Tuesday, September 17, 2024
Homeರಾಜ್ಯವಿಪಕ್ಷಗಳಿಂದ ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯುವ ಹುನ್ನಾರ : ಕಾಂಗ್ರೆಸ್‌‍ ಶಾಸಕರು ಕಿಡಿ

ವಿಪಕ್ಷಗಳಿಂದ ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯುವ ಹುನ್ನಾರ : ಕಾಂಗ್ರೆಸ್‌‍ ಶಾಸಕರು ಕಿಡಿ

ಬೆಂಗಳೂರು,ಜು.25- ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರ ಮುಡಾದ ವಿಚಾರದಲ್ಲಿ ಬಿಜೆಪಿ ಅನಗತ್ಯವಾಗಿ ರಾಜಕಾರಣ ಮಾಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಕಪ್ಪು ಮಸಿ ಬಳಿಯುವ ಹುನ್ನಾರ ನಡೆಸಿದೆ. ಜೊತೆಗೆ ವಿಧಾನಸಭೆಯಲ್ಲಿ ಸಭಾಧ್ಯಕ್ಷರ ರೂಲಿಂಗ್‌ ಅನ್ನು ವಿರೋಧಿಸಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ನಿಯಮಬಾಹಿರವಾಗಿ ನಡೆದುಕೊಂಡಿದೆ ಎಂದು ಕಾಂಗ್ರೆಸ್‌‍ ಶಾಸಕರು ಕಿಡಿ ಕಾರಿದ್ದಾರೆ.

ಅರಸೀಕೆರೆ ಕ್ಷೇತ್ರದ ಕೆ.ಎಂ.ಶಿವಲಿಂಗೇಗೌಡ, ಮಳವಳ್ಳಿ ಕ್ಷೇತ್ರದ ಪಿ.ಎಂ.ನರೇಂದ್ರಸ್ವಾಮಿ, ಬಂಗಾರಪೇಟೆ ಕ್ಷೇತ್ರದ ಎಂ.ನಾರಾಯಣಸ್ವಾಮಿ ಅವರು ಇಂದು ವಿಧಾನಸೌಧದ ಸಭೆಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರನ್ನು ಸಮರ್ಥಿಸಿಕೊಂಡರು ಹಾಗೂ ಮುಡಾ ಪ್ರಕರಣದಲ್ಲಿ ದಾಖಲಾತಿಗಳನ್ನು ಬಿಡುಗಡೆ ಮಾಡಿದರು.

ಶಿವಲಿಂಗೇಗೌಡ ಮಾತನಾಡಿ, ಸಿದ್ದರಾಮಯ್ಯ ಅವರು ತಮ ರಾಜಕೀಯ ಜೀವನದ ಉದ್ದಕ್ಕೂ ಒಂದು ಕಪ್ಪು ಚುಕ್ಕೆ ಇಲ್ಲದಂತೆ ನಡೆದುಕೊಂಡಿದ್ದಾರೆ. ಬಿಜೆಪಿ ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇದೆ ಎಂದು ಅಪಪ್ರಚಾರ ಮಾಡುವ ಮೂಲಕ ಕೆಟ್ಟ ಹೆಸರು ತರುವ ಪ್ರಯತ್ನ ನಡೆಸುತ್ತಿದೆ. ಜೆಡಿಎಸ್‌‍ ಮತ್ತು ಬಿಜೆಪಿಯ ಈ ನಾಟಕ ಕಂಪನಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿರುಗೇಟು ನೀಡಿದರು.

ನಾರಾಯಣಸ್ವಾಮಿ ಅವರು ಮಾತನಾಡಿ, ಈ ಹಿಂದೆ ಬ್ರಿಟಿಷರ ಅವಧಿಯಲ್ಲಿ ಸರ್ಕಾರಿ ಜಮೀನನ್ನು ಹರಾಜು ಮೂಲಕ ವಿಲೀನ ಮಾಡಲಾಗುತ್ತಿತ್ತು. ಮೈಸೂರು ಸಮೀಪ ಮೂರು ಎಕರೆ 16 ಗುಂಟೆಯನ್ನು 1995 ರಲ್ಲಿ ಲಿಂಗ ಬಿನ್‌ ಜವರ ಎಂಬುವರು ಹರಾಜು ಮೂಲಕ ಖರೀದಿ ಮಾಡಿದ್ದರು. ಇದು ಯಾವುದೇ ಸರ್ಕಾರದ ನಿಯಮಾವಳಿ ಅಡಿ ಮಂಜೂರಾದ ಅಥವಾ ಷರತ್ತಿಗೆ ಒಳಪಟ್ಟ ಭೂಮಿಯಲ್ಲ ಎಂದು ಸಮರ್ಥಿಸಿಕೊಂಡರು.

ಲಿಂಗ ಅವರಿಗೆ ಮಲ್ಲಯ್ಯ, ಮೈಲಾರಲಿಂಗ ಹಾಗೂ ದೇವರಾಜ್‌ ಎಂಬ ಮೂವರು ಮಕ್ಕಳಿದ್ದರು. ಈ ಹಿಂದಿನ ಪದ್ಧತಿಯಲ್ಲಿ ಅಣ್ಣ-ತಮಂದಿರು ಪಂಚರ ಸಮುಖದಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ಮೂರು ಎಕರೆ 16 ಗುಂಟೆಯನ್ನು ದೇವರಾಜ್‌ ಅವರಿಗೆ ಬಿಟ್ಟುಕೊಡುವ ಹೇಳಿಕೆ ನೀಡಿದ್ದಾರೆ. ಅಧಿಕಾರಿಗಳು ಸಹೋದರರ ಹೇಳಿಕೆ ಆಧರಿಸಿ ದೇವರಾಜ್‌ ಅವರಿಗೆ ಆಸ್ತಿಯ ಸಂಪೂರ್ಣ ಸ್ವಾಧೀನ ಹಾಗೂ ಅಧಿಕಾರ ಪ್ರದತ್ತವಾಗುವ ಮ್ಯುಟೇಶನ್‌ ನೀಡಿದ್ದಾರೆ ಎಂದು ಹೇಳಿದರು.

1992 ರಲ್ಲಿ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ ಸದರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿತ್ತು. ದೇವರಾಜು ಅವರು ಸ್ವಾಧೀನ ಪ್ರಕ್ರಿಯೆಯಿಂದ ತಮ ಭೂಮಿಯನ್ನು ಕೈಬಿಡುವಂತೆ ಮನವಿ ಮಾಡಿದ್ದರು. ಮನವಿ ಆಧರಿಸಿ ಮುಡಾ ಸಮಿತಿ ಚರ್ಚೆ ನಡೆಸಿದ್ದು, ದೇವರಾಜು ಸೇರಿದಂತೆ 19 ಜನರ ಸ್ವತ್ತುಗಳನ್ನು ಸ್ವಾಧೀನ ಪ್ರಕ್ರಿಯೆಯಿಂದ ಮುಡಾ ಕೈಬಿಟ್ಟಿದೆ. 2004ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಮೈದುನ ಮಲ್ಲಿಕಾರ್ಜುನಯ್ಯ ಈ ಭೂಮಿಯನ್ನು ಖರೀದಿಸಿದ್ದಾರೆ. ದೇವರಾಜಯ್ಯ ಅವರ ಪಿತ್ರಾಜಿತ ಆಸ್ತಿಯಾಗಿದ್ದರಿಂದ ಹಾಗೂ ಲಿಂಗ ಅವರು ಹರಾಜು ಮೂಲಕ ಭೂಮಿ ಖರೀದಿ ಮಾಡಿದ್ದರಿಂದ ಮಲ್ಲಿಕಾರ್ಜುನಯ್ಯ ಅವರಿಗೆ ಭೂ ದಾಖಲೆಗಳು ವರ್ಗಾವಣೆಗೊಂಡಿವೆ ಎಂದರು.

ನರೇಂದ್ರ ಸ್ವಾಮಿ, ಬಿಜೆಪಿಯವರು ಉದ್ದೇಶ ಪೂರ್ವಕವಾಗಿ ಪರಿಶಿಷ್ಟ ಜಾತಿಯವರ ಭೂಮಿಯನ್ನು ಖರೀದಿಸಲಾಗಿದೆ ಎಂಬ ಆರೋಪ ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಮಲ್ಲಿಕಾರ್ಜುನ 2004ರಲ್ಲಿ ಜಮೀನು ಖರೀದಿಸಿದರು. 2005ರಲ್ಲಿ ಈ ಜಾಗದ ಭೂ ಪರಿವರ್ತನೆ ಆಗಿದೆ. 2010ರಲ್ಲಿ ಸದರಿ ಭೂಮಿಯನ್ನು ಮಲ್ಲಿಕಾರ್ಜುನಯ್ಯ ತಮ ಸಹೋದರಿ ಹಾಗೂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಅರಿಶಿಣ ಕುಂಕುಮಕ್ಕೆ ದಾನ ಪತ್ರ ಮಾಡಿಕೊಟ್ಟಿದ್ದಾರೆ. ಅನಂತರ ಮುಡಾ ಸದರಿ ಭೂಮಿಗೆ ಅಕ್ರಮವಾಗಿ ಪ್ರವೇಶ ಮಾಡಿ ನಿವೇಶನಗಳನ್ನಾಗಿ ಮಾಡಿ ಹಂಚಿದೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು ನಮ ಭೂಮಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ನಮ ಜಮೀನನ್ನು ಬಿಟ್ಟು ಕೊಡಿ ಅಥವಾ ಸಮಾನಾಂತರವಾದ ಜಾಗ ಕೊಡಿ ಎಂದು ಮನವಿ ಸಲ್ಲಿಸಿದ್ದರು.

ಬಿಜೆಪಿಯ ಅಧಿಕಾರ ಅವಧಿಯಲ್ಲಿ ಮುಡಾದ ಅಧ್ಯಕ್ಷರು ಹಾಗೂ ಇತರರು ಸಾಮಾನ್ಯ ಸಭೆ ನಡೆಸಿ ಪಾರ್ವತಿಯವರ ಅರ್ಜಿಯನ್ನು ಪರಿಶೀಲನೆ ನಡೆಸಿದ್ದಾರೆ. ಶಾಸಕರೂ ಆಗಿದ್ದ ಜಿ.ಟಿ.ದೇವೇಗೌಡ 50:50ರ ಅನುಪಾತ ಅಡಿ ಅರ್ಜಿದಾರರಿಗೆ ಭೂಮಿ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮರಿತಿಬ್ಬೇಗೌಡ ಮೂರು ಎಕರೆ 16 ಗುಂಟೆಯನ್ನು ಅರ್ಜಿದಾರರಿಗೆ ವಾಪಸ್‌‍ ನೀಡಬೇಕು ಎಂದು ಮುಡಾ ಸಭೆಯಲ್ಲಿ ಹೇಳಿದ್ದಾರೆ. ಎಲ್ಲವೂ ಕಾನೂನುಬದ್ಧವಾಗಿ ನಡೆದಿದೆ. ಈಗ ಬಿಜೆಪಿಯವರು ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಲಿಂಗ ಕುಟುಂಬದ ಸದಸ್ಯನ ಮೂಲಕ ಅರ್ಜಿ ಕೊಡಿಸಿ ಗೊಂದಲ ಮೂಡಿಸುತ್ತಿದ್ದಾರೆ. ಇಷ್ಟು ವರ್ಷ ಇಲ್ಲದ ತಕರಾರು ಈಗ ಏಕೆ ಎಂದು ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲು ಮುಡಾ ಪ್ರಕರಣ ಸೂಕ್ತವಾಗಿಲ್ಲ. ಆರು ತಿಂಗಳ ಒಳಗಿನ ಪ್ರಸಕ್ತ ವಿದ್ಯಮಾನವಾಗಿರಬೇಕು ಸಾರ್ವಜನಿಕ ಮಹತ್ವದ್ದಾಗಿರಬೇಕು ಎಂಬ ನಿಯಮಗಳನ್ನು ಶಾಸನಸಭೆ ರಚನೆ ಮಾಡಿದೆ. ಬಿಜೆಪಿ ಅವರು ನೀಡಿದ ನಿಲುವಳಿ ಸೂಚನೆ, ಈ ಯಾವ ನಿಯಮಾವಳಿಗೂ ಅನ್ವಯಿಸುವುದಿಲ್ಲ. ಹೀಗಾಗಿ ಸಭಾಧ್ಯಕ್ಷರು ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ್ದಾರೆ. ಮುಡಾ ಹಗರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.

ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಚರ್ಚೆ ನಡೆಸಲು ಅವಕಾಶ ಇಲ್ಲ. ಆದರೂ ಬಿಜೆಪಿಯವರು ಜೆಡಿಎಸ್‌‍ ನಾಯಕರು ದುರುದ್ದೇಶಪೂರ್ವಕವಾಗಿ ಧರಣಿಯ ನಾಟಕ ಮಾಡುತ್ತಿದ್ದಾರೆ ಎಂದು ಶಿವಲಿಂಗೇಗೌಡ ಟೀಕೆ ಮಾಡಿದರು.

RELATED ARTICLES

Latest News