ಬೆಂಗಳೂರು,ಸೆ.10- ಪಕ್ಷದ ನಿಯಮ ಉಲ್ಲಂಘಿಸಿ ಸಚಿವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿತನದ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದು, ಇಂಥ ಚರ್ಚೆಗೆ ತಡೆ ಹಾಕುವಂತೆ ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಹಾಗೂ ಮಂಜುನಾಥ್ ಭಂಡಾರಿ ಒತ್ತಾಯಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಮುಡಾ ಹಗರಣ ಎಂಬ ಹುರುಳಿಲ್ಲದ ಸುಳ್ಳು ಆರೋಪ ಮಾಡಿ, ಸರ್ಕಾರವನ್ನು ಅಭದ್ರ ಮಾಡಲು ಹೊರಟಿವೆ. ಆದರೆ ಕಾಂಗ್ರೆಸ್ ಸರ್ಕಾರದ ಭಾಗವಾಗಿರುವ ಸಚಿವರು ತಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಮೂಲಕ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಪಕ್ಷದ ಸಚಿವರ ಹಾಗೂ ಪಕ್ಷದ ಕೆಲ ಹಿರಿಯರ ಹೇಳಿಕೆಗಳಿಂದ ಮಾಧ್ಯಮಗಳಲ್ಲಿ ಈಗ ಮುಖ್ಯಮಂತ್ರಿ ಬದಲಾವಣೆಯ ವಿಷಯ ಚರ್ಚೆಯಾಗುತ್ತಿದೆ. ಸರ್ಕಾರದ ಭಾಗವಾಗಿರುವ ಸಚಿವರ ಲಗಾಮಿಲ್ಲದ ಹೇಳಿಕೆಗಳಿಂದ ಮುಂದೆ ಪಕ್ಷದ ವರ್ಚಸಿಗೆ ದಕ್ಕೆ ತರುವ ಹಾಗೂ ಸರ್ಕಾರದ ಅಭದ್ರತೆಯ ಬಗ್ಗೆ ಚರ್ಚೆಗಳಿಗೆ ಎಡೆಮಾಡಿ ಕೊಟ್ಟಂತಾಗುತ್ತದೆ. ಹಾಗಾಗಿ ಇಂಥ ಚರ್ಚೆಗಳಿಗೆ ತಕ್ಷಣ ತಡೆ ಹಾಕುವ ಅವಶ್ಯಕತೆ ಇದೆ ಎಂದು ಸಲಹೆ ಮಾಡಿದ್ದಾರೆ.
ಸಚಿವರಾಗಿ ಅಧಿಕಾರ ವಹಿಸಿಕೊಂಡವರು ತಮ ಇಲಾಖೆಗೆ ಕಳೆದ ಆಯವ್ಯಯದಲ್ಲಿ ನೀಡಿದ ಕೊಡುಗೆಗಳ ಜಾರಿಗೆ ಕ್ರಮ ವಹಿಸಲಿ. ಸಾರ್ವಜನಿಕರಿಗೆ, ರಾಜ್ಯದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.
ಜನರ ಸಮಸ್ಯೆಗಳನ್ನು ಆಲಿಸಬೇಕು. ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು. ಅದನ್ನು ಬಿಟ್ಟು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೊಂಡು ಹೋಗುವುದು ತಪ್ಪು. ಅಂಥವರ ಮೇಲೆ ಶಿಸ್ತುಕ್ರಮದ ಎಚ್ಚರಿಕೆ ನೀಡಬೇಕು ಎಂದು ಈ ಮೂಲಕ ವಿನಂತಿಸುತ್ತೇವೆ ಎಂದು ಹೇಳಿದ್ದಾರೆ.