ಬೆಂಗಳೂರು, ಮೇ.9 – ಪಹಲ್ಯಾಮ್ ದಾಳಿಗೆ ಪ್ರತಿಕಾರವಾಗಿ ಭಯೋತ್ಪಾದನೆ ವಿರುದ್ಧ ಭಾರತೀಯ ಸೇನೆ ನಡೆಸಿದ ಸಿಂದೂರ್ ಕಾರ್ಯಾಚರಣೆ ಹಾಗೂ ಇತರ ಕ್ರಮಗಳನ್ನು ಬೆಂಬಲಿಸಿ ಬೆಂಗಳೂರಿನಲ್ಲಿಂದು ತಿರಂಗ ಯಾತ್ರೆ ನಡೆಯಿತು.
ಕೆ.ಆರ್.ಸರ್ಕಲ್‌ನಿಂದ ವಿಧಾನಸೌಧ ಹಾಗೂ ಹೈಕೋರ್ಟ್‌ನ ನಡುವಿನ ಮುಖ್ಯರಸ್ತೆಯ ಮಾರ್ಗವಾಗಿ ಚಿನ್ನಸ್ವಾಮಿ ಸ್ಟೇಡಿಯಂ ಕ್ರೀಡಾಂಗಣದ ವೃತ್ತದವರೆಗೂ ನಡೆದ ತಿರಂಗ ಯಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್, ಎನ್.ಎಸ್.ಬೋಸರಾಜು, ಡಾ.ಎಂ.ಸಿ.ಸುಧಾಕರ್, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಎಚ್.ಸಿ.ಮಹದೇವಪ್ಪ, ಹಲವು ಮಂದಿ ಶಾಸಕರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಪ್ರಮುಖರು ಭಾಗವಹಿಸಿದ್ದರು.

ಎಲ್ಲರೂ ತಮ್ಮ ಕೈಯಲ್ಲಿ ತ್ರಿವರ್ಣ ರಾಷ್ಟ್ರಧ್ವಜ ಹಿಡಿದಿದ್ದರು. ರಸ್ತೆಯುದ್ದಕ್ಕೂ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ತಿರಂಗ ಯಾತ್ರೆಯಲ್ಲಿ ಜನಜಂಗುಳಿಯೇ ನೆರೆದಿತ್ತು. ತ್ರಿವರ್ಣ ಧ್ವಜಗಳ ಹಾರಾಟ ಬೆಂಗಳೂರಿಗೆ ಹೊಸ ಕಳೆಯನ್ನೇ ತಂದುಕೊಟ್ಟಿತು. ತಿರಂಗ ಧ್ವಜದ ಹಾರಾಟದಿಂದಾಗಿ ಮುಖಂಡರುಗಳ ಮುಖಗಳೇ ಕಾಣದಂತೆ ಮುಚ್ಚಿಹೋಗಿತ್ತು. ಸಮುದ್ರದ ಅಲೆಯ ಮಾದರಿಯಲ್ಲಿ ತಿರಂಗ ದ್ಭವ ಹಿಡಿದ ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಬಂದಿದ್ದು ನಯನ ಮನೋಹರವಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಕೂಡ ಕಾರ್ಯಕರ್ತರ ಪಾದಯಾತ್ರೆಯ ಜನಜಂಗುಳಿ ನಡುವೆ ನಡೆದುಬಂದಿದ್ದು ಪೊಲೀಸರಿಗೆ ಭದ್ರತೆಯ ಪೀಕಲಾಟ ಕಂಡುಬಂದಿತ್ತು. ಒಂದು ಹಂತದಲ್ಲಿ ಹಗ್ಗ ಬಳಸಿ ಮುಖ್ಯಮಂತ್ರಿ ಹಾಗೂ ಗಣ್ಯರಿಗೆ ವಿಶೇಷ ರಕ್ಷಣೆ ನೀಡುವ ಪ್ರಯತ್ನವನ್ನು ಪೊಲೀಸರು ಮಾಡಿದರು. ಆದರೆ ಅದಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಅವಕಾಶ ನಿರಾಕರಿಸಿದರು. ಜನರ ನಡುವೆಯೇ ಕಾಂಗ್ರೆಸ್ ನಾಯಕರೂ ಕೂಡ ತಿರಂಗ ಯಾತ್ರೆಗೆ ಹೆಜ್ಜೆ ಹಾಕಿದರು.

ವಂದೇಮಾತರಂ ಹಾಗೂ ಭಾರತ್ ಮಾತಾ ಕಿ ಜೈ ಘೋಷಣೆಗಳು ಮೊಳಗಿದವು. ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಬೆಂಬಲಿಸುವ ಸೇನೆಯ ಬಗ್ಗೆ ಶ್ಲಾಘಿಸುವ ಭಿತ್ತಿಪತ್ರಗಳು ಕಂಡುಬಂದವು.
ತಿರಂಗ ಯಾತ್ರೆಯಲ್ಲಿನ 3 ಕಿ.ಮೀ. ಉದ್ದದ ರಸ್ತೆಯಲ್ಲೂ ಏಕಮುಖ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ನಿನ್ನೆ ಮಧ್ಯಾಹ್ನ ಇದ್ದಕ್ಕಿದ್ದಂತೆ ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ತಿರಂಗ ಯಾತ್ರೆ ನಡೆಸುವ ನಿರ್ಧಾರವನ್ನು ಕೈಗೊಂಡರು. ಏಕಾಏಕಿ ಪ್ರಕಟಿಸಲಾದ ಈ ಕಾರ್ಯಕ್ರಮ ಸರ್ಕಾರಿ ಪ್ರಾಯೋಜಿತವಾಗಿದ್ದು, ಯಾವುದೇ ಪಕ್ಷಬೇಧವಿಲ್ಲದೆ ಎಲ್ಲರೂ ಭಾಗವಹಿಸಬೇಕು ಎಂದು ಕರೆ ನೀಡಿದ್ದರು. ಆದರೆ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವ ಪಕ್ಷದ ಮುಖಂಡರೂ ತಿರಂಗ ಯಾತ್ರೆಯಲ್ಲಿ ಭಾಗವಹಿಸಲಿಲ್ಲ.