ಬೆಂಗಳೂರು, ಏ.17- ಕೇಂದ್ರ ಸರ್ಕಾರದ ನೀತಿಗಳಿಂದ ದೇಶದಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ದುಬಾರಿಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಇಂದು ನಗರದ ಫ್ರೀಡಂಪಾರ್ಕ್‌ನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ನಡೆಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವರಾದ ಹೆಚ್.ಕೆ.ಪಾಟೀಲ್, ಹೆಚ್.ಸಿ.ಮಹದೇವಪ್ಪ, ಕೃಷ್ಣಬೈರೇಗೌಡ, ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ, ಬೈರತಿ ಸುರೇಶ್, ಕೆ.ಜೆ.ಜಾರ್ಜ್, ಕೆ.ಹೆಚ್.ಮುನಿಯಪ್ಪ ಸೇರಿದಂತೆ ಅನೇಕ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬೇಕಿತ್ತಾ ದುಬಾರಿ ಬೆಲೆ ಏರಿಕೆಯ ಸರ್ಕಾರ ಎಂದು ಪ್ರತಿಭಟನಾಕಾರರು ಕೇಂದ್ರದ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ನಿರುದ್ಯೋಗ, ಬೆಲೆ ಏರಿಕೆಯ ಬಗ್ಗೆ ಮಾತನಾಡುವುದಿಲ್ಲ. ಪ್ರತಿಭಾರಿಯೂ ಸುಳ್ಳಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ. ಬಿಜೆಪಿಯಿಂದ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಜನರ ಸಿಟ್ಟಿಗೆ ಕಾರಣವಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ನೆರವಿಗಾಗಿ ಐದು ಗ್ಯಾರಂಟಿಗಳನ್ನು ನೀಡಲಾಗುತ್ತಿದೆ. ಬಿಜೆಪಿ-ಜೆಡಿಎಸ್‌ನವರು ಜನಪರ ಯೋಜನೆಗಳನ್ನು ಟೀಕಿಸಿದರು. ಈ ಮೂಲಕ ವಿರೋಧ ಪಕ್ಷಗಳ ನಾಯಕರು ಜನ ಸಾಮಾನ್ಯರ ಪರವಾದ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಲು ಯತ್ನಿಸಿದರು ಎಂದು ಆರೋಪಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ಪ್ರತಿ ದಿನ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಜನರಿಗೆ ವಾಸ್ತವತೆ ಗೊತ್ತಿದೆ ಎಂದರು.ಸಚಿವ ಕೃಷ್ಣ ಬೈರೇಗೌಡ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಡೀಸೆಲ್ ಬೆಲೆ 500 ಪಟ್ಟು, ಪೆಟ್ರೋಲ್ ಬೆಲೆ 250 ಪಟ್ಟು ಹೆಚ್ಚಾಗಿದೆ. ಅಡುಗೆ ಅನಿಲ ದರ 400 ರೂಪಾಯಿನಿಂದ 900 ರೂಪಾಯಿ ಆಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಶ್ರೀಮಂತರ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ, ಜನ ಸಾಮಾನ್ಯರ ಮೇಲೆ ದುಬಾರಿ ತೆರಿಗೆ ಹಾಕಿ ಬೆಲೆ ಹೆಚ್ಚಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಪ್ರತಿಭಟನೆಯಲ್ಲಿ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು,ಬಿಜೆಪಿವತಿಯಿಂದ ನಡೆಸಲಾಗುತ್ತಿರುವ ಜನಾಕ್ರೋಶ ಯಾತ್ರೆಯನ್ನು ಕಾಂಗ್ರೆಸ್ಸಿಗರು ಲೇವಡಿ ಮಾಡಿದರು.
ಎಐಸಿಸಿ ಪ್ರಮುಖರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದಿಂದ ದೋಷಾರೋಪಣಾ ಪಟ್ಟಿ ಸಲ್ಲಿಸಿರುವುದನ್ನು ಖಂಡಿಸಲಾಯಿತು.ಸಚಿವರಾದ ಕೆ.ಕೆ.ಜಾರ್ಜ್, ಕೆ.ಹೆಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ, ಡಾ.ಎಂ.ಸಿ.ಸುಧಾಕರ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಕೆ ಸೌಮ್ಯ ರೆಡ್ಡಿ, ಎಐಸಿಸಿಯ ಯುವಘಟಕದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮತ್ತಿತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಡಿ.ಕೆ.ಶಿವಕುಮಾರ್ ಸಿಲಿಂಡರ್ ಪ್ರತಿಕೃತಿಯನ್ನು ಹೆಗಲ ಮೇಲೆ ಹೊತ್ತು ಪ್ರತಿಭಟನೆ ವ್ಯಕ್ತ ಪಡಿಸಿದರೆ, ಮುಖ್ಯಮಂತ್ರಿಯವರು ಪ್ರತಿಭಟನೆಯ ಭಿತ್ತಿಪತ್ರವನ್ನು ಪ್ರದರ್ಶಿಸಿದರು.