Saturday, October 5, 2024
Homeರಾಜಕೀಯ | Politicsಸದ್ಯಕ್ಕೆ ಸಿಎಂ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಇಲ್ಲ : 'ಕೈ'ಕಮಂಡ್ ಸಂದೇಶ

ಸದ್ಯಕ್ಕೆ ಸಿಎಂ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಇಲ್ಲ : ‘ಕೈ’ಕಮಂಡ್ ಸಂದೇಶ

ಬೆಂಗಳೂರು,ಜು.7- ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಸೇರಿದಂತೆ ನಾನಾ ರೀತಿಯ ಚರ್ಚೆಗಳಿಗೆ ತಣ್ಣನೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌‍ ಹೈಕಮಾಂಡ್‌ ಸದ್ಯದ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಎಲ್ಲವೂ ಯಥಾರೀತಿಯಲ್ಲಿ ಮುಂದುವರೆಯುತ್ತವೆ ಎಂಬ ಸಂದೇಶ ರವಾನಿಸಿದ್ದು, ಗೊಂದಲ ಹೇಳಿಕೆ ನೀಡುತ್ತಿದ್ದವರಿಗೆ ಮುಖಭಂಗವಾದಂತಾಗಿದೆ.

ರಾಜಕೀಯ ಕಾರಣಗಳಿಗಾಗಿ ಮತ್ತು ಕೆಲವರು ತಮ ಅಸ್ತಿತ್ವದ ಉಳಿವಿಗೆ ಪಕ್ಷದ ಉನ್ನತ ಮಟ್ಟದಲ್ಲಿ ಚರ್ಚೆಯಾಗಬೇಕಾಗಿದ್ದ ವಿಚಾರಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿ ಗೊಂದಲ ಉಂಟು ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಇದೇ ರೀತಿಯ ಹೇಳಿಕೆಗಳು ಪಕ್ಷಕ್ಕೆ ಹಾನಿ ಮಾಡಿದ್ದವು.

ಈಗ ಪಂಚಾಯತ್‌ರಾಜ್‌, ಬಿಬಿಎಂಪಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಂದರ್ಭದಲ್ಲಿ ಮತ್ತೆ ಗೊಂದಲಗಳನ್ನು ಸೃಷ್ಟಿ ಮಾಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ಗೆ ದೂರು ನೀಡಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ರಾಜ್ಯದಲ್ಲಿ ವಿವಾದಿತ ಹೇಳಿಕೆ ನೀಡುವ ಕೆಲ ನಾಯಕರುಗಳಿಗೆ ದೂರವಾಣಿ ಕರೆ ಮಾಡಿದ್ದು, ತಮಗೆ ನಿರಂತರವಾಗಿ ಪ್ರಚಾರದಲ್ಲಿರುವ ಆಸಕ್ತಿ ಇದ್ದರೆ, ತಾವು ಪಕ್ಷದಿಂದ ಪಡೆದಿರುವ ಸಾಂವಿಧಾನಿಕ ಸ್ಥಾನಮಾನಗಳಿಗೆ ರಾಜೀನಾಮೆ ನೀಡಿ, ಅನಂತರ ತಮಗಿಷ್ಟ ಬಂದಂತೆ ಹೇಳಿಕೆ ನೀಡಿ ಎಂದು ಖಾರವಾಗಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಅಧಿಕಾರ ಬದಲಾವಣೆ ಅಥವಾ ಯಾವುದೇ ಜವಾಬ್ದಾರಿಗಳ ಕುರಿತಂತೆ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುತ್ತದೆ. ಅಂತಹ ಸಂದರ್ಭ ಬಂದಾಗ ಹಿರಿಯ ನಾಯಕರ ಜೊತೆ ಚರ್ಚೆ ನಡೆಸಲಾಗುವುದು. ಸದ್ಯಕ್ಕೆ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಹಾನಿ ಉಂಟುಮಾಡಬೇಡಿ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.

ಕೆಲವು ಮುಖಂಡರು ತಮ ನೆಚ್ಚಿನ ನಾಯಕನ ಓಲೈಕೆಗೆ ಮತ್ತು ಇನ್ನ್ಯಾರದೋ ಮೇಲಿನ ದ್ವೇಷಕ್ಕಾಗಿ ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆಗಳ ಸೃಷ್ಟಿ ಕುರಿತು ಹೇಳಿಕೆ ನೀಡುತ್ತಿದ್ದಾರೆ ಎಂಬ ಟೀಕೆಗಳು ಪಕ್ಷದಲ್ಲಿ ಕೇಳಿಬರುತ್ತಿವೆ.ಇದಕ್ಕೆ ಪ್ರತಿತಂತ್ರ ಎಂಬಂತೆ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳಿಗೂ ಇಂಬು ನೀಡಿದಂತಾಗಿದೆ.

ಮುಖ್ಯಮಂತ್ರಿ ಹುದ್ದೆಯ ಕುರಿತು ಗೊಂದಲಗಳು ಸೃಷ್ಟಿಯಾದರೆ ಅದು ಆಡಳಿತದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಹೀಗಾಗಿ ಹೈಕಮಾಂಡ್‌ ಮಧ್ಯಪ್ರವೇಶ ಮಾಡಿ ಅನಗತ್ಯ ಗೊಂದಲಗಳಿಗೆ ಕಡಿವಾಣ ಹಾಕಬೇಕು ಎಂದು ಸಿದ್ದರಾಮಯ್ಯ ಅವರು ಇತ್ತೀಚಿನ ದೆಹಲಿಯ ಭೇಟಿಯ ವೇಳೆ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದರು.

ಯಾವುದೇ ಗುಂಪಿನ ಪರ-ವಿರೋಧ ಚರ್ಚೆಗಳು ಅನಗತ್ಯ. ಜನ ನೀಡಿರುವ ಅಧಿಕಾರವನ್ನು ಜನಪರ ಕೆಲಸಗಳಿಗಷ್ಟೇ ಬಳಕೆ ಮಾಡಬೇಕು, ರಾಜಕಾರಣ ಪ್ರತಿ ಪಕ್ಷಗಳ ವಿರುದ್ಧವಾಗಿರಬೇಕೇ ಹೊರತು ಸ್ವ ಪಕ್ಷೀಯರ ವಿರುದ್ಧ ಅಲ್ಲ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ರಾಜ್ಯ ನಾಯಕರಿಗೆ ಖಡಕ್‌ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.ಇನ್ನು ಮುಂದೆಯೂ ಗೊಂದಲ ಹೇಳಿಕೆ ನೀಡುವುದು ಮುಂದುವರೆದರೆ ಪಕ್ಷ ಅನಿವಾರ್ಯವಾಗಿ ಶಿಸ್ತುಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂಬ ಎಚ್ಚರಿಕೆ ರವಾನಿಸಿದ್ದಾರೆ ಎನ್ನಲಾಗಿದೆ.

RELATED ARTICLES

Latest News