ಬೆಂಗಳೂರು, ಮಾ.29-ಸಂಪದ್ಭರಿತವಾಗಿರುವ ಕರ್ನಾಟಕವನ್ನು ದಶಕಗಳ ಕಾಲ ಕಾಂಗ್ರೆಸ್ ಆಳ್ವಿಕೆ ಮಾಡಿ ಕೊಳ್ಳೆ ಹೊಡೆದಿದೆ. ಈಗಲೂ ಎಟಿಎಂನಂತೆ ಬಳಸಿಕೊಳ್ಳುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರೈತರ ಬಗ್ಗೆ ಕಾಳಜಿ ಇರುವ ಕಾರಣಕ್ಕೆ ಎರಡು ಬಾರಿ ರೈತರ ಸಾಲ ಮನ್ನಾ ಮಾಡಿದ್ದರು. ಅನ್ನದಾತರ ಅಹವಾಲು ಕೇಳಲೆಂದೇ ವಿಧಾನಸೌಧದ ಬಾಗಿಲನ್ನು ಸದಾ ತೆರೆದಿಟ್ಟು ರೈತರೊಂದಿಗೆ ಸಭೆಗಳನ್ನು ನಡೆಸಿದ್ದರು ಎಂದು ಹೇಳಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿ ಟೀಕಾ ಪ್ರಹಾರ ನಡೆಸಿರುವ ಜೆಡಿಎಸ್, ಹಿಂದಿನ ಕಾಂಗ್ರೆಸ್ ಸರ್ಕಾರ ಒಕ್ಕೂಟ ಸರ್ಕಾರದಲ್ಲಿ ಹೇಗೆ ಆಡಳಿತ ನಡೆಸಿತ್ತು ಎಂಬುದು ತಮಗೆ ಅರಿವಿಲ್ಲವೇ? ಅಥವಾ ಮಂದಬುದ್ದಿಯೇ? ಜಾಣಕುರುಡೇ ಎಂಬ ಪ್ರಶ್ನೆಗಳ ಸುರಿಮಳೆಗೈದಿದೆ.
ಮೊದಲು ಕರ್ನಾಟಕದಲ್ಲಿ ಲೂಟಿ ಮಾಡುವುದನ್ನು ನಿಲ್ಲಿಸಿ ಸರ್ಕಾರಿ ಗುತ್ತಿಗೆಯಲ್ಲಿ ಶೇ.60ರಷ್ಟು ಕಮೀಷನ್ ಪಡೆಯುವುದನ್ನು ನಿಲ್ಲಿಸಿ ಬೆಂಗಳೂರಿನಲ್ಲಿ ನಿಮ್ಮ ಕುಟುಂಬದ ಆಸ್ತಿ ವಿಸ್ತರಣೆ ಯೋಜನೆಗಳನ್ನು ನಿಲ್ಲಿಸಿ ಎಂದು ಡಿ.ಕೆ.ಶಿವಕುಮಾರ್ ಅವರನ್ನು ಆಗ್ರಹಿಸಿದೆ.