ಬೆಂಗಳೂರು,ವಿ.9- ಹಾಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಂಟಾಗುವ ಹೊರೆಯನ್ನು ತಪ್ಪಿಸಲು ರಾಜ್ಯ ಸರ್ಕಾರ ಬೆಂಗಳೂರು ಸುತ್ತಮುತ್ತ ನಿರ್ಮಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತಾವನೆಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.
ಕನಕಪುರ ಅಥವಾ ನೆಲಮಂಗಲದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡುವ ಸರ್ಕಾರದ ಪ್ರಸ್ತಾವನೆಗೆ ಕಾಂಗ್ರೆಸ್‌ನ 30ಕ್ಕೂ ಹೆಚ್ಚು ಶಾಸಕರು ವಿರೋಧ ವ್ಯಕ್ತಪಡಿಸಿದರು. ಈ ಎರಡು ಸ್ಥಳಗಳ ಬದಲು ಕಲ್ಯಾಣ. ಮಧ್ಯ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಹೆಬ್ಬಾಗಿಲು ತುಮಕೂರು ಜಿಲ್ಲೆ ಶಿರಾದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪನೆ ಮಾಡಬೇಕೆಂದು ಶಾಸಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಡಿ.ಜಿ.ಶಾಂತನಗೌಡ, ಬಿ.ಆರ್.ಪಾಟೀಲ್, ನಯನ ಮೋಟಮ್ಮ, ಬಿ.ಎಂ.ನಾಗರಾಜ, ಎಸ್.ರಾಜಪ್ಪ, ಲಕ್ಷ್ಮಣ್ ಸವದಿ, ಹಂಪನಗೌಡ ಬಾದರ್ಲಿ, ಆನಂದ್ ಕೆ.ಎಸ್. ಎಚ್.ಡಿ.ತಮ್ಮಯ್ಯ, ವಿನಯ್ ಕುಲಕರ್ಣಿ, ಸಿ.ಎಸ್.ನಾಡಗೌಡ, ಗಣೇಶ್ ಹುಕ್ಕೇರಿ, ಅಶೋಕ್ ಪಟ್ಟಣ್, ಸುರೇಶ್ ಗೌಡ ಸೇರಿದಂತೆ ಮತ್ತಿತರ ಶಾಸಕರು ಪಕ್ಷಾತೀತವಾಗಿ ಪತ್ರ ಬರೆದಿದಿದ್ದು, ಕನಕಪುರ ಇಲ್ಲವೇ ನೆಲಮಂಗಲದ ಬದಲು ಶಿರಾದಲ್ಲಿ ವಿಮಾನ ನಿಲ್ದಾಣ ಮಾಡುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಿರಾದಲ್ಲಿ ಏರ್‌ಪೋರ್ಟ್ ನಿರ್ಮಾಣ ಮಾಡುವುದರಿಂದ ಬಯಲುಸೀಮೆ, ಉತ್ತರ ಕರ್ನಾಟಕದ ಭಾಗಕ್ಕೆ ಹೆಚ್ಚು ಅನುಕೂಲ ಆಗಲಿದೆ ಎಂಬುವುದು ಇವರ ವಾದವಾಗಿದೆ. ಸಿರಾದಲ್ಲಿ ಚೆನ್ನೈ -ಮುಂಬೈ ಹೆದ್ದಾರಿ ಹಾದುಹೋಗಿದೆ. ಎಚ್ ಎಎಲ್ ನಂತಹ ರಕ್ಷಣಾ ಸಂಸ್ಥೆ ಇದೆ. ಅತೀದೊಡ್ಡ ವಸಂತನರಸಾಪುರ ಕೈಗಾರಿಕಾ ವಸಾಹತು ಶೀಘ್ರದಲ್ಲೇ ಜಪಾನ್ ಟೌನ್ ಶಿಪ್ ಕೂಡ ನಿರ್ಮಾಣವಾಗುತ್ತಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಆಗುತ್ತಿದೆ. ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಹೇಮಾವತಿ ನೀರಾವರಿ ಸೌಲಭ್ಯ ಇದೆ. ತುಮಕೂರು-ರಾಯಮರ್ಗ ರೈಲ್ವೇ ಮಾರ್ಗ ಕೂಡ ಹಾದು ಹೋಗಲಿದೆ. ಹೀಗಿರುವಾಗ ಸಿರಾದಲ್ಲಿ ಏರ್‌ಪೋರ್ಟ್ ನಿರ್ಮಾಣವಾದರೆ ಬೆಂಗಳೂರಿನಲ್ಲಿ ಅರ್ಧದಷ್ಟು ಟ್ರಾಫಿಕ್ ದಟ್ಟಣೆ ಕಡಿಮೆಯಾಗಲಿದೆ ಎಂಬುವುದು ವಾದವಾಗಿದೆ.
ತಜ್ಞರ ಸಮಿತಿ ತೀರ್ಮಾನ ಅಂತಿಮ:
ಈ ನಿಟ್ಟಿನಲ್ಲಿ ತಜ್ಞರ ಸಮಿತಿ ನೀಡುವ ತೀರ್ಮಾನವೇ ಅಂತಿಮವಾಗಿದೆ. ತಜ್ಞರ ಸಮಿತಿ ಪ್ರಸ್ತಾವಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಕನಕಪುರ ರಸ್ತೆ ಎರಡು ತಾಣವನ್ನು ತಜ್ಞರ ತಂಡ ವೀಕ್ಷಣೆ ಮಾಡಿದೆ. ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಅಗತ್ಯವಿರುವ ವಾತಾವರಣ, ಸೌಲಭ್ಯಗಳನ್ನು ಆಧರಿಸಿಕೊಂಡು ನಿರ್ಧಾರ ಕೈಗೊಳ್ಳಲಿದೆ. ಹೀಗಿದ್ದರೂ ಕನಕಪುರ, ನೆಲಮಂಗಲ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ವಿಚಾರ ಗೊಂದಲ ಉಂಟು ಮಾಡುವ ಸಾಧ್ಯತೆಯಿದ್ದು, ರಾಜ್ಯದ ಯಾವ ಭಾಗದಲ್ಲಿ ಏರ್ ಪೋರ್ ನಿರ್ಮಾಣ ಮಾಡುವುದು ಉತ್ತಮ ಎಂಬುದರ ಬಗ್ಗೆ ಆಡಳಿತಾತ್ಮಕ ನಿರ್ಣಯ ಕೈಗೊಳ್ಳುವುದು ಸುಲಭದ ವಿಚಾರವಾಗಿ ಉಳಿದಿಲ್ಲ. ಸರ್ಕಾರ ಅಂತಿಮವಾಗಿ ಯಾವ ನಿರ್ಣಯ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ನಗರದಲ್ಲಿ ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರಕಾರ ಗುರುತಿಸಿರುವ ಮೂರು ಸ್ಥಳಗಳ ಪೈಕಿ ಕನಕಪುರ ರಸ್ತೆಯಲ್ಲಿರುವ ಎರಡು ತಾಣಗಳ ಪರಿಶೀಲನೆಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಉನ್ನತ ಮಟ್ಟದ ತಂಡವು ನಿನ್ನೆ ನಡೆಸಿತ್ತು. ನಂತರ ತಂಡದ ಸದಸ್ಯರು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿಯಾಗಿ ವಿಚಾರ ವಿನಿಮಯ ಮಾಡಿದ್ದರು.
ಈ ಸಂದರ್ಭದಲ್ಲಿ ಸಚಿವರು ಕೂಡ ಉದ್ದೇಶಿತ ವಿಮಾನ ನಿಲ್ದಾಣದ ಅಗತ್ಯ, ಬೆಂಗಳೂರಿನ ನಾಗರಿಕ ಮತ್ತು ಕೈಗಾರಿಕಾ ಅಗತ್ಯ ಇತ್ಯಾದಿಗಳನ್ನು ತಂಡದ ಸದಸ್ಯರಿಗೆ ವಿವರಿಸಿ, ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಅತ್ಯಂತ ಪಾರದರ್ಶಕವಾಗಿ ಸ್ಥಳ ಗುರುತಿಸುವ ಕೆಲಸ ಆಗಲಿ ಎಂದು ತಂಡಕ್ಕೆ ಸಲಹೆ ನೀಡಿದ್ದರು.
ಇಂದು ಈ ತಂಡ ನೆಲಮಂಗಲ – ಕುಣಿಗಲ್ ರಸ್ತೆಯ ಸ್ಥಳ ಪರಿಶೀಲನೆ ನಡೆಸಲಿದೆ. ಉದ್ದೇಶಿತ ಎರಡನೇ ವಿಮಾನ ನಿಲ್ದಾಣವನ್ನು ಬೆಂಗಳೂರಿನ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಲು ಸರಕಾರ ತೀರ್ಮಾನಿಸಿದೆ. ಸ್ಥಳ ಪರಿಶೀಲನೆಯ ಬಳಿಕ ಪ್ರಾಧಿಕಾರದ ಅಭಿಪ್ರಾಯ ಏನೆಂಬುದನ್ನು ತಿಳಿದುಕೊಂಡು, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಪ್ರಾಧಿಕಾರದ ತಂಡದಲ್ಲಿ ಜನರಲ್ ಮ್ಯಾನೇಜರ್ ವಿಕ್ರಮ್ ಸಿಂಗ್, ಜಂಟಿ ಜನರಲ್ ಮ್ಯಾನೇಜರ್ ಕೆ.ಶ್ರೀನಿವಾಸರಾವ್, ಸಹಾಯಕ ಜನರಲ್ ಮ್ಯಾನೇಜರ್ ಮನುಜ್ ಭಾರದ್ವಾಜ್, ಪ್ರಧಾನ ಕಚೇರಿಯ ಅಧಿಕಾರಿಗಳಾದ ಸಚ್ಚಿದಾನಂದ್, ಸಂತೋಷಕುಮಾರ್ ಭಾರತಿ, ಅಮನ್ ಚಿಪಾ ಇದ್ದರು.
ಸರಕಾರದ ಪರವಾಗಿ ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ಹೆಚ್ಚುವರಿ ಕಾರ್ಯದರ್ಶಿ ಹೆನ್ಸಿಬಾ ರಾಣಿ, ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಖುಷ್ಟೂ ಗೋಯಲ್, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಹಾಜರಿದ್ದರು.