Friday, April 19, 2024
Homeರಾಜ್ಯತೆರಿಗೆ ಭಯೋತ್ಪಾದನೆಯಿಂದ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಸಾಧ್ಯವಿಲ್ಲ : ಸಿಎಂ ಸಿದ್ದರಾಮಯ್ಯ

ತೆರಿಗೆ ಭಯೋತ್ಪಾದನೆಯಿಂದ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಸಾಧ್ಯವಿಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮಾ.30- ರಾಷ್ಟ್ರದಲ್ಲಿ ತೆರಿಗೆ ಭಯೋತ್ಪಾದನೆಯಿಂದ ಕಾಂಗ್ರೆಸ್ ಪಕ್ಷವನ್ನು ಮಣಿಸಬಹುದೆಂಬ ಭ್ರಮೆಯಲ್ಲಿ ಬಿಜೆಪಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಬಿಜೆಪಿಯು ಐಟಿ, ಇಡಿ, ಸಿಬಿಐ ಮೊದಲಾದ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಣಿಯಲು ಹೊರಟಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಈ ಹುನ್ನಾರದ ಭಾಗವಾಗಿಯೇ ನಮ್ಮ ಪಕ್ಷದ ವಿರುದ್ಧ ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ. ಈ ರೀತಿ ನಮ್ಮ ಪಕ್ಷವನ್ನು ದುರ್ಬಲಗೊಳಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೆಂದು ಬಿಜೆಪಿ ತಿಳಿದುಕೊಂಡಿದ್ದರೆ ಅದು ಆ ಪಕ್ಷದ ಭ್ರಮೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಮೇಲೆ ವರಮಾನ ತೆರಿಗೆ ಪಾವತಿ ಮಾಡದೆ ಇರುವ ಆರೋಪ ಹೊರಿಸಿ 1823 ಕೋಟಿ ರೂ. ಪಾವತಿಸುವಂತೆ ಐಟಿ ಇಲಾಖೆ ನೋಟೀಸ್ ನೀಡಿದೆ. 2017-18ರಲ್ಲಿ ಬಿಜೆಪಿ ಹೆಸರೇ ಇಲ್ಲದ 92 ದಾನಿಗಳಿಂದ 4.5 ಲಕ್ಷ ರೂ. ಮತ್ತು ವಿಳಾಸವೇ ಇಲ್ಲದ 1297 ದಾನಿಗಳಿಂದ 42 ಕೋಟಿ ರೂ. ದೇಣಿಗೆ ಪಡೆದಿರುವುದನ್ನು ನಮ್ಮ ಪಕ್ಷದ ನಾಯಕರು ಬಯಲಿಗೆಳೆದಿದ್ದಾರೆ. ನಮ್ಮ ಪಕ್ಷಕ್ಕೆ ಅನ್ವಯಿಸಿದ ಮಾನದಂಡವನ್ನೇ ಅನ್ವಯಿಸಿದರೆ ಬಿಜೆಪಿ ಕಳೆದ ಏಳು ವರ್ಷಗಳಲ್ಲಿ ನಡೆಸಿರುವ ತೆರಿಗೆ ಉಲ್ಲಂಘನೆಗಾಗಿ 4263 ಕೋಟಿ ರೂ. ಪಾವತಿಸಬೇಕಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅತಿಕ್ರಿಯಾಶಾಲಿಯಾಗಿರುವ ಐಟಿ ಇಲಾಖೆ ಟಿಎಂಸಿ, ಸಿಪಿಐ ಸೇರಿದಂತೆ ಬೇರೆ ವಿರೋಧಪಕ್ಷಗಳ ಮೇಲೆಯೂ ತೆರಿಗೆ ಭಯೋತ್ಪಾದನೆಯ ಅಸ್ತ್ರ ಪ್ರಯೋಗ ಮಾಡಿದೆ. ವಿರೋಧ ಪಕ್ಷಗಳ ಮೇಲೆ ಮುಗಿ ಬಿದ್ದಿರುವ ಐಟಿ ಇಲಾಖೆ ಬಿಜೆಪಿಯ ತೆರಿಗೆ ಉಲ್ಲಂಘನೆ ಬಗ್ಗೆ ಮಾತ್ರ ಕುರುಡಾಗಿದೆ. ಐಟಿ ಇಲಾಖೆಯ ಕಣ್ಣಿಗೆ ಬಟ್ಟೆ ಕಟ್ಟಿರುವವರು ಯಾರು ಎನ್ನುವುದನ್ನು ತಿಳಿಯದಷ್ಟು ದೇಶದ ಜನತೆ ದಡ್ಡರಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಡೈರಿಗಳೆಂದು ಹೇಳಲಾದ ದಾಖಲೆಪತ್ರಗಳನ್ನು ಮುಂದಿಟ್ಟುಕೊಂಡು ತೆರಿಗೆ ಉಲ್ಲಂಘನೆಯ ಆರೋಪ ಮಾಡುತ್ತಿರುವ ಐಟಿ ಇಲಾಖೆಗೆ, ಕರ್ನಾಟಕದಲ್ಲಿಯೇ ಬಯಲಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಡೈರಿಗಳಾಗಲಿ, ಪ್ರಧಾನಿ ನರೇಂದ್ರಮೋದಿಯವರೂ ಫಲಾನುಭವಿ ಎಂದು ಆರೋಪಿಸಲಾಗಿರುವ ಬಿರ್ಲಾ-ಸಹಾರಾ ಡೈರಿಯಾಗಲಿ ಯಾಕೆ ಕಣ್ಣಿಗೆ ಬಿದ್ದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಐಟಿ, ಇಡಿ ಮತ್ತು ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣಾ ಬಾಂಡ್‍ಗಳ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಆಡಳಿತಾರೂಢ ಬಿಜೆಪಿ ಸುಲಿಗೆ ಮಾಡಿರುವುದು ಜಗಜ್ಜಾಹೀರಾಗಿದೆ. ಬಯಲಾಗಿರುವ ಈ ಹಗರಣದಿಂದ ಜನರ ಗಮನ ಬೇರೆ ಕಡೆ ಸೆಳೆಯುವ ಜೊತೆಯಲ್ಲಿ ವಿರೋಧ ಪಕ್ಷಗಳನ್ನೂ ಅಪರಾ ಸ್ಥಾನದಲ್ಲಿ ನಿಲ್ಲಿಸುವ ದುರುದ್ದೇಶದಿಂದಲೇ ಬಿಜೆಪಿ ಸರ್ಕಾರ ವರಮಾನ ತೆರಿಗೆ ವಂಚನೆಯ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ವಿಜಯ್ ಮಲ್ಯ, ನೀರವ್ ಮೋದಿ ಮೊದಲಾದ ಬ್ಯಾಂಕ್ ವಂಚಕರ 10.09 ಲಕ್ಷ ಕೋಟಿ ರೂಪಾಯಿಯಷ್ಟು ಬ್ಯಾಂಕ್ ಸಾಲವನ್ನು ಮನ್ನಾ ಮಾಡಿರುವ ಬಿಜೆಪಿ ಸರ್ಕಾರ ಅವರಿಂದ ಪಡೆದಿರುವ ಕಮಿಷನ್ ಹಣ ಎಷ್ಟು ಎನ್ನುವುದನ್ನು ದೇಶದ ಜನತೆಗೆ ತಿಳಿಸಬೇಕಾಗುತ್ತದೆ ಎಂದರು.

ಕಾಂಗ್ರೆಸ್ ಪಕ್ಷದ ನಿಜವಾದ ಶಕ್ತಿ ಹಣದ ಬಲ ಅಲ್ಲ, ಜನ ಬಲ. ಬಿಜೆಪಿಯಲ್ಲಿ ಹಣ ಬಲ ಇದ್ದರೆ ನಮ್ಮಲ್ಲಿ ಜನಬಲ ಇದೆ. ತೆರಿಗೆ ವಂಚಕರು, ಬ್ಯಾಂಕ್‍ಗಳನ್ನು ಮುಳುಗಿಸಿದವರು, ಗಣಿ ಲೂಟಿಕೋರರು, ಕಾಳಸಂತೆಕೋರರು, ಕಳ್ಳ-ಖದೀಮರೇ ಬಿಜೆಪಿಯ ಬಲ ಎಂದು ಆರೋಪಿಸಿದ್ದಾರೆ.

ಬಿಜೆಪಿ ಎಂದರೆ ಭ್ರಷ್ಟರ ಹಣವನ್ನು ನುಂಗಿ ಅವರಿಗೆ ಪ್ರಾಮಾಣಿಕತೆಯ ಸರ್ಟಿಫಿಕೇಟ್ ನೀಡುವ ವಾಷಿಂಗ್ ಮೆಶೀನ್ ಆಗಿದೆ. ಭ್ರಷ್ಟರು ತಾವು ಮಾಡಿದ ಮಹಾಪಾಪಗಳ ಮೇಲಿನ ತನಿಖೆಯಿಂದ ತಪ್ಪಿಸಿಕೊಳ್ಳಬೇಕಾದರೆ, ಶಿಕ್ಷೆಯಿಂದ ಪಾರಾಗಬೇಕಾದರೆ ಬಿಜೆಪಿ ಸೇರಿಕೊಂಡರೆ ಸಾಕು, ಪಾಪಗಳೆಲ್ಲವೂ ತನ್ನಿಂತಾನೇ ಶುದ್ಧವಾಗುತ್ತದೆ. ಅಲ್ಲಿದ್ದುಕೊಂಡು ಎಷ್ಟು ಬೇಕಾದರೂ ಭ್ರಷ್ಟಾಚಾರ ಮಾಡಬಹುದು, ಜನರ ಹಣ ಲೂಟಿ ಮಾಡಬಹುದು. ಅವರ ಮೇಲೆ ಯಾವ ಕೇಸೂ ದಾಖಲಾಗುವುದಿಲ್ಲ. ಯಾವ ತನಿಖಾ ಸಂಸ್ಥೆಯೂ ಹುಡುಕಿಕೊಂಡು ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಮತ್ತು ಅಧಿಕಾರವನ್ನು ಉಳಿಸಿಕೊಂಡಿದ್ದೇ ಇಂತಹ ಕಳ್ಳ-ಖದೀಮರ ಲೂಟಿಯ ಹಣದಿಂದ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕದಲ್ಲಿ ನಡೆಸುತ್ತಾ ಬಂದ ಆಪರೇಷನ್ ಕಮಲ ಎಂದಿದ್ದಾರೆ. ದೇಶದಲ್ಲಿ 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಎದೆ ತಟ್ಟಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರಮೋದಿಯವರು ವಿರೋಧಪಕ್ಷಗಳನ್ನು ಹಣಿಯಲು ಈ ರೀತಿಯ ಅಕ್ರಮ ಕೃತ್ಯಗಳಿಗೆ ಇಳಿದಿರುವುದನ್ನು ನೋಡಿದರೆ ಅವರಿಗೆ ಗೋಡೆ ಮೇಲಿನ ಬರಹ ಸ್ಪಷ್ಟವಾಗಿ ಕಾಣತೊಡಗಿದೆ ಎಂದರ್ಥ. ಅರಸನ ಮೈಮೇಲಿನ ಬಟ್ಟೆ ಒಂದೊಂದಾಗಿ ಕಳಚಿ ಬೀಳುತ್ತಿದೆ. ದೇಶದ ಜಾಗೃತ ಮತದಾರರ ಮುಂದೆ ಬಿಜೆಪಿ ಮತ್ತು ಅದರ ತಥಾಕಥಿತ ನಾಯಕರೆಲ್ಲರೂ ಬೆತ್ತಲೆಯಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

RELATED ARTICLES

Latest News