ಆನಂದ್ (ಗುಜರಾತ್), ಮೇ2- ಕಾಂಗ್ರೆಸ್ ಪಕ್ಷವನ್ನು ಪಾಕಿಸ್ತಾನದ ಶಿಷ್ಯ ಎಂದಿರುವ ಪ್ರಧಾನಿ ನರೇಂದ್ರಮೋದಿ, ಇಲ್ಲಿನ ಯುವರಾಜ (ರಾಹುಲ್)ನನ್ನು ಪ್ರಧಾನಿ ಮಾಡಲು ಹೊರಟಿದೆ ಎಂದು ವ್ಯಂಗ್ಯವಾಡಿದ್ದಾರೆ.
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರ ಸಂಪುಟದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೊಳಗೊಂಡ
ವೀಡಿಯೋವೊಂದನ್ನು ಹಂಚಿಕೊಂಡು ಅವರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ ಎಂಬ ವರದಿಗಳ ನಡುವೆಯೇ ಮೋದಿಯವರಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆನಂದ್ ಮತ್ತು ಖೇಡಾ ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಕೇಂದ್ರ ಗುಜರಾತ್‍ನ ಆನಂದ್ ಪಟ್ಟಣದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಇಲ್ಲಿ ಸಾಯುತ್ತಿದೆ ಎಂದು ಪಾಕಿಸ್ತಾನ ಅಳುತ್ತಿದೆ. ಪಾಕಿಸ್ತಾನದ ನಾಯಕರು ಕಾಂಗ್ರೆಸ್‍ಗಾಗಿ ಪ್ರಾರ್ಥಿಸುತ್ತಿದ್ದಾರೆ.
ಪಾಕಿಸ್ತಾನವು ಶೆಹಜದಾ (ರಾಹುಲ್ ಗಾಂಧಿಯನ್ನು ಉಲ್ಲೇಖಿಸಿ) ಮುಂದಿನ ಪ್ರಧಾನಿ ಮಾಡಲು ಉತ್ಸುಕವಾಗಿದೆ. ಇದು ಆಶ್ಚರ್ಯವೇನಿಲ್ಲ. ಏಕೆಂದರೆ ಕಾಂಗ್ರೆಸ್ ಪಾಕಿಸ್ತಾನದ ಮುರೀಡ್ ಎಂದು ನಮಗೆ ಈಗಾಗಲೇ ತಿಳಿದಿದೆ. ಪಾಕಿಸ್ತಾನ ಮತ್ತು ಕಾಂಗ್ರೆಸ್ ನಡುವಿನ ಪಾಲುದಾರಿಕೆಯನ್ನು ಬಹಿರಂಗಪಡಿಸಲಾಗಿದೆ, ಇದು ದೇಶದ ಶತ್ರುಗಳು ಭಾರತದಲ್ಲಿ ದುರ್ಬಲ ಸರ್ಕಾರವನ್ನು ಬಯಸುತ್ತಾರೆ ಎಂದಿದ್ದಾರೆ.
ಇದೇ ವೇಳೆ ವಿಪಕ್ಷ ನಾಯಕ ಸಲ್ಮಾನ್ ಖುರ್ಷಿದ್ ಅವರ ಸೋದರ ಸೊಸೆ ಮರಿಯಾ ಆಲಂ ಅವರ ವೋಟ್ ಜಿಹಾದ್ ಕರೆ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಈಗ ಇಂಡಿ ಮೈತ್ರಿಕೂಟವು ವೋಟ್ ಜಿಹಾದ್ ಎಂದು ಕರೆಯುತ್ತದೆ. ನಾವು ಇಲ್ಲಿಯವರೆಗೆ ಲವ್ ಜಿಹಾದ್ ಮತ್ತು ಲ್ಯಾಂಡ್ ಜಿಹಾದ್ ಬಗ್ಗೆ ಕೇಳಿದ್ದೇವೆ. ಇದನ್ನು (ವೋಟ್ ಜಿಹಾದ್) ಒಬ್ಬ ವಿದ್ಯಾವಂತ ಮುಸ್ಲಿಂ ಕುಟುಂಬಕ್ಕೆ ಸೇರಿದ ವ್ಯಕ್ತಿ ಹೇಳಿದ್ದಾನೆ, ಯಾರೋ ಅಲ್ಲ ಎಂದು ಕಿಡಿಕಾರಿದ್ದಾರೆ.
ಮದರಸಾದಲ್ಲಿ ಓದಿದ ಜಿಹಾದ್ ಎಂದರೆ ಏನು ಎಂದು ನಿಮ್ಮಗೆಲ್ಲರಿಗೂ ತಿಳಿದಿದೆ ಎಂದು ನಾನು ಭಾವಿಸುತ್ತೇನೆ, ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಮತ್ತು ಇದನ್ನು ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕನೂ ಖಂಡಿಸಲಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಗಳಿಗೆ ಮುಸ್ಲಿಮರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ದೇಶದ ಸಂವಿಧಾನವನ್ನು ಬದಲಾಯಿಸಲು ಬಯಸಿದೆ ಎಂದು ಅವರು ಆರೋಪಿಸಿದ್ದಾರೆ.
ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸುವುದಿಲ್ಲ ಹಾಗೂ ತಾನು ಮತ್ತು ಅದರ ಮಿತ್ರಪಕ್ಷಗಳು ಅಜಾಕಾರದಲ್ಲಿರುವ ರಾಜ್ಯಗಳಲ್ಲಿ ಮುಸ್ಲಿಮರಿಗೆ ಹಿಂಬಾಗಿಲು ಕೋಟಾ ನೀಡುವುದಿಲ್ಲ ಎಂದು ಕಾಂಗ್ರೆಸ್ ಲಿಖಿತವಾಗಿ ನೀಡಲಿ ಎಂದು ಕಾಂಗ್ರೆಸ್‍ಗೆ ಸವಾಲು ಹಾಕಿದರು.
ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರ 14 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕ ನೀಡಿದ್ದರೆ, ಕಾಂಗ್ರೆಸ್ ನೇತೃತ್ವದ ಆಡಳಿತವು ತನ್ನ 60 ವರ್ಷಗಳ ಆಡಳಿತದಲ್ಲಿ ಕೇವಲ 3 ಕೋಟಿ ಮನೆಗಳಿಗೆ ನಲ್ಲಿ ನೀಡಿದೆ ಎಂದು ವ್ಯಂಗ್ಯವಾಡಿದರು.
ಭಾರತವನ್ನು ಇಂದು ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುವ ದೇಶವನ್ನಾಗಿ ನೋಡುತ್ತಿದ್ದಾರೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು 24*7 ಕೆಲಸ ಮಾಡುತ್ತೇನೆ ಎಂಬ ಭರವಸೆ ಇದೆ ಎಂದು ಮೋದಿ ಹೇಳಿದರು.