ಭೋಪಾಲ್,ಮಾ.30-ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‍ಗೆ ದೊಡ್ಡ ಹಿನ್ನಡೆಯಾಗಿದ್ದು, ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಅಮರವಾರದ ಕೈ ಶಾಸಕ ಕಮಲೇಶ್ ಶಾ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಛಿಂದ್ವಾರಾ ಕ್ಷೇತ್ರ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ತವರು ಜಿಲ್ಲೆಯಾಗಿದೆ.
ಕಮಲೇಶ್ ಶಾ ಅವರನ್ನು ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್, ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ವಿಷ್ಣು ದತ್ ಶರ್ಮಾ ಅವರು ಬಿಜೆಪಿಗೆ ಸ್ವಾಗತಿಸಿದರು.ಮೂರು ಅವಧಿಯ ಕಾಂಗ್ರೆಸ್ ಶಾಸಕರು ತಮ್ಮ ಪತ್ನಿ ಹರಾಯಿ ನಗರ ಪಾಲಿಕೆ ಅಧ್ಯಕ್ಷೆ ಮಾದ್ವಿ ಶಾ ಮತ್ತು ಸಹೋದರಿ ಜಿಲ್ಲಾ ಪಂಚಾಯತ್ ಸದಸ್ಯ ಕೇಸರ್ ನೇತಮ್ ಅವರೊಂದಿಗೆ ಬಿಜೆಪಿ ಸೇರಿದರು.
ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳಿಂದ ಪ್ರಭಾವಿತರಾದ ಕಮಲೇಶ್ ಶಾ ಮತ್ತು ಅವರ ಕುಟುಂಬ ಸದಸ್ಯರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಲೋಕಸಭಾ ಚುನಾವಣಾ ಉಸ್ತುವಾರಿ ಮಹೇಂದ್ರ ಸಿಂಗ್, ಜಂಟಿ ಉಸ್ತುವಾರಿ ಸತೀಶ್ ಉಪಾಧ್ಯಾಯ ಮತ್ತು ಹಿರಿಯ ಸಚಿವ ಕೈಲಾಶ್ ವಿಜಯವರ್ಗಿಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಾ ಅವರು 2013, 2018 ಮತ್ತು 2023 ರ ವಿಧಾನಸಭಾ ಚುನಾವಣೆಯಲ್ಲಿ ಅಮರವಾರದಿಂದ ಕಾಂಗ್ರೆಸ್ ಟಿಕೆಟ್‍ನಲ್ಲಿ ಗೆದ್ದರು.ಮಧ್ಯಪ್ರದೇಶದಲ್ಲಿ 2019 ರ ಲೋಕಸಭೆ ಚುನಾವಣೆಯಲ್ಲಿ ಏಕೈಕ ಕಾಂಗ್ರೆಸ್ ವಿಜೇತರಾದ ನಕುಲ್ ನಾಥ್ ಅವರು ತಮ್ಮ ತಂದೆ ಕಮಲ್ ನಾಥ್ ಅವರು ಸಂಸತ್ತಿನಲ್ಲಿ ಒಂಬತ್ತು ಅವಧಿಗೆ ಪ್ರತಿನಿಧಿಸಿರುವ ಚಿಂದ್ವಾರದಿಂದ ನಾಮಪತ್ರ ಸಲ್ಲಿಸಿದ್ದಾರೆ.