Sunday, January 12, 2025
Homeರಾಜ್ಯಕಾಂಗ್ರೆಸ್ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು 'ಕೈ'ಕಮಾಂಡ್ ಪ್ರವೇಶ

ಕಾಂಗ್ರೆಸ್ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ‘ಕೈ’ಕಮಾಂಡ್ ಪ್ರವೇಶ

Congress high command to interfere Siddaramaiah And DK Shivakumar Fight

ಬೆಂಗಳೂರು,ಜ.12- ಕಾಂಗ್ರೆಸ್ನ ಬಣಗಳ ಬಡಿದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ರಂಗಪ್ರವೇಶ ಮಾಡಿದೆ.ಔತಣಕೂಟದ ರಾಜಕಾರಣ, ಅಧಿಕಾರ ಹಂಚಿಕೆಯ ಬಹಿರಂಗ ಹೇಳಿಕೆಗಳು, ಅನುದಾನ ಹಂಚಿಕೆಯ ಕೊರತೆಯ ಅಸಮಾಧಾನ, ಸಿಎಂ, ಡಿಸಿಎಂಗಳ ಬಣಗಳ ಹೇಳಿಕೆ-ಪ್ರತಿಹೇಳಿಕೆಗಳಿಗೆ ಕಡಿವಾಣ ಹಾಕಲು ನಾಳೆ ಹೈಕಮಾಂಡ್ ನಾಯಕರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ನೇತೃತ್ವದಲ್ಲಿ ಕೆಪಿಸಿಸಿ ಸರ್ವ ಸದಸ್ಯರ ಸಭೆ , ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮೂಲಕ ಬಹಿರಂಗ ಹೇಳಿಕೆಗಳಿಗೆ ಮೂಗುದಾರ ಹಾಕುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ 5 ವರ್ಷ ಅಧಿಕಾರವಧಿ ಪೂರೈಸಲಿದ್ದಾರೆ ಎಂದು ಹಲವು ಸಚಿವರ ಹೇಳಿಕೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮತ್ತೆ ಕೆಲವರ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮುಂಬರುವ ಜಿ.ಪಂ., ತಾ.ಪಂ, ಚುನಾವಣೆಗಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.

ಇದಲ್ಲದೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿದೇಶ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಔತಣಕೂಟ ನಂತರ ಪರಮೇಶ್ವರ್ ಅವರ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಔತಣಕೂಟ ಮತ್ತು ಕೊನೆ ಕ್ಷಣದಲ್ಲಿ ಅದು ರದ್ದಾಗಿದ್ದು, ಇದರಿಂದ ಕೋಪಗೊಂಡು ಕೆಲವರು ಬಹಿರಂಗ ಹೇಳಿಕೆಗಳನ್ನು ನೀಡಿದ್ದು ಪಕ್ಷಕ್ಕೆ ಮುಜುಗರ ಉಂಟುಮಾಡಿತ್ತು. ಹಲವು ಜಾತಿಯ ಶಾಸಕರುಗಳ ನೇತೃತ್ವದಲ್ಲಿ ನಾಯಕರು ಸಭೆ ನಡೆಸಲೂ ಕೂಡ ಮುಂದಾಗಿದ್ದರು. ಇದೆಲ್ಲದಕ್ಕೂ ಹೈಕಮಾಂಡ್ ತಾತ್ಕಾಲಿಕವಾಗಿ ಕಡಿವಾಣ ಹಾಕಿತ್ತು. ನಾಳೆಯ ಸಭೆಯಲ್ಲಿ ಎಲ್ಲವಕ್ಕೂ ಪೂರ್ಣವಿರಾಮ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ನಾಳೆ ಬೆಳಿಗ್ಗೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಯಾವುದೇ ನಾಯಕರಾಗಲಿ, ಶಾಸಕರಾಗಲಿ ಬಹಿರಂಗ ಹೇಳಿಕೆಗಳನ್ನು ನೀಡದಂತೆ ತಾಕೀತು ಮಾಡಲಿದ್ದಾರೆ. ಯಾವುದೇ ಸಮಸ್ಯೆಗಳಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುವ ಸೂಚನೆ ನೀಡಲಿದ್ದಾರೆ.

ನಾಳೆ ಬೆಳಿಗ್ಗೆ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಬೆಳಗಾವಿಯಲ್ಲಿ ಜೂ.21 ರಂದು ನಡೆಯಲಿರುವ ಗಾಂಧಿ ಭಾರತ ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುವುದು.ಕೆಪಿಸಿಸಿ ಪದಾಧಿಕಾರಿಗಳು ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹಾಲಿ, ಮಾಜಿ ಸಚಿವರು, ಸಂಸದರು ಎಲ್ಲರೂ ಭಾಗವಹಿಸಲಿದ್ದಾರೆ.

ಮಧ್ಯಾಹ್ನ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಯಲಿದೆ. ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅನುದಾನ ಹಂಚಿಕೆ ಕೊರತೆಯ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.
ಈಗಾಗಲೇ ಹಲವು ಶಾಸಕರು ತಮ ಕ್ಷೇತ್ರಗಳಿಗೆ ನಿಗದಿತ ಅನುದಾನ ಸಿಗುತ್ತಿಲ್ಲ ಎಂದು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾಳೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಂಗ್ರೆಸ್ನ ಬಣ ಬಡಿದಾಟಕ್ಕೆ ಬ್ರೇಕ್ ಬೀಳಲಿದೆಯೋ ಅಥವಾ ಶೀತಲ ಸಮರ ಮತ್ತಷ್ಟು ಉಲ್ಬಣಗೊಳ್ಳಲಿದೆಯೋ ಕಾದು ನೋಡಬೇಕಿದೆ.

RELATED ARTICLES

Latest News