Sunday, July 7, 2024
Homeರಾಜ್ಯವಿಧಾನಪರಿಷತ್‌ ಚುನಾವಣೆ : ಕಾಂಗ್ರೆಸ್ ಆಕಾಂಕ್ಷಿಗಳ ಎದೆಬಡಿತ ಹೆಚ್ಚಿಸಿದ ದೆಹಲಿ ಮೀಟಿಂಗ್

ವಿಧಾನಪರಿಷತ್‌ ಚುನಾವಣೆ : ಕಾಂಗ್ರೆಸ್ ಆಕಾಂಕ್ಷಿಗಳ ಎದೆಬಡಿತ ಹೆಚ್ಚಿಸಿದ ದೆಹಲಿ ಮೀಟಿಂಗ್

ಬೆಂಗಳೂರು, ಮೇ 30- ವಿಧಾನಸಭೆಯಿಂದ ವಿಧಾನಪರಿಷತ್‌ನ ಸದಸ್ಯರ ಆಯ್ಕೆಗೆ ಸಂಬಂಧಪಟ್ಟಂತೆ ವಾತಾವರಣ ಸಂಪೂರ್ಣ ಬದಲಾಗಿದ್ದು, ದೆಹಲಿಯಲ್ಲಿ ನಿನ್ನೆ ಸಂಜೆ ನಡೆದ ಮಹತ್ವದ ಸಭೆ ಆಕಾಂಕ್ಷಿಗಳ ಎದೆಬಡಿತವನ್ನು ಹೆಚ್ಚಿಸಿದೆ. ಸಚಿವ ಬೋಸ್‌‍ರಾಜ್‌ ಅವರಿಗೆ ಎಂಎಲ್‌ಸಿ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗಿತ್ತು. ಆದರೆ ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ನಡೆದ ಕಸರತ್ತುಗಳು ವಾತಾವರಣವನ್ನು ಬದಲಾವಣೆ ಮಾಡಿದೆ.

ವಿಧಾನಪರಿಷತ್‌ನಲ್ಲಿ ಆಡಳಿತ ಪಕ್ಷದ ನಾಯಕ ಸ್ಥಾನಕ್ಕೆ ಪ್ರಬಲ ವ್ಯಕ್ತಿಯ ಅಗತ್ಯವಿದೆ ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಎನ್‌.ಎಸ್‌‍.ಬೋಸರಾಜ್‌ ಅವರನ್ನು ವಿಧಾನಪರಿಷತ್‌ಗೆ ಮರು ಆಯ್ಕೆ ಮಾಡುವ ಬಗ್ಗೆ ಅರ್ಧಚಂದ್ರ ಸ್ಥಿತಿ ನಿರ್ಮಾಣವಾಗಿದೆ.

ಕಾಂಗ್ರೆಸ್‌‍ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಅವರನ್ನು ಆಡಳಿತ ಪಕ್ಷದ ನಾಯಕರನ್ನಾಗಿ ಮಾಡಬೇಕು ಮತ್ತು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಒತ್ತಡ ಹೈಕಮಾಂಡ್‌ನಿಂದ ಬಂದಿದೆ. ಹೀಗಾಗಿ ಎನ್‌.ಎಸ್‌‍.ಬೋಸರಾಜ್‌ ಅವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡದೆ ಕೈಬಿಡುವ ಅಥವಾ ಮುಂದಿನ ತಿಂಗಳಲ್ಲಿ ನಡೆಯುವ ನಾಮನಿರ್ದೇಶನದಲ್ಲಿ ಪರಿಗಣಿಸುವ ಚರ್ಚೆಗಳು ನಡೆದಿವೆ.

11 ಸ್ಥಾನಗಳ ಪೈಕಿ ಕಾಂಗ್ರೆಸ್‌‍ಗೆ 7 ಸ್ಥಾನಗಳು ಲಭ್ಯವಾಗಲಿದ್ದು, 8ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ವಿಪಕ್ಷಗಳಿಗೆ ಎದುರೇಟು ನೀಡುವ ರಣತಂತ್ರವು ನಡೆಯುತ್ತಿದೆ. ನಿನ್ನೆ ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೆವಾಲ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಡೆಸಿದ ಚರ್ಚೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಮಾತ್ರ ಅಖೈರುಗೊಂಡಿದೆ.

ಉಳಿದಂತೆ ಬಹುತೇಕ ಖಚಿತ ಎಂದು ಭಾವಿಸಲಾಗಿದ್ದ ಎನ್‌.ಎಸ್‌‍.ಬೋಸರಾಜ್‌ ಹಾಗೂ ಡಾ.ಕೆ.ಗೋವಿಂದರಾಜು ಅವರ ಹೆಸರುಗಳು ತ್ರಿಶಂಕು ಸ್ಥಿತಿಯಲ್ಲಿವೆ.ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಲಾ 2 ಸ್ಥಾನಗಳನ್ನು ಹಂಚಿಕೊಂಡಿದ್ದು, ಉಳಿದ 3 ಸ್ಥಾನಗಳಿಗೆ ಆಯ್ಕೆ ಮಾಡಲು ಹೈಕಮಾಂಡ್‌ ನಿರ್ದೇಶನ ಪಾಲಿಸುವ ಒಪ್ಪಂದವಾಗಿದೆ ಎಂದು ತಿಳಿದುಬಂದಿದೆ.

ಲಾಬಿ ತೀವ್ರಗೊಂಡ ಹಿನ್ನೆಲೆಯಲ್ಲಿ ಮಹಿಳಾ ಕೋಟಾ ಕೈಬಿಡುವ ಕುರಿತು ವದಂತಿಗಳಿವೆ. ಕೆಪಿಸಿಸಿಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಹಾಗೂ ಕಮಲಾಕ್ಷಿ ರಾಜಣ್ಣ ಅವರ ಹೆಸರುಗಳು ಪ್ರಬಲವಾಗಿ ಕೇಳಿಬಂದಿದ್ದವು. ಜೊತೆಗೆ ರಾಣಿ ಸತೀಶ್‌, ಭವ್ಯಾ ನರಸಿಂಹಮೂರ್ತಿ, ಕುಸುಮಾ, ಪದಾವತಿ ಅವರು ಲಾಬಿ ನಡೆಸಿದ್ದರು.

ಈಗಾಗಲೇ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಪಡೆದವರು, ಸೋಲು ಕಂಡವರು, 2 ಕ್ಕಿಂತ ಹೆಚ್ಚು ಬಾರಿ ಅಧಿಕಾರ ಅನುಭವಿಸಿದವರಿಗೆ ಈ ಹಂತದಲ್ಲಿ ಅವಕಾಶ ನೀಡದಿರುವ ನಿರ್ಣಯಗಳಾಗಿವೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ಚರ್ಚೆಯು ಬಹುತೇಕ ಮುಕ್ತಾಯಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮರಳಿ ಬರುತ್ತಿದ್ದಾರೆ.

ರಾಹುಲ್‌ಗಾಂಧಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಇಂದು ಅವರೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದ ಬಳಿಕ ಪಟ್ಟಿಯನ್ನು ಅಖೈರುಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.ಮೇಲ್ನೋಟಕ್ಕೆ ಈ ಬಾರಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೂ ಅವಕಾಶ ನೀಡುವ ಸಾಧ್ಯತೆಗಳಿವೆ. ಕುಟುಂಬ ಹಾಗೂ ಪ್ರಭಾವಿಗಳ ಲಾಬಿಯ ಹೊರತಾಗಿಯೂ ಕಾರ್ಯಕರ್ತರನ್ನು ಕಡೆಗಣಿಸಲಾಗುವುದಿಲ್ಲ ಎಂಬ ಸಂದೇಶವನ್ನು ಡಿ.ಕೆ.ಶಿವಕುಮಾರ್‌ ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿಯ ಕಾರ್ಯಾಧ್ಯಕ್ಷ ವಸಂತಕುಮಾರ್‌, ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್‌ಬಾಬು, ಪ್ರಧಾನ ಕಾರ್ಯದರ್ಶಿ ನಟರಾಜೇಗೌಡ, ವಾರ್‌ ರೂಂನ ಉಸ್ತುವಾರಿ ಬಿ.ಆರ್‌.ನಾಯ್ಡು, ಬಾಗಲಕೋಟೆಯ ಸೌದಾಗರ್‌ ಸೇರಿದಂತೆ ಹಲವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿವೆ.

ಬಿಜೆಪಿಯಿಂದ ಕಾಂಗ್ರೆಸ್‌‍ಗೆ ವಲಸೆ ಬಂದು ವಿಧಾನಪರಿಷತ್‌ ಸದಸ್ಯರಾಗಿ, ಅದಕ್ಕೆ ರಾಜೀನಾಮೆ ನೀಡಿ ಮತ್ತೆ ಬಿಜೆಪಿಗೆ ಮರಳಿದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಂದ ತೆರವಾಗಿರುವ ಒಂದು ಸ್ಥಾನಕ್ಕೆ ನಡೆಯುವ ಉಪ ಚುನಾವಣೆಗೂ ಈ ಕಂತಿನಲ್ಲೇ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಚರ್ಚೆಗಳಾಗಿವೆ.

RELATED ARTICLES

Latest News