ರಾಮನಗರ,ಆ.3- ಮುಡಾ ಹಾಗೂ ಮಹರ್ಷಿ ವಾಲೀಕಿ ಹಗರಣವನ್ನು ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ರಾಮನಗರದಲ್ಲಿಂದು ಜನಾಂದೋಲನ ನಡೆಸಿದೆ.ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ಅವಧಿಯಲ್ಲಿ ನಡೆದ ವಿವಿಧ ಹಗರಣಗಳ ಕುರಿತು ವಿವರಣೆ ನೀಡಿದರು.
ಪ್ರತಿಯೊಂದು ಹಗರಣವನ್ನು ಬಿಜೆಪಿಯವರು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸುತ್ತಾರೆ. ಗುರು ರಾಘವೇಂದ್ರ ಬ್ಯಾಂಕಿನ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರೂ ಈವರೆಗೂ ತನಿಖಾಧಿಕಾರಿಯನ್ನು ನೇಮಿಸಿಲ್ಲ. ಮೊಟ್ಟೆ ಖರೀದಿ ಹಗರಣದಲ್ಲಿ ಬಿಜೆಪಿಯ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ವಿರುದ್ಧ ಅಭಿಯೋಜನೆಗೆ ದೂರು ಸಲ್ಲಿಸಲಾಗಿದೆ. ಈವರೆಗೂ ಅನುಮತಿ ನೀಡಿಲ್ಲ ಎಂದು ಆರೋಪಿಸಿದರು.
ಬಿಜೆಪಿ-ಜೆಡಿಎಸ್ ಪಕ್ಷದವರು ಸುಳ್ಳು ಆರೋಪ ಮಾಡಿ ಪಾದಯಾತ್ರೆ ನಡೆಸುತ್ತಿದ್ದಾರೆ. ಇದು ಅವರ ಪಾಪದ ಪಾದಯಾತ್ರೆ. ಮೈಸೂರಿಗೆ ಬರಲಿ, ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಹೋಗಲಿ ಎಂದು ಹೇಳಿದರು.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಬಿಜೆಪಿ-ಜೆಡಿಎಸ್‌ನವರ ನೈತಿಕತೆಯನ್ನು ಪ್ರಶ್ನೆ ಮಾಡುವಂತಾಗಿದೆ. ಕುಮಾರಸ್ವಾಮಿ ಆರಂಭದಲ್ಲಿ ಚೆನ್ನಾಗಿ ಮಾತನಾಡುತ್ತಿದ್ದರು. ಇತ್ತೀಚೆಗೆ ಅವರ ಹೇಳಿಕೆಗಳು ತೀರಾ ಕೆಳಮಟ್ಟಕ್ಕಿಳಿದಿವೆ. ನಾವು ಅವರ ಹಂತಕ್ಕೆ ಇಳಿದು ಮಾತನಾಡುವುದು ಸರಿಯಲ್ಲ ಎಂದರು.
ಮುಡಾ ಕುಮಾರಸ್ವಾಮಿ ಸೇರಿದಂತೆ 125 ಮಂದಿಗೆ ಬದಲಿ ನಿವೇಶನ ನೀಡಿದೆ. ಈ ನಿವೇಶನಗಳನ್ನು ಹಂಚಿರುವುದು ಬಿಜೆಪಿಯ ಅಧಿಕಾರಾವಧಿಯಲ್ಲಿ ಎಂದು ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ವಿರುದ್ಧ ಕೇಂದ್ರ ಸರ್ಕಾರ ಸಿಬಿಐ, ಇ.ಡಿ., ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆಸುತ್ತಿದೆ. ಜನ ಇದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಮಾಜಿ ಪ್ರಧಾನಿಯ ಮಗ ಮುಖ್ಯಮಂತ್ರಿಯಾಗುವುದು ದೊಡ್ಡ ವಿಚಾರವಲ್ಲ. ಕನಕಪುರದ ಮಣ್ಣಿನ ಮಗ ಉಪಮುಖ್ಯಮಂತ್ರಿಯಾಗುವುದು ಸಾಧನೆ. ಹಿಂದುಳಿದ ವರ್ಗದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಿಕೊಳ್ಳಲು ಬಿಜೆಪಿ-ಜೆಡಿಎಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಆಧಾರರಹಿತ ಆರೋಪ ಮಾಡುತ್ತಿದ್ದಾರೆ.
ಬಿಜೆಪಿಯ ಕಳ್ಳರು ಕೆಂಗೇರಿಯಿಂದ ಬಿಜೆಪಿ ಯಾತ್ರೆ ಆರಂಭಿಸಿದ್ದಾರೆ. ಏನೇ ಮಾಡಿದರೂ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ ಎಂದರು.
ಸಂಸದರಾಗಿ ಡಿ.ಕೆ.ಸುರೇಶ್ ಉತ್ತಮವಾಗಿ ಕೆಲಸ ಮಾಡಿದರು. ಆದರೆ ರಾಮನಗರದ ಜನ ಅವರನ್ನು ಸೋಲಿಸಿ ಮೋಸ ಮಾಡಿದ್ದಾರೆ ಎಂದು ಹೇಳಿದ ಅವರು, ಕೇಂದ್ರ ಸರ್ಕಾರ ರೈತರ ಅಭಿವೃದ್ಧಿಗೆ ಖರ್ಚು ಮಾಡಬೇಕಾಗಿದ್ದ 67 ಸಾವಿರ ಕೋಟಿ ರೂ.ಗಳನ್ನು ಬಾಕಿ ಉಳಿಸಿದೆ.
ಚೀನಾ ಭಾರತದ ಗಡಿಯೊಳಗೆ ನುಸುಳಿದೆ. ಈ ಯಾವ ವಿಚಾರಗಳನ್ನೂ ಬಿಜೆಪಿಯವರು ಪ್ರಸ್ತಾಪ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಡಾ.ಎಂ.ಸಿ.ಸುಧಾಕರ್, ರಹೀಂಖಾನ್, ಕೆ.ಎಚ್. ಮುನಿಯಪ್ಪ, ಶರಣಪ್ರಕಾಶ್ ಪಾಟೀಲ್, ಮಾಜಿ ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್ ಸೊರಕೆ ಮತ್ತಿತರರು ಉಪಸ್ಥಿತರಿದ್ದರು.