Friday, November 22, 2024
Homeರಾಜ್ಯಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಚಿವರ ತಲೆ ದಂಡ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಚಿವರ ತಲೆ ದಂಡ

ಬೆಂಗಳೂರು,ಜ.8- ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೂ ಸಚಿವರನ್ನು ವೀಕ್ಷಕರನ್ನಾಗಿ ನೇಮಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲ್ಲದೇ ಇರುವ ಕ್ಷೇತ್ರಗಳ ಉಸ್ತುವಾರಿ ಸಚಿವರ ತಲೆದಂಡದ ಎಚ್ಚರಿಕೆ ರವಾನಿಸಿದೆ. ಬಹುತೇಕ ಜಿಲ್ಲೆಗಳಲ್ಲಿ ಆಯಾ ಉಸ್ತುವಾರಿಗಳೇ ಸಚಿವರಾಗಿದ್ದಾರೆ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ್, ಬಳ್ಳಾರಿ ಕ್ಷೇತ್ರಕ್ಕೆ ಬಿ.ನಾಗೇಂದ್ರ, ಬೀದರ್ ಕ್ಷೇತ್ರಕ್ಕೆ ಈಶ್ವರ್ ಖಂಡ್ರೆ, ಚಿಕ್ಕಮಗಳೂರು, ಉಡುಪಿ ಕ್ಷೇತ್ರಕ್ಕೆ ಕೆ.ಜೆ.ಜಾರ್ಜ್, ಚಿತ್ರದುರ್ಗ ಕ್ಷೇತ್ರಕ್ಕೆ ಸಚಿವ ಡಾ.ಸುಧಾಕರ್, ದಕ್ಷಿಣ ಕನ್ನಡ ಕ್ಷೇತ್ರಕ್ಕೆ ದಿನೇಶ್ ಗುಂಡೂರಾವ್, ದಾವಣಗೆರೆ ಕ್ಷೇತ್ರಕ್ಕೆ ಎಸ್.ಎಸ್.ಮಲ್ಲಿಕಾರ್ಜುನ್, ಧಾರವಾಡ ಕ್ಷೇತ್ರಕ್ಕೆ ಸಂತೋಷ್ ಲಾಡ್, ಕಲ್ಬುರ್ಗಿ ಕ್ಷೇತ್ರಕ್ಕೆ ಪ್ರಿಯಾಂಕ್ ಖರ್ಗೆ, ಹಾಸನ ಕ್ಷೇತ್ರಕ್ಕೆ ಕೆ.ಎನ್.ರಾಜಣ್ಣ, ಹಾವೇರಿ ಕ್ಷೇತ್ರಕ್ಕೆ ಶಿವಾನಂದ ಪಾಟೀಲ್, ಕೊಪ್ಪಳಕ್ಕೆ ಶಿವರಾಜ ತಂಗಡಗಿ, ಮಂಡ್ಯಕ್ಕೆ ಎನ್.ಚೆಲುವರಾಯಸ್ವಾಮಿ, ಶಿವಮೊಗ್ಗದ ಸಚಿವ ಮಧುಬಂಗಾರಪ್ಪ, ತುಮಕೂರಿನ ಡಾ.ಜಿ.ಪರಮೇಶ್ವರ್, ಉತ್ತರ ಕನ್ನಡದ ಮಂಕಾಳ್ ವೈದ್ಯ ಅವರಿಗೆ ಅದೇ ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ.

ಬೆಂಗಳೂರು ಗ್ರಾಮಾಂತರಕ್ಕೆ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಬದಲಾಗಿ ಭೈರತಿ ಸುರೇಶ್, ಬೆಂಗಳೂರು ನಗರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಸ್ತುವಾರಿ ಸಚಿವರಾಗಿದ್ದರು. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕೃಷ್ಣಭೈರೇಗೌಡ, ಬೆಂಗಳೂರು ಕೇಂದ್ರಕ್ಕೆ ಜಮೀರ್ ಅಹಮ್ಮದ್ ಖಾನ್, ಬೆಂಗಳೂರು ದಕ್ಷಿಣಕ್ಕೆ ರಾಮಲಿಂಗಾರೆಡ್ಡಿ ಅವರುಗಳನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ.

ಚಾಮರಾಜನಗರ ಮೀಸಲು ಕ್ಷೇತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರ ಬದಲಾಗಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಮೈಸೂರು, ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಆಕಾಂಕ್ಷಿಯಾಗುವ ಸಾಧ್ಯತೆ ಇದೆ. ಇಲ್ಲಿಗೆ ಸಿದ್ದರಾಮಯ್ಯ ಅವರ ಆಪ್ತ ಕೆ.ವೆಂಕಟೇಶ್ ವೀಕ್ಷಕರಾಗಿದ್ದಾರೆ. ಮೈಸೂರು ಜಿಲ್ಲೆಯ ಉಸ್ತುವಾರಿಯಾಗಿ ಎಚ್.ಸಿ.ಮಹದೇವಪ್ಪರ ಜವಾಬ್ದಾರಿ ಚಾಮರಾಜನಗರ ಕ್ಷೇತ್ರಕ್ಕೆ ಮೀಸಲಾಗಿದೆ. ಕೊಡಗು ಜಿಲ್ಲೆಯ ಉಸ್ತುವಾರಿಯಾಗಿರುವ ಎನ್.ಎಸ್.ಬೋಸರಾಜು ಅವರಿಗೆ ಸ್ವಂತ ಜಿಲ್ಲೆ ರಾಯಚೂರಿನ ಜವಾಬ್ದಾರಿ ವಹಿಸಲಾಗಿದೆ.

ಸಂಸದೆ ಸುಮಲತಾರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ..? : ಹೆಚ್‌ಡಿಕೆ

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಡಾ.ಎಂ.ಸಿ.ಸುಧಾಕರ್ ಸಚಿವರಾಗಿದ್ದರೆ ಅವರ ಬದಲಾಗಿ ಕೋಲಾರದ ಮೂಲದವರಾದ ಕೆ.ಎಚ್.ಮುನಿಯಪ್ಪ ಅವರನ್ನು, ಕೋಲಾರಕ್ಕೆ ಡಾ.ಎಂ.ಸಿ.ಸುಧಾಕರ್ ಅವರುಗಳನ್ನು ಉಸ್ತುವಾರಿಗಳಾಗಿ ಅದಲು ಬದಲು ಮಾಡಲಾಗಿದೆ. ಬೆಳಗಾವಿ ಕ್ಷೇತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಚಿಕ್ಕೋಡಿ ಕ್ಷೇತ್ರಕ್ಕೆ ಹಿರಿಯ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ.

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಯಾದಗಿರಿ ಜಿಲ್ಲೆಯ ಉಸ್ತುವಾರಿ ಶರಣ ಬಸಪ್ಪ ದರ್ಶನಾಪೂರ್ ಅವರಿಗೆ ಲೋಕಸಭೆ ಕ್ಷೇತ್ರಗಳ ವೀಕ್ಷಕರ ಜವಾಬ್ದಾರಿ ನೀಡಲಾಗಿಲ್ಲ. 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷ ಕ್ಷೇತ್ರವಾರು ವೀಕ್ಷಕರ ನೇಮಕಾತಿ ಜೊತೆಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲೇಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೀಕ್ಷಕರಾಗಿರುವ ಸಚಿವರ ಮೇಲೆ ನಿಗಾ ವಹಿಸಲಿದ್ದು, ಕಾಲಕಾಲಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಜುಲೈನಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಚರ್ಚೆಗಳಿದ್ದು, ಲೋಕಸಭೆ ಚುನಾವಣೆಯಲ್ಲಿ ಉದ್ದೇಶಪೂರ್ವಕವಾದ ಸೋಲಿಗೆ ಸಚಿವರ ತಲೆದಂಡ ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News