ಬೆಂಗಳೂರು,ಸೆ.23- ಅತಿಯಾದ ತುಷ್ಟೀಕರಣ ಮಾಡಿದ್ದರಿಂದಲೇ 2018ರ ವಿಧಾನಸಭೆ ಚುನಾವಣೆಯಲ್ಲಿ ನೀವು ಸೋತಿದ್ದೀರಿ ಎಂಬುದನ್ನು ಮರೆಯಬಾರದು. ಈಗಲೂ ಅದು ಮುಂದುವರೆದರೆ ಜನ ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರಲ್ಲಿ ಇದೇ ರೀತಿ ಅತಿಯಾದ ತುಷ್ಟಿಕರಣ ನಡೆಸಿದ್ದರಿಂದ ಚಾಮುಂಡೇಶ್ವರಿಯಲ್ಲಿ ಏನಾಯಿತು ಎಂಬುದು ನಿಮಗೆ ಗೊತಿದ್ದರೆ ಸಾಕು. ಪುನಃ ಅದನ್ನು ಮುಂದುವರೆಸುತ್ತೇನೆ ಎಂದರೆ ರಾಜ್ಯದ ಜನತೆ ಸೂಕ್ತ ಕಾಲದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಅತಿಯಾದ ಪರಾಕಷ್ಠೆ ಒಳ್ಳೆಯದಲ್ಲ ಎಂದು ಸಲಹೆ ಮಾಡಿದರು.
ಅಷ್ಟಕ್ಕೂ ಕರ್ನಾಟಕದಲ್ಲಿ ಹಿಜಾಬ್‍ನ್ನು ಯಾರು ನಿಷೇಧ ಮಾಡಿದ್ದಾರೆ? ನಾನು ಆದೇಶವನ್ನು ವಾಪಸ್ ಪಡೆಯುತ್ತೇನೆಂದು ಹೇಳಿದ್ದೀರಿ. ನಿಮಗೆ ಕಾನೂನಿನ ಅರಿವು ಇದೆಯೇ ಎಂದು ಪ್ರಶ್ನಿಸಿದರು. ಶಾಲಾಕಾಲೇಜಿನ ಕೊಠಡಿಗಳಲ್ಲಿ ಮಾತ್ರ ಹಿಜಾಬ್ ಧರಿಸಬಾರದೆಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತು ಯಾರು ಎಲ್ಲಿ ಬೇಕಾದರೂ ತಮಗೆ ಇಷ್ಟವಾದ ಉಡುಗೆ ತೊಡುಗೆಗಳನ್ನು ಧರಿಸಲು ಅವಕಾಶವಿದೆ.
ಶಾಲಾಕಾಲೇಜುಗಳಲ್ಲಿ ಎಲ್ಲರೂ ಸಮಾನತೆ ಬರಲಿ ಎಂಬ ಕಾರಣಕ್ಕಾಗಿಯೇ ಸಂಹಿತೆಯನ್ನು ಜಾರಿಮಾಡಲಾಗಿದೆ. ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಬಾರದೆಂದು ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತೆ? ಎಂದು ಪ್ರಶ್ನಿಸಿದರು. ಸರ್ಕಾರದ ಆದೇಶವನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ.
ಸುಪ್ರೀಂಕೋರ್ಟ್‍ನಲ್ಲಿ ವಿಚಾರಣಾ ಹಂತದಲ್ಲಿರುವಾಗ ಇಷ್ಟು ಆತುರವಾಗಿ ಹಿಜಾಬ್ ಬಗ್ಗೆ ಹೇಳಿಕೆ ಕೊಡುವ ಅಗತ್ಯವೇನಿತು? ನೀವು ಪ್ರತಿಯೊಂದನ್ನು ಬಣ್ಣದ ಮೂಲಕವೇ ಗುರುತಿಸಿಕೊಳ್ಳಲು ಹೊರಟಿದ್ದೀರಿ, ಇದಕ್ಕೆ ಜನತೆ ಕೂಡ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು. ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬಂದರೆ ನಾಳೆ ಇನ್ಯಾರೊ ಕೇಸರಿ ಶಾಲು, ಉಳಿದವರು ಟೋಪಿ ಹಾಕಿಕೊಂಡು ಬರುತ್ತಾರೆ.
ಪೊಲೀಸ್ ಇಲ್ಲವೇ ಮಿಲ್ಟ್ರಿ ಪೆರೇಡ್‍ನಲ್ಲಿ ಹಿಜಾಬ್ ಹಾಕುತ್ತೇವೆ ಎಂದರೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.ಸಿದ್ದರಾಮಯ್ಯನವರೇನೂ ಮೂರ್ಖರಲ್ಲ. ಇದನ್ನು ಉದ್ದೇಶ ಪೂರ್ವಕವಾಗಿಯೇ ಹೇಳಿದ್ದಾರೆ. ಅವರಿಗೆ ಇದರ ಅರಿವಿಲ್ಲ ಎಂದು ಯಾರು ಭಾವಿಸಬಾರದು. ಜನತೆ ಕಾದು ನೋಡಿ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.
ಸೋಲಿನ ಸೇಡು: ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ನೆಲ ಕಚ್ಚಿದ್ದರಿಂದ ಸಂಸತ್‍ನ ಸದನಗಳಿಗೆ ಅಡ್ಡಿಪಡಿಸಿತು. ಕಲಾಪ ಸುಗಮವಾಗಿ ನಡೆಯಬಾರದು ಎಂಬುದು ಅವರ ಉದ್ದೇಶವಾಗಿತ್ತು ಎಂದು ಆರೋಪಿಸಿದರು. ಚುನಾವಣೆಯಲ್ಲಿ ಸೋತು ಜನರಿಂದ ಕಾಂಗ್ರೆಸ್ ತಿರಸ್ಕøತಗೊಂಡಿತ್ತು. ಬಿಜೆಪಿ ದೇಶಾದ್ಯಂತ ಮೇಲುಗೈ ಸಾಧಿಸಿರುವುದನ್ನು ಅವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಹೀಗಾಗಿ ವಿಷಯಾಂತರ ಮಾಡಲು ಸಂಸತ್‍ನ ಉಭಯ ಸದನಗಳಲ್ಲಿ ಗದ್ದಲ ಎಬ್ಬಿಸಿತು. ಇದು ಕಾಂಗ್ರೆಸ್‍ನ ಅಜೆಂಡಾ ಕೂಡ ಹಾಗಿತ್ತು ಎಂದು ಆರೋಪಿಸಿದರು.
ರಾಜ್ಯದಲ್ಲಿ ಹಿಜಾಬ್ ನಿಷೇಧ ಆಗಿಯೇ ಇಲ್ಲ : ಮಾಜಿ ಸಿಎಂ ಬೊಮ್ಮಾಯಿ
ನೂತನ ಸಂಸತ್ ಭವನದಲ್ಲಿ ಭಿತ್ತಿಪತ್ರ ಕಾರ್ಡ್‍ಗಳನ್ನು ಯಾರೊಬ್ಬರು ಕೈಯಲ್ಲಿ ಹಿಡಿದುಕೊಂಡು ಬರಬಾರದೆಂದು ಎಲ್ಲ ಸದಸ್ಯರಿಗೆ ಮೊದಲೇ ಸೂಚನೆ ಕೊಡಲಾಗಿತ್ತು. ಸದನ ಸಲಹಾ ಸಮಿತಿ ಸಭೆಯಲ್ಲಿ ಇದಕ್ಕೆ ಕಾಂಗ್ರೆಸ್ ಸೇರಿದಂತೆ ಎಲ್ಲ ಸದಸ್ಯರು ಒಪ್ಪಿಕೊಂಡಿದ್ದರು. ಬಳಿಕ ಸದನದಲ್ಲಿ ಭಿತ್ತಿಪತ್ರಗಳನ್ನು ಹಿಡಿದಿದ್ದು ಏಕೆ ಎಂದು ಪ್ರಶ್ನೆ ಮಾಡಿದರು. ಸದನ ಸುಗಮವಾಗಿ ನಡೆದರೆ ಅದರ ಶ್ರೇಯಸ್ಸು ಬಿಜೆಪಿಗೆ ಸಲ್ಲುತ್ತದೆ ಎಂಬ ಕಾರಣಕ್ಕಾಗಿ ಇಲ್ಲದ ಸಲ್ಲದ ಕಾರಣಗಳನ್ನು ನೆಪವೊಡ್ಡಿ ಉಭಯ ಸದನಗಳಲ್ಲಿ ಗದ್ದಲ ಎಬ್ಬಿಸಿದರು. ಯಾವ ಪುರುಷಾರ್ಥಕ್ಕಾಗಿ ಕಲಾಪಕ್ಕೆ ಅಡ್ಡಿಪಡಿಸಬೇಕಾಯಿತು.ಇದರಿಂದ ನೀವು ಸಾಧಿಸಿದ್ದದಾರೂ ಏನು ಎಂದು ಕಿಡಿಕಾರಿದರು.
ಸಂಸತ್ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಪೀಕರ್ ಅವರು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಇದನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ. ತನಿಖಾ ಹಂತದಲ್ಲಿ ಇರುವಾಗ ಗೃಹ ಸಚಿವರು ಸದನದಲ್ಲಿ ಹೇಳಿಕೆ ನೀಡುವುದು ಸರಿಯೇ ಎಂದು ಪ್ರಶ್ನಿಸಿದರು.
ಸಂಸತ್‍ನ ಭದ್ರತಾ ವ್ಯವಸ್ಥೆಯನ್ನು ಸಿಆರ್‍ಪಿಎಫ್‍ಗೆ ವಹಿಸುವ ಚಿಂತನೆ ನಡೆದಿದೆ. ಈಗಾಗಲೇ ಸ್ಪೀಕರ್ ಅವರು ಡಿಜಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ವಿಚಾರಣೆ ನಡೆಯುತ್ತಿರುವಾಗಲೇ ಹೇಳಿಕೆ ಕೊಡಿ ಎಂದು ಒತ್ತಾಯಿಸುವುದು ಸರಿಯಲ್ಲ. ತನಿಖೆ ಪೂರ್ಣಗೊಂಡ ಮೇಲೆ ಸಂಬಂಧಪಟ್ಟವರು ಹೇಳಿಕೆ ನೀಡುತ್ತಾರೆ ಎಂದು ಹೇಳಿದರು.
ಸದನದ ಸದಸ್ಯರನ್ನು ಅಮಾನತುಗೊಳಿಸಿದ್ದು ಇದೇ ಮೊದಲಲ್ಲ. 1979ರಲ್ಲೇ 69 ಸದಸ್ಯರನ್ನು ಅಮಾತುಪಡಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ಒಂದು ವರ್ಷ ಸದಸ್ಯರನ್ನು ಅಮಾನತು ಪಡಿಸಲಾಗಿತ್ತು. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಇದೇ ಪ್ರಸಂಗ ನಡೆದಿದೆ. ಸದಸ್ಯರನ್ನು ಅಮಾತುಪಡಿಸುವುದು, ಬಿಡುವುದು ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದು, ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ ಎಂದು ಜೋಷಿ ಸ್ಪಷ್ಟಪಡಿಸಿದರು.