Friday, November 22, 2024
Homeರಾಜ್ಯಗೃಹಲಕ್ಷ್ಮಿ ಹಣ ಸಂದಾಯ ಸ್ಥಗಿತ..? : ಮಾತು ತಪ್ಪಿದ 'ಗ್ಯಾರಂಟಿ' ಸರ್ಕಾರದ ವಿರುದ್ಧ ಜನಾಕ್ರೋಶ

ಗೃಹಲಕ್ಷ್ಮಿ ಹಣ ಸಂದಾಯ ಸ್ಥಗಿತ..? : ಮಾತು ತಪ್ಪಿದ ‘ಗ್ಯಾರಂಟಿ’ ಸರ್ಕಾರದ ವಿರುದ್ಧ ಜನಾಕ್ರೋಶ

ಬೆಂಗಳೂರು,ಜು.3- ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಸ್ಥಗಿತಗೊಳಿಸಲಾಗಿದ್ದು, ಮಾತು ತಪ್ಪಿದ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಲೋಕಸಭಾ ಚುನಾವಣೆಗೂ ಮುನ್ನ ಯೋಜನೆಯನ್ನು ಜಾರಿಗೊಳಿಸಿದ್ದ ರಾಜ್ಯಸರ್ಕಾರ ನಿಯಮಿತವಾಗಿ ಮೂರು ತಿಂಗಳಿಗೂ ಹೆಚ್ಚು ಕಾಲ ಹಣ ಸಂದಾಯ ಮಾಡಿದೆ.ಲೋಕಸಭಾ ಚುನಾವಣೆ ನಂತರ ಏಕಾಏಕಿ ಹಣ ಸಂದಾಯ ಸ್ಥಗಿತಗೊಂಡಿದೆ.

ಮತದಾನಕ್ಕೂ ಹಿಂದುಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಹಣವನ್ನು ಪಾವತಿಸಲಾಗಿತ್ತು. ಫಲಿತಾಂಶದಲ್ಲಿ ಕಾಂಗ್ರೆಸ್‌‍ ಪಕ್ಷ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸದೇ ಇರುವುದರಿಂದ ಯೋಜನೆಗಳ ಬಗ್ಗೆ ವ್ಯಾಪಕ ವಿಮರ್ಶೆಗಳು ಶುರುವಾಗಿವೆ.

ಜನ ಭಾವನಾತಕ ವಿಚಾರಗಳಿಗೆ ಮಣೆ ಹಾಕಿದ್ದಾರೆ. ಅಭಿವೃದ್ಧಿ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಫಲಾನುಭವಿಗಳೂ ಕೂಡ ಕಾಂಗ್ರೆಸ್‌‍ ಪಕ್ಷವನ್ನು ಬೆಂಬಲಿಸಿಲ್ಲ. ಹೀಗಾಗಿ ಯೋಜನೆಗಳನ್ನು ಮುಂದುವರೆಸಬೇಕೇ? ಬೇಡವೇ? ಎಂಬ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ.

ಕಾಂಗ್ರೆಸ್‌‍ನ ಕೆಲವು ಶಾಸಕರು ಪಂಚಖಾತ್ರಿ ಯೋಜನೆಗಳನ್ನು ನಿಲ್ಲಿಸಿ ಆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಆದರೆ ಸರ್ಕಾರದ ಪ್ರಮುಖರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಮತ್ತಿತರ ಮುಖಂಡರು ನಾವು ಚುನಾವಣೆ ಅಥವಾ ಮತಗಳಿಕೆಯ ಕಾರಣಕ್ಕಾಗಿ ಯೋಜನೆಗಳನ್ನು ಜಾರಿಗೊಳಿಸಿಲ್ಲ.

ಜನರ ಜೀವನ ಸುಧಾರಣೆ, ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸುಸ್ಥಿರತೆಗಾಗಿ ಪಂಚಖಾತ್ರಿ ಯೋಜನೆಗಳನ್ನು ರೂಪಿಸಲಾಗಿದೆ. ಅವುಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಆಡಿದ ಮಾತಿನಂತೆ ಸರ್ಕಾರ ನಡೆದುಕೊಳ್ಳುತ್ತಿಲ್ಲ ಎಂಬ ಟೀಕೆಗಳಿವೆ.

ಚುನಾವಣೆಯ ಸಂದರ್ಭದಲ್ಲಿ ನೀತಿಸಂಹಿತೆಯನ್ನೂ ಮೀರಿ 2 ಸಾವಿರ ರೂ.ಗಳ ಗೃಹಲಕ್ಷ್ಮಿ ಹಣವನ್ನು ಪಾವತಿಸಿದ ಸರ್ಕಾರ, ಫಲಿತಾಂಶದ ಬಳಿಕ ಸ್ಥಗಿತಗೊಳಿಸಿರುವುದೇಕೆ ಎಂಬ ಪ್ರಶ್ನೆಗಳಿವೆ.ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಹೇಳುತ್ತಲೇ ಫಲಾನುಭವಿಗಳಿಗೆ ಹಣ ಸಂದಾಯ ಮಾಡದಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಹುನಿರೀಕ್ಷಿತ ಗೃಹಲಕ್ಷಿ ಯೋಜನೆಯಡಿ ಸರ್ಕಾರ ತನ್ನ ಬೊಕ್ಕಸದಿಂದ ಫಲಾನುಭವಿಗಳಿಗೆ ಹಣ ನೀಡಬೇಕಿದೆ. ಯೋಜನೆಗೆ ಹಣ 2 ತಿಂಗಳಿನಿಂದಲೂ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ.

ಉಳಿದೆರಡು ಯೋಜನೆಗಳಾದ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ಪಾಲಿನ ವೆಚ್ಚ ಬಾಬ್ತನ್ನು ಸರ್ಕಾರ ತನ್ನದೇ ಅಂಗ ಸಂಸ್ಥೆಗಳಿಗೆ ಪಾವತಿಸುತ್ತಿದೆ. ಹೀಗಾಗಿ ಪಾವತಿಯಲ್ಲಿ ವಿಳಂಬವಾದರೂ ಅದು ಜನಸಾಮಾನ್ಯರ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಈ ಎರಡೂ ಯೋಜನೆಗಳು ಅಬಾಧಿತವಾಗಿ ಮುಂದುವರೆದಿವೆ.

ಗೃಹಲಕ್ಷ್ಮಿ ಯೋಜನೆ ಕೆಲವರಿಗೆ ಅನಗತ್ಯ ಎನಿಸಿದರೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ವರದಾನವಾಗಿದೆ. ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಕುಟುಂಬಕ್ಕೆ ಆರ್ಥಿಕ ಚೈತನ್ಯ ನೀಡುವಲ್ಲಿ ಸಫಲವಾಗಿತ್ತು. ಅದರಲ್ಲೂ ಹಿರಿಯ ಮಹಿಳೆಯರಿಗೆ ಯೋಜನೆ ಜೀವನಾಧಾರವಾಗಿತ್ತು. ಈಗ ಅದರ ಹಣವನ್ನು ಪಾವತಿಸದೇ ಇರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸರ್ಕಾರ ಯೋಜನೆಗಳನ್ನು ನಿಲ್ಲಿಸುತ್ತದೆಯೋ?, ಮುಂದುವರೆಸುತ್ತದೆಯೋ? ಎಂಬ ಪ್ರಶ್ನೆಗಳು ಕಾಡುತ್ತಿವೆ. ಕಾಂಗ್ರೆಸ್‌‍ಗೆ ಮತ ಹಾಕಿಲ್ಲ ಎಂಬ ಸಿಟ್ಟಿಗೆ ಯೋಜನೆ ಸ್ಥಗಿತಗೊಂಡರೆ ಅದನ್ನೇ ನಂಬಿ ಕುಳಿತಿರುವ ಅಸಹಾಯಕ ಮಹಿಳೆಯರಿಗೆ ಭಾರಿ ನಿರಾಶೆಯಾಗುವುದಂತೂ ಗ್ಯಾರಂಟಿ.

RELATED ARTICLES

Latest News