ಚಿಕ್ಕಮಗಳೂರು, ಮೇ 20– ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ, ಬೆಲೆ ಏರಿಕೆಯನ್ನು ಸಾಧನೆ ಎಂದು ಪರಿಗಣಿಸಿ ಸಮಾವೇಶ ಮಾಡಲು ಹೊರಟಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಿಸಿದೆ. ಜನನ ಪ್ರಮಾಣ ಪತ್ರ, ವಿದ್ಯುತ್ ಬಿಲ್ಲು, ಹಾಲು, ಸ್ಟ್ಯಾಂಪ್ ಡ್ಯೂಟಿ, ಎಕ್ಸರ್ಸೈಜ್ ಡ್ಯೂಟಿ, ಸ್ಟ್ಯಾಂಪ್, ಪೆಟ್ರೋಲ್, ಡೀಸೆಲ್, ಆಲ್ನೋಹಾಲ್ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಇದು ಕಾಂಗ್ರೆಸ್ ಹೇಳಿಕೊಳ್ಳಲಾಗದ ಸಾಧನೆ ಎಂದು ವ್ಯಂಗ್ಯವಾಡಿದರು.
ಪಂಚ ಗ್ಯಾರಂಟಿ ಪಂಕ್ಚರ್ ಆಗಿದೆ. ಗೃಹ ಲಕ್ಷ್ಮಿ ಪ್ರತಿ ತಿಂಗಳು ಬರುತ್ತಿಲ್ಲ. ಶಕ್ತಿ ಯೋಜನೆ ಬಂದ ಮೇಲೆ ರೂಟ್ಗಳಿಗೆ ಬಸ್ಸೇ ಇಲ್ಲ. ಶಾಲಾ ಮಕ್ಕಳು, ಪುರುಷರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಗುತ್ತಿಗೆ, ಸರ್ಕಾರಿ ನೌಕರರಿಗೆ 3 ರಿಂದ 5 ತಿಂಗಳಿನಿಂದ ವೇತನ ಇಲ್ಲ.
ಕಿಸಾನ್ ಸಮ್ಮಾನ್ ಸದ್ದಿಲ್ಲದೆ ರದ್ದಾಗಿದೆ. ರೈತ ವಿದ್ಯಾನಿಧಿ, ಎಸ್ಸಿಪಿ, ಟಿಎಸ್ಪಿ 28 ಸಾವಿರ ಕೋಟಿ ಹಣ ದುರುಪಯೋಗವಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ರೈತ ಮೊರ್ಚಾ ರಾಜ್ಯ ಕಾರ್ಯದರ್ಶಿ ಎಚ್ .ಡಿ.ಕಲ್ಮರುಡಪ್ಪ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಗ್ರಾಮಾಂತರ ಅಧ್ಯಕ್ಷ ಈಶ್ವರಳ್ಳಿ ಮಹೇಶ್ ಇದ್ದರು.