್ಲಾದ ಹಗರಣಗಳನ್ನು ಒಂದೊಂದಾಗಿ ಬಯಲಿಗೆ ತಂದು ಎದುರೇಟು ನೀಡಲು ತಯಾರಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.