ಬೆಂಗಳೂರು,ಏ.28- ಕೇಂದ್ರಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಪಕ್ಷವು ಹೆಚ್ಚಿನ ಬರಪರಿಹಾರಕ್ಕೆ ಆಗ್ರಹಿಸಿ ವಿಧಾನಸೌಧ, ವಿಕಾಸಸೌಧದ ನಡುವೆ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂದೆ ಪ್ರತಿಭಟನಾ ಧರಣಿ ನಡೆಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಡಾ.ಎಂ.ಸಿ.ಸುಧಾಕರ್, ಕೃಷ್ಣಾ ಭೈರೇಗೌಡ, ದಿನೇಶ್ ಗುಂಡೂರಾವ್, ಚೆಲುವರಾಯಸ್ವಾಮಿ, ಕೆ.ಎಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ್, ಶಾಸಕ ರಿಜ್ವಾನ್ ಅರ್ಷದ್, ಎಚ್.ಸಿ.ಬಾಲಕೃಷ್ಣ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಲೆಯ ಮೇಲೆ ಖಾಲಿ ಚೊಂಬು ಹೊತ್ತು ಹಾಗೂ ಬರಪರಿಹಾರ ಕೇಳಿದ್ದು 18,174 ಕೋಟಿ ರೂ. ಕೊಟ್ಟಿದ್ದು, 3,454 ಕೋಟಿ ರೂ. ಬರಪರಿಹಾರ ನೀಡುವಲ್ಲಿಯೂ ಮೋಸವಾಗಿದೆ ಎಂಬ ಫಲಕಗಳನ್ನು ಹಿಡಿದು ಧರಣಿ ನಡೆಸಲಾಯಿತು.ಚೊಂಬು ಪ್ರದರ್ಶನ ಮಾಡಿ ಪ್ರಧಾನಿ ನರೇಂದ್ರ ಮೋದಿ ಗೋ ಬ್ಯಾಕ್ ಎಂಬ ಘೋಷಣೆಯನ್ನು ಕಾಂಗ್ರೆಸ್ ನಾಯಕರು ಕೂಗಿದರು.
ರಾಜ್ಯಕ್ಕೆ ನ್ಯಾಯ ಕೊಡಿ ಎಂದು ಘೋಷಣೆ ಕೂಗಲಾಯಿತು. ಮೇಕೆದಾಟು ಯೋಜನೆಗೆ ಅನುಮತಿ ಕೊಡದ ಮಹದಾಯಿ ಯೋಜನೆಗೆ ಬಿಜೆಪಿ ಸರ್ಕಾರ ಕೊಕ್ಕೆ ಹಾಕಿದೆ ಎಂದು ಆರೋಪಿಸಿದ್ದಲ್ಲದೆ, ರೈತರಿಗೆ ನ್ಯಾಯ ಕೊಡಿ, ಪೂರ್ಣ ಪ್ರಮಾಣದ ಬರ ಪರಿಹಾರ ನೀಡಿ ಎಂದು ಆಗ್ರಹಿಸಲಾಯಿತು.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನಾವು ಬರಪರಿಹಾರ ನೀಡುವಂತೆ ಕಳೆದ ಸೆಪ್ಟೆಂಬರ್, ನವೆಂಬರ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಆಗ 35 ಸಾವಿರ ಕೋಟಿ ರೂ.ನಷ್ಟು ನಷ್ಟವಾಗಿದ್ದು, ಆನಂತರ ಈವರೆಗೂ ಒಟ್ಟು ನಷ್ಟದ ಅಂದಾಜು 50 ಸಾವಿರ ಕೋಟಿ ರೂ.ನಷ್ಟಾಗಿದೆ.
ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ, ಕೇಳಿರುವ ಪರಿಹಾರದಲ್ಲಿ ಕೊಟ್ಟಿರುವುದು ಅತ್ಯಂತ ಕಡಿಮೆ. ನಾವು ಅವರಿಂದ ಭಿಕ್ಷೆ ಕೇಳುತ್ತಿಲ್ಲ, ನಮಗಾಗಿ ಹಣ ಕೇಳುತ್ತಿಲ್ಲ, ಬರಪೀಡಿತ ಪ್ರದೇಶಗಳ ರೈತರಿಗೆ ಪರಿಹಾರ ನೀಡಲು ಹಣ ಕೇಳುತ್ತಿದ್ದೇವೆ. ಕೇಂದ್ರ ಯಾವುದೇ ದಯೆ, ಕರುಣೆ ತೋರಿಸಬೇಕಿಲ್ಲ. ನಮ್ಮ ಪಾಲಿನ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿದರು.ರಾಜ್ಯಕ್ಕೆ ಬಿಜೆಪಿ-ಜೆಡಿಎಸ್ ಮುಖಂಡರು ಒಟ್ಟಾಗಿ ಸೇರಿ ದ್ರೋಹ ಬಗೆದಿದ್ದಾರೆ, ಅವರು ರಾಜ್ಯದ ದ್ರೋಹಿಗಳು ಎಂದು ವಾಗ್ದಾಳಿ ನಡೆಸಿದರು.
ಗೃಹಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, 18 ಸಾವಿರ ಕೋಟಿ ರೂ. ಬರಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಕೇಂದ್ರದ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದೆವು. ಬರ ಅಧ್ಯಯನ ಸಮಿತಿ ರಾಜ್ಯದಲ್ಲಿ ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿಯನ್ನೂ ಸಲ್ಲಿಸಿತ್ತು. ಒಂದು ತಿಂಗಳೊಳಗಾಗಿ ಬರಪರಿಹಾರ ನೀಡಬೇಕಿತ್ತು.
ಆದರೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಗಿತ್ತು. ಇದು ಇತಿಹಾಸದಲ್ಲೇ ಮೊದಲನೆಯದು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಪರಿಹಾರ ನೀಡಿದೆ. ಅದು ಮನವಿ ಮಾಡಿದಷ್ಟು ಕೊಟ್ಟಿಲ್ಲ. ಕೇಂದ್ರ ಸರ್ಕಾರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ಕೇಂದ್ರ ಸರ್ಕಾರದ ಹಾಗೂ ರಾಜ್ಯದ ಜನರ ಗಮನ ಸೆಳೆಯುವ ಉದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.