ಬೆಂಗಳೂರು, ಮೇ 19- ಬಡವರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ಯೋಜನೆಗಳಿಂದ ಆರ್ಥಿಕ ದಿವಾಳಿಯಾಗುತ್ತಿದೆ ಎಂದು ಪ್ರತಿಪಾದಿಸುವ ಪ್ರಧಾನಿಯವರಿಗೆ ಶ್ರೀಮಂತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ಲಾಭವಾಗುತ್ತಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷ ಶ್ರೀಮಂತ ಉದ್ಯಮಿಗಳ 20 ಲಕ್ಷ ಕೋಟಿ ಸಾಲವನ್ನು ರೈಟಾಫ್ ಮಾಡಿದರೆ ದೇಶದ ಪ್ರಗತಿಗೆ ಮಾರಕ ಆಗಲಿಲ್ಲವೇ? ಎಂದು ಕಿಡಿಕಾರಿದೆ.
ಶ್ರೀಮಂತ ಉದ್ಯಮಿಗಳ ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿ ದೇಶದ ಬೊಕ್ಕಸಕ್ಕೆ ವಾರ್ಷಿಕ 1.5 ಲಕ್ಷ ಕೋಟಿ ನಷ್ಟವಾಗುತ್ತಿರುವುದು ದೇಶದ ಪ್ರಗತಿಗೆ ಮಾರಕವಲ್ಲವೇ? ಮಾಲ್ಡಿವ್ಸ್, ಅಪಘಾನಿಸ್ತಾನ್, ಭೂತಾನ್ ಸೇರಿದಂತೆ ವಿದೇಶಗಳಿಗೆ ಸಾವಿರಾರು ಕೋಟಿ ಹಣ ನೀಡಿದರೆ ದೇಶದ ಪ್ರಗತಿಗೆ ಮಾರಕವಲ್ಲವೇ? ಪ್ರಧಾನಿ ಓಡಾಟಕ್ಕೆ 8 ಸಾವಿರ ಕೋಟಿ ಕೊಟ್ಟು ವಿಮಾನ ಖರೀದಿಸಿದರೆ ಪ್ರಗತಿಗೆ ಮಾರಕವಲ್ಲವೇ? ಎಂದು ಪ್ರಶ್ನಿಸಿದೆ.
ಅಂದಾಜು 5,000 ಕೋಟಿ ವೆಚ್ಚದ ಉಚಿತ ಪ್ರಯಾಣದ ಯೋಜನೆಯ ಬಗ್ಗೆ ಇಷ್ಟು ಅಸಹನೆ ಹೊಂದಿರುವ ಮೋದಿಯವರ ಜನವಿರೋಧಿ ನಿಲುವು ಜನತೆಗೆ ಅರ್ಥವಾಗಿದೆ ಎಂದು ತಿರುಗೇಟು ನೀಡಿದೆ.