ಬೆಂಗಳೂರು,ಮೇ19– ನಾಳೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ವಿಜಯನಗರದಲ್ಲಿ ಸರ್ಕಾರ ಸಂಭ್ರಮಾಚರಣೆ ಹಮ್ಮಿಕೊಂಡಿದೆ. ಆದರೆ ಎರಡು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆಯೇ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಆದರೆ ಸರ್ಕಾರದ ವಿರುದ್ಧ ಕೇಳಿಬಂದ ಆರೋಪಗಳು ಹಲವಾರು.
ಆರೋಪಗಳು:
ವಾಲ್ಮೀಕಿ ಹಗರಣ ಮೊದಲ ವಿಕೆಟ್ ಪತನ
ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬಂದ ಮೊದಲ ಹಗರಣ ಇದಾಗಿದೆ. ವಾಲೀಕಿ ನಿಗಮದಲ್ಲಿ ನಡೆದ 187 ಕೋಟಿ ಭ್ರಷ್ಟಾಚಾರ ಆರೋಪ, ಸರ್ಕಾರದ ವಿರುದ್ದ ವಿಪಕ್ಷಗಳಿಗೆ ಸಿಕ್ಕ ಮೊದಲ ಅಸ್ತ್ರವಾಗಿತ್ತು. ಈ ಹಗರಣದಲ್ಲಿ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕಾಗಿ ಬಂತು. ಹಗರಣದ ತನಿಖೆ ಎಸ್‌ಐಟಿ, ಸಿಬಿಐ ಹಾಗೂ ಇಡಿ ವರೆಗೆಗೂ ತಲುಪಿದೆ. ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೂ ಆಗ್ರಹಿಸಿದ್ದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಆರೋಪ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದ ಹಗರಣದ ಆರೋಪ ಇದಾಗಿದೆ. ಮೈಸೂರು ಮುಡಾದಲ್ಲಿ ಕಾನೂನು ಬಾಹಿರವಾಗಿ ಸಿಎಂ ಸಿದ್ದರಾಮಯ್ಯ ಅವರು ಸೈಟ್ ಪಡೆದುಕೊಂಡಿದ್ದರು. ಇದರ ವಿರುದ್ಧ ಪಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅನುಮತಿ ನೀಡಿದ್ದರು. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ತಮ ಪಾತ್ರ ನಿರಾಕರಣೆ ಮಾಡಿದರೂ ಬಿಜೆಪಿ ಇದರ ವಿರುದ್ಧ ದೊಡ್ಡ ಹೋರಾಟವನ್ನೇ ನಡೆಸಿತ್ತು. ಬೆಂಗಳೂರು- ಮೈಸೂರು ಪಾದಯಾತ್ರೆ ಹಮಿಕೊಂಡು ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿತ್ತು.
ಅಬಕಾರಿ ಹಗರಣದಲ್ಲಿ ಆರ್.ಬಿ.ತಿಮಾಪೂರ
ಅಬಕಾರಿ ಇಲಾಖೆಯಲ್ಲಿ 900 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮಾಪುರ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದರು.
ಅಬಕಾರಿ ಸಚಿವ ತಿಮಾಪುರ ಅವರು ವಾರಕ್ಕೆ 18 ಕೋಟಿ ರೂ. ವಸೂಲಿ ಮಾಡುತ್ತಿದ್ದಾರೆ. ಅಂದರೆ ವರ್ಷಕ್ಕೆ ಸುಮಾರು 900 ಕೋಟಿ ರೂ. ಲಂಚ ಪಡೆಯಲಾಗುತ್ತಿದೆ. ಪ್ರತಿ ಹುದ್ದೆಯ ಅಧಿಕಾರಿಗಳಿಗೆ ಎಷ್ಟು ಲಂಚ ನೀಡಲಾಗುತ್ತಿದೆ ಎಂದು ಮದ್ಯ ಮಾರಾಟಗಾರರ ಸಂಘ ಪತ್ರದಲ್ಲಿ ಆರೋಪ ಮಾಡಿತ್ತು. ಅಲ್ಲದೆ ಮುಖ್ಯಮಂತ್ರಿ ಕಚೇರಿಯ ಅಧಿಕಾರಿ, ಪಿಎ, ಪಿಎಸ್ ಪಡೆಯುತ್ತಿರುವ ಲಂಚದ ಬಗ್ಗೆಯೂ ವಿವರವಿದೆ ಎಂದು ಅಶೋಕ್ ಆರೋಪ ಮಾಡಿದ್ದರು.
ಗುತ್ತಿಗೆದಾರರ ಸಂಘದಿಂದ 60% ಕಮಿಷನ್
ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಕಮಿಷನ್ ಆರೋಪವನ್ನು ಮಾಡಿತ್ತು. ಬಾಕಿ ಪಾವತಿ ಬಿಡುಗಡೆ ಮಾಡಲು ಇಲಾಖೆಗಳು ಹಿಂದೇಟು ಹಾಕುತ್ತಿವೆ. ಇದಕ್ಕೆ ಬದಲಾಗಿ ಲಂಚಕ್ಕೆ ಬೇಡಿಕೆ ಇಡುತ್ತಿವೆ ಎಂದು ಆರೋಪ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪತ್ರವನ್ನು ಬರೆದಿದ್ದರು. ಅಲ್ಲದೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ ಆರೋಪವನ್ನು ಸರ್ಕಾರ ನಿರಾಕರಿಸಿದೆ.
ಸಾರ್ಟ್ ಮೀಟರ್ ಹಗರಣ
ಬೆಸ್ಕಾಂ ಮತ್ತು ಎಸ್ಕಾಂಗಳ ಸಾರ್ಟ್ ಮೀಟರ್ ಟೆಂಡರ್‌ನಲ್ಲಿ ಸುಮಾರು 15,568 ಕೋಟಿ ರೂ. ಬೃಹತ್ ಪ್ರಮಾಣದ ಅವ್ಯವಹಾರ ನಡೆದಿದೆ ಎಂಬ ಆರೋಪವಿದೆ. ಇಂಧನ ಇಲಾಖೆಯ ವಿರುದ್ಧ ಈ ಆರೋಪ ಕೇಳಿಬಂದಿದೆ. ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಅವರು ಈ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದರು. ಇದೊಂದು ಹಗಲು ದರೋಡೆಯಾಗಿದ್ದು, ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದರು. ಸಾರ್ಟ್ ಮೀಟರ್ ಕಡ್ಡಾಯ ಮಾಡಲು ಕಾನೂನಿಲ್ಲದೇ ಅದನ್ನು ಕಡ್ಡಾಯ ಮಾಡುತ್ತಿದ್ದಾರೆ. ಬ್ಲ್ಯಾಕ್ ಲಿಸ್ಟ್ ಆದವರಿಗೆ ಕೊಡಲಾಗಿದೆ ಎಂದು ದೂರಿದ್ದರು. ಆದರೆ ಇಂಧನ ಸಚಿವ ಕೆ.ಜೆ.ಜಾರ್ಜ್ ಈ ಆರೋಪಗಳನ್ನು ನಿರಾಕರಿಸಿದ್ದರು.