ಬೆಂಗಳೂರು, ಜ.16– ಆರ್ಎಸ್ಎಸ್ ಸಂಸ್ಥೆಯ ಮುಖ್ಯಸ್ಥರಾದ ಮೋಹನ್ ಭಾಗವತ್ ರವರು ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ಸ್ವಾತಂತ್ರ್ಯಕ್ಕಾಗಿ ಮಡಿದ ವೀರ ಯೋಧರನ್ನು ಅಪಮಾನಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಅವರು ದೇಶದ ಜನರ ಕ್ಷಮೆಯಾಚಿ ಸಬೇಕೆಂದು ಆಗ್ರಹಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಆರ್ಎಸ್ಎಸ್ನವರಿಗೆ ದೇಶದ ಸ್ವಾತಂತ್ರ್ಯದ ಕಾಳಜಿ ಇಲ್ಲ ಎಂಬುದನ್ನು ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ನೇರವಾಗಿ ಆರೋಪ ಮಾಡುತ್ತಾ ಬಂದಿದೆ. ಇವತ್ತಿನ ಆರ್ಎಸ್ನ ಮುಖ್ಯಸ್ಥ ಭಾಗವತ್ ಅವರ ಹೇಳಿಕೆ ಬಿಜೆಪಿ ಆರ್.ಎಸ್.ಎಸ್ನ ಮನಸ್ಥಿತಿಯನ್ನು ಬಹಿರಂಗಪಡಿಸಿದೆ.
ಶ್ರೀರಾಮ ಮಂದಿರ ನಿರ್ಮಾಣದ ನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂಬ ಹೇಳಿಕೆ ನೀಡಿರುವ ಮೋಹನ್ ಭಾಗವತ್ ಅವರ ಹೇಳಿಕೆಯನ್ನ ಬಿಜೆಪಿಯ ಯಾವ ಒಬ್ಬ ನಾಯಕನು ಸಹ ಖಂಡಿಸಿಲ್ಲ ಹಾಗಾದರೇ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಅವರು ಸಮರ್ಥಿಸಿಕೊಳ್ಳುತ್ತಿದ್ದಾರೆಯೇ? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತೀಚಿಗೆ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸುವ ಹೇಳಿಕೆ ನೀಡಿರುವ ಗೃಹ ಸಚಿವ ಅಮಿತ್ ಶಾ ವಿರುದ್ಧ ಬಿಜೆಪಿ ನಾಯಕರು ತಪ್ಪು ಎಂದು ಹೇಳುವ ಧೈರ್ಯ ತೋರಲಿಲ್ಲ . ದೇಶದ ಸ್ವಾತಂತ್ರ್ಯ ಹಾಗೂ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಬಿಜೆಪಿ ಪಕ್ಷದ ನಾಯಕರು ಹಾಗೂ ಆರ್ ಎಸ್ ಎಸ್ ನ ಮುಖಂಡರು ಎಂದು ಸಹ ಭಾಗಿಯಾಗಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎ. ಆನಂದ್, ಪ್ರಕಾಶ್, ಹೇಮರಾಜ್,ಕೆ ಟಿ ನವೀನ್ ಚಂದ್ರ,ಓಬ್ಳೇಶ್,ಚಿನ್ನಿ ಪ್ರಕಾಶ್, ಚಂದ್ರಶೇಖರ, ಉಮೇಶ್, ರಂಜಿತ್, ಸುಂಕದಕಟ್ಟೆ ನವೀನ್, ಕುಶಾಲ್ ಹರುವೆ ಗೌಡ, ಪುಟ್ಟರಾಜು, ನವೀನ್ ಸಾಯಿ, ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.