ಬೆಂಗಳೂರು, ಆ.31- ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಜಿ.ಜನಾರ್ಧ ನರೆಡ್ಡಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರನ್ನು ಆಗ್ರಹಿಸಿ ಕಾಂಗ್ರೆಸ್ ಇಂದು ರಾಜಭವನ ಚಲೋ ಪ್ರತಿಭಟನೆ ನಡೆಸಿತು.
ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ಇರುವ ಮಹಾತಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು ಬಳಿಕ ಅಲ್ಲಿಂದ ರಾಜಭವನದವರೆಗೂ ಪಾದಯಾತ್ರೆ ನಡೆಸಿದರು. ಆನಂತರ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಈ ಸಂಬಂಧ ಮನವಿಪತ್ರವನ್ನು ಸಲ್ಲಿಸಲಾಯಿತು.
ಮಹಾತಗಾಂಧೀಜಿ ಪ್ರತಿಮೆ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಸಚಿವರಾದ ಡಾ.ಜಿ.ಪರಮೇಶ್ವರ, ಹೆಚ್.ಕೆ.ಪಾಟೀಲ್, ಕೃಷ್ಣಭೈರೇಗೌಡ, ರಾಮಲಿಂಗಾರೆಡ್ಡಿ, ಜಮೀರ್ ಅಹಮದ್ ಖಾನ್,ಈಶ್ವರ್ ಖಂಡ್ರೆ, ಬೈರತಿ ಸುರೇಶ್, ಡಿ.ಸುಧಾಕರ್, ಡಾ. ಎಂ.ಸಿ.ಸುಧಾಕರ್, ಎಸ್.ಎಸ್.ಮಲ್ಲಿಕಾರ್ಜುನ್, ಡಾ.ಶರಣ ಪ್ರಕಾಶ್ ಪಾಟೀಲ್ ಸೇರಿಂದತೆ ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರು , ಮಾಜಿ ಸಂಸದರು, ಮಾಜಿ ಶಾಸಕರು ಕೆಲಕಾಲ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಧರಣಿನಿರತರು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಪ್ರಜಾಪ್ರಭುತ್ವ ಬಜಾವೋ ಸೇರಿದಂತೆ ಹಲವು ರೀತಿಯ ಫಲಕಗಳನ್ನು ಪ್ರದರ್ಶಿಸಿದರು.ಪ್ರಜಾ ತಾಂತ್ರಿಕವಾಗಿ ಚುನಾಯಿತರಾದ ಸರ್ಕಾರಗಳನ್ನು ಅಪ್ರಜಾ ತಾಂತ್ರಿಕ ಮಾರ್ಗದಲ್ಲಿ ಅಸ್ಥಿರಗೊಳಿಸುವ ಕೇಂದ್ರ ಸರ್ಕಾರ ಮತ್ತು ರಾಜಭವನ ಷಡ್ಯಂತ್ರ ನಡೆಸುತ್ತಿವೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಅಲ್ಲದೆ ತನಿಖೆಗೆ ಅನುಮತಿ ನೀಡುವ ವಿಚಾರದಲ್ಲಿ ರಾಜ್ಯಪಾಲರು ತಾರತಮ್ಯ ನೀತಿ ಅನುಸರಿಸುತ್ತಿದ್ದು, ಇದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಕಾಂಗ್ರೆಸ್ ನಾಯಕರು ಹೇಳಿದರು.
ರಾಜ್ಯಪಾಲರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ತನಿಖೆ ನಡೆದು ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿರುವ ಹಲವು ಪ್ರಕರಣಗಳಿಗೆ ರಾಜ್ಯಪಾಲರು ಅನುಮತಿಯನ್ನೇ ಕೊಟ್ಟಿಲ್ಲ. ಸಾಯಿ ವೆಂಕಟೇಶ್ವರ್ ಮಿನರಲ್ಸ್ ಗೆ ಸಂಬಂಧಿಸಿದಂತೆ ಎಚ್.ಡಿ.ಕುಮಾರಸ್ವಾಮಿ ಅವರ ಮೇಲಿರುವ ಆರೋಪದ ವಿರುದ್ಧ, ಇನ್ವೆಸ್ಟ್ ಕರ್ನಾಟಕ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಮುರುಗೇಶ್ ನಿರಾಣಿ ವಿರುದ್ಧ, ಮೊಟ್ಟೆ ಖರೀದಿಯ ಟೆಂಡರ್ ಪ್ರಕರಣದಲ್ಲಿನ ಅವ್ಯವಹಾರದ ಆರೋಪದಲ್ಲಿ ಶಶಿಕಲಾ ಜೊಲ್ಲೆ ವಿರುದ್ಧ ಹಾಗೂ ಅಕ್ರಮ ಆಸ್ತಿ ಗಳಿಕೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಕೋರಲಾಗಿದ್ದರೂ ರಾಜ್ಯಪಾಲರು ಈತನಕ ನೀಡಿಲ್ಲ ಎಂದು ಪ್ರತಿಭಟನಾನಿರತ ಕಾಂಗ್ರೆಸ್ ನಾಯಕರು ಆರೋಪಿಸಿದರು.
ಅಭಿಯೋಜನೆಗೆ ಕೋರಿ ವರ್ಷವಾಗಿದ್ದರೂ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿಲ್ಲ. ಅಭಿಯೋಜನೆಗೆ ಬಾಕಿ ಇರುವ ಮನವಿಗಳ ವಿಚಾರದಲ್ಲೂ ರಾಜ್ಯಪಾಲರು ಕೂಡಲೇ ತೀರ್ಮಾನ ಕೈಗೊಳ್ಳಬೇಕು ಎಂದು ಧರಣಿ ನಿರತ ಕಾಂಗ್ರೆಸ್ ನಾಯಕರು ಆಗ್ರಹಿಸಿದರು.
ಅಭಿಯೋಜನೆ ನೀಡುವ ವಿಚಾರದಲ್ಲಿ ರಾಜ್ಯಪಾಲರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪ ಮಾಡಿದ ಕಾಂಗ್ರೆಸ್ ನಾಯಕರು, ಕಳೆದ ವರ್ಷವೇ ಹೆಚ್.ಡಿ.ಕುಮಾರಸ್ವಾಮಿ, ಜನಾರ್ಧನರೆಡ್ಡಿ, ಮುರುಗೇಶ್ ನಿರಾಣಿ ಹಾಗೂ ಶಶಿಕಲಾ ಜೊಲ್ಲೆ ವಿರುದ್ಧ ಅಭಿಯೋಜನೆಗೆ ಅನುಮತಿ ಕೋರಿದ್ದರೂ ಇದುವರೆಗೂ ಏಕೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆಗೆ ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆಯುವಂತೆ ರಾಜ್ಯಪಾಲರ ಮೇಲೆ ಒಂದೆಡೆ ಒತ್ತಡ ತರುವ ತಂತ್ರವನ್ನು ಅನುಸರಿಸುತ್ತಿದ್ದ ಕಾಂಗ್ರೆಸ್ ಮತ್ತೊಂದೆಡೆ ಕಾನೂನು ಹೋರಾಟವನ್ನು ಮುಂದುವರೆಸಿದೆ.
ಈ ನಡುವೆ ರಾಜ್ಯಪಾಲರು ತಮ ವಿರುದ್ಧ ನೀಡಿರುವ ಅಭಿಯೋಜನೆ ರದ್ದುಗೊಳಿಸುವಂತೆ ಕೋರಿ ಸಿದ್ದರಾಮಯ್ಯ ಅವರು ಈಗಾಗಲೇ ಹೈಕೋರ್ಟ್ ಮೊರೆ ಹೋಗಿದ್ದಾರೆ.