Tuesday, March 18, 2025
Homeರಾಜ್ಯಅಂಬೇಡ್ಕರ್‌ರನ್ನು ಹತ್ತಿಕ್ಕುವ ಕೆಲಸ ಮಾಡಿದ್ದು ಕಾಂಗ್ರೆಸ್‌‍ : ಸಿ.ಟಿ.ರವಿ

ಅಂಬೇಡ್ಕರ್‌ರನ್ನು ಹತ್ತಿಕ್ಕುವ ಕೆಲಸ ಮಾಡಿದ್ದು ಕಾಂಗ್ರೆಸ್‌‍ : ಸಿ.ಟಿ.ರವಿ

Congress suppressing Ambedkar: C.T. Ravi

ಬೆಂಗಳೂರು,ಮಾ.18- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರೇ, ಅಂಬೇಡ್ಕರ್‌ ಅವರ ಏಳಿಗೆಯನ್ನು ಸಹಿಸದೆ, ಅವರನ್ನು ಹತ್ತಿಕ್ಕುವ ಕೆಲಸವನ್ನು ಮಾಡಿದ್ದು ಕಾಂಗ್ರೆಸ್‌‍ ಪಕ್ಷ ಹಾಗೂ ಈ ಪಕ್ಷದ ನೇತಾರ ಪಂಡಿತ್‌ ಜವಾಹರ್‌ ಲಾಲ್‌ ನೆಹರು ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರು ಸಾವರ್ಕರ್‌ ಕುರಿತು ಮಾಡಿದ ಆರೋಪಕ್ಕೆ ಸುದೀರ್ಘ ಪ್ರತಿಕ್ರಿಯೆ ನೀಡಿರುವ ಅವರು, ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಸೋಲಿಸಿದ್ದು ಕಾಂಗ್ರೆಸ್‌‍.

ಅವರ ವಿರುದ್ಧ ಅಭ್ಯರ್ಥಿ ಹಾಕಿದ್ದು, ಅವರ ಸೋಲಿಗೆ ಎಲ್ಲ ಬಗೆಯ ತಂತ್ರಗಾರಿಕೆ ಹೆಣೆದಿದ್ದು, ಎಲ್ಲಾ ಬಗೆಯ ಸಂಪನೂಲಗಳನ್ನು ಕೂಡಿಸಿ ನಾರಾಯಣ ಸದೋಬಾ ಕರ್ಜೋಲ್ಕರ್‌ಗೆ ಕೊಟ್ಟಿದ್ದು ಕಾಂಗ್ರೆಸ್ಸೇ. ಅಂಬೇಡ್ಕರ್‌ ಅವರನ್ನು ಸೋಲಿಸಿದ ಏಕೈಕ ಕಾರಣಕ್ಕೆ ಪದ ಭೂಷಣ ಪ್ರಶಸ್ತಿ ಕೊಟ್ಟಿದ್ದು ಈ ಕಾಂಗ್ರೆಸ್‌‍. ಇದಕ್ಕೆ ಎಲ್ಲ ತರಹದ ದಾಖಲೆಗಳಿವೆ. ಅವೆಲ್ಲ ಸಂಶೋಧಿತವಾಗಿ ದೃಢಪಟ್ಟಿದ್ದು, ಇದು ಐತಿಹಾಸಿಕ ಕರಾಳ ಸತ್ಯ ಸತ್ಯ ಸತ್ಯ ಎಂದು ಗುಡುಗಿದ್ದಾರೆ.

ಇಷ್ಟೆಲ್ಲಾ ಮಾಡಿದ ಕಾಂಗ್ರೆಸ್‌‍ ಇಂದು ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಲು ವೀರ ಸಾವರ್ಕರ್‌ ಅವರು ಸಂಚು ಮಾಡಿದ್ದಾರೆಂದು, ಸಂಶೋಧಿತವಾಗಿ ದೃಢಪಡದ ಯಾವುದೋ ದಾಖಲಾತಿಯನ್ನು ಹಿಡಿದು ಕೆಳಮನೆಯಲ್ಲಿ ಪ್ರಿಯಾಂಕ್‌ ಖರ್ಗೆ ಸುಳ್ಳು ಆಪಾದನೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ದೇಶಪ್ರೇಮವನ್ನೇ ಉಸಿರಾಗಿಸಿ, ಅದೇ ಭಾವವನ್ನು ಲೇಖನಿಯಾಗಿಸಿ, ಈ ದೇಶವನ್ನು ಕಟ್ಟಲು ಶ್ರಮಿಸಿದ ಮಹಾನ್‌ ಚೇತನಕ್ಕೆ, ಯಾರೇ ಸಂಚು ಮಾಡಿದರೂ ಅದು ತಪ್ಪೇ. ನನ್ನನ್ನು ಕೇಳುವುದಾದರೆ ಅದು ಪಂಡಿತ್‌ ಜವಾಹರ್‌ಲಾಲ್‌ ನೆಹರು ಆಗಿರಬಹುದು, ಇಲ್ಲ ಬೇರೆ ಯಾರೂ ಆಗಿರಬಹುದು ಅದು ತಪ್ಪು ತಪ್ಪೇ ಎಂದಿದ್ದಾರೆ.

ಇಷ್ಟೇ ಅಲ್ಲ. ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಖುಷಿಗಾಗಿ, ತಮ ಗೆಳತಿ, ಲೇಡಿ ಎಡ್ವಿನಾ ಮೌಂಟ್‌ ಬ್ಯಾಟನ್‌ಗೆ, ಪಂಡಿತ್‌ ಜವಹಾರ್‌ಲಾಲ್‌ ನೆಹರು ಅವರು ಪತ್ರ ಬರೆದು, ಹಿಂದೂ ಕೋಮುವಾದಿಗಳ ಜೊತೆ ಕೈಜೋಡಿಸಿದ್ದಕ್ಕೆ ಅಂಬೇಡ್ಕರ್‌ರನ್ನು ಸೋಲಿಸಿದ್ದು, ಈ ಸೋಲನ್ನು ಸಂಭ್ರಮಿಸಬೇಕು ಎಂಬ ಬರೆದ ಪತ್ರದ ದಾಖಲೆಯನ್ನು ಮರೆತಿದ್ದೀರಾ ಸಚಿವರೇ? ಎಂದು ಪ್ರಶ್ನಿಸಿದ್ದಾರೆ.

ನನ್ನ ತಿಳಿವಳಿಕೆ ಮತ್ತು ಚಾರಿತ್ರಿಕ ದಾಖಲೆಗಳ ಪ್ರಕಾರ ಹಿಂದೂ ಮಹಾಸಭಾ ಮತ್ತು ಜನಸಂಘ ಅಂಬೇಡ್ಕರ್‌ ಅವರ ವಿರುದ್ಧ ಚುನಾವಣೆಯಲ್ಲಿ ಅಭ್ಯರ್ಥಿಯನ್ನೇ ಹಾಕಿರಲಿಲ್ಲ. ಮಹಾತ ಗಾಂಧೀಜಿಯವರ ಹತ್ಯೆಯ ಸುಳ್ಳು ಆರೋಪದ ಮೇಲೆ ಸಾವರ್ಕರ್‌ ಅವರನ್ನು ಜೈಲಿಗೆ ಕಳಿಸಿದ್ದು ಕಾಂಗ್ರೆಸ್‌‍. ಅಂತಹದರಲ್ಲಿ ಅವರ ಜೊತೆ, ಕೈಜೋಡಿಸಿ ಅಂಬೇಡ್ಕರ್‌ ಅವರನ್ನು ಸೋಲಿಸಿದ್ದು ಸಾವರ್ಕರ್‌ ಎನ್ನುವ ನಿಮ ಆರೋಪದಲ್ಲಿ ಯಾವ ಹುರುಳಿದೆ ಸ್ವಾಮೀ? ಇಂಥಹದ್ದನ್ನು ಯಾರಾದರೂ ನಂಬಲಿಕ್ಕೇ ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇಂದಿನ ಬಿಜೆಪಿಯ ಹಿಂದಿನ ಅವತಾರ ಜನಸಂಘ, ಜನಸಂಘ ಬಹಿರಂಗವಾಗಿ ಅಂಬೇಡ್ಕರ್‌ ಅವರನ್ನು ಬೆಂಬಲಿಸಿತು. ಆದರೆ 3 ತಿಂಗಳು ನಡೆದ ಆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಿತೂರಿಯಿಂದ ಅಂಬೇಡ್ಕರ್‌ ಅವರು ಸೋಲಬೇಕಾಯಿತು. ಸ್ವತಃ ಅಂಬೇಡ್ಕರ್‌ ಅವರೇ ಕಾಂಗ್ರೆಸ್‌‍ ಒಂದು ಉರಿಯುವ ಮನೆ ಎಂದು ಹೇಳಿರುವುದು ಕೂಡ ದಾಖಲಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ದೀನರ-ದಲಿತರ ಹಾಗೂ ದೇಶದ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿದ ಡಾಕ್ಟರ್‌ ಬಿ ಆರ್‌ ಅಂಬೇಡ್ಕರ್‌ ಅವರ ಅಪ್ಪಟ ಅಭಿಮಾನಿಗಳಾಗಿದ್ದರೆ, ನಿಮ ತಂದೆ ಸನಾನ್ಯ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಕಾಂಗ್ರೆಸ್‌‍ ಕಡೆಗೆ ಮುಖ ಮಾಡುತ್ತಿರಲಿಲ್ಲ, ತಮಗೂ ಸಹ ಈ ಸ್ವಾಮಿನಿಷ್ಠೆಯನ್ನು ಪ್ರದರ್ಶಿಸುವ, ಕಾಂಗ್ರೆಸ್ಸನ್ನು ಕೊಂಡಾಡುವ ಪ್ರಮೇಯ ಬರುತ್ತಿರಲಿಲ್ಲ. ಹೆಜ್ಜೆ ಹೆಜ್ಜೆಗೂ ಅಂಬೇಡ್ಕರ್‌ ಅವರನ್ನು ಅವಮಾನಿಸಿ ಮೋಸ ಮಾಡಿದ ಮೇಲೆಯೂ, ಮತ್ತೆ ಪದೇ ಪದೇ ಸುಳ್ಳು ಹೇಳಿ, ಜನಸಾಮಾನ್ಯರನ್ನು ನಂಬಿಸಲು ನೀವು ಮಾಡುತ್ತಿರುವ ವ್ಯರ್ಥ ಪ್ರಯತ್ನ ಎಂದಿಗೂ ಫಲ ನೀಡುವುದಿಲ್ಲ ಯಾವತ್ತೂ ಸತ್ಯಕ್ಕೆ ಜಯ ಎಂದು ಸಿ.ಟಿ.ವಿ ಹೇಳಿದ್ದಾರೆ.

RELATED ARTICLES

Latest News