ಬೆಂಗಳೂರು,ಫೆ.17- ಲೋಕಸಭೆ ಚುನಾವಣೆಗೆ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶದ ಮೂಲಕ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಪುಟದ ಎಲ್ಲಾ ಸಚಿವರು, ಶಾಸಕರು, ಕೆಪಿಸಿಸಿ ಪದಾಕಾರಿಗಳು, ಎಐಸಿಸಿ ಕಾರ್ಯದರ್ಶಿಗಳು, ಪ್ರಮುಖ ನಾಯಕರು ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಕೋಮು ಸೂಕ್ಷ್ಮ ಹಾಗೂ ಬಿಜೆಪಿಯ ಭದ್ರಕೋಟೆಯಾಗಿರುವ ಕರಾವಳಿ ಭಾಗದಿಂದಲೇ ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ. ಕಳೆದ ತಿಂಗಳೇ ನಡೆಯಬೇಕಿದ್ದ ಬೃಹತ್ ಕಾರ್ಯಕ್ರಮ ಕೆಲವು ಕಾರಣಗಳಿಂದ ಮುಂದೂಡಿಕೆಯಾಗಿತ್ತು. ಬಜೆಟ್ ಮಂಡನೆ ಬಳಿಕ ನಡೆಯುತ್ತಿರುವ ಈ ಸಮಾವೇಶ ಕಾಂಗ್ರೆಸ್‍ಗೆ ಆನೆ ಬಲ ತಂದುಕೊಟ್ಟಂತಾಗಿದೆ. ರಾಜ್ಯದ ಎಲ್ಲಾ ಭಾಗಗಳಿಂದಲೂ ಪಕ್ಷದ ಕಾರ್ಯಕರ್ತರು ಸಮಾವೇಶಕ್ಕಾಗಿ ಮಂಗಳೂರಿಗೆ ಆಗಮಿಸಿದ್ದರು. ಸ್ಥಳೀಯ ನಾಯಕರು ಸಮಾವೇಶಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದ್ದು, ಮಂಗಳೂರಿನಾದ್ಯಂತ ಫ್ಲಕ್ಸ್, ಬ್ಯಾನರ್‍ಗಳ ಅಬ್ಬರ ಜೋರಾಗಿತ್ತು.
ಕೇಜ್ರಿವಾಲ್ ಖುದ್ದು ಹಾಜರಿಗೆ ವಿನಾಯ್ತಿ ನೀಡಿದ ನ್ಯಾಯಾಲಯ
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಮಾವೇಶದ ಉಸ್ತುವಾರಿ ವಹಿಸಿಕೊಂಡಿದ್ದರು. ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಿ, ಚುನಾವಣೆಯ ರಣೋತ್ಸಾಹವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ತಾವು ಬಜೆಟ್ ಮಂಡಿಸಿದ್ದು, ಕೇಂದ್ರ ಸರ್ಕಾರದ ಅಸಹಕಾರದ ಹೊರತಾಗಿಯೂ ಆರ್ಥಿಕ ಶಿಸ್ತನ್ನು ಪಾಲಿಸಿದ್ದೇನೆ. ಕೇಂದ್ರ ಸರ್ಕಾರ ನಿರಂತರವಾಗಿ ರಾಜ್ಯದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಬಿಜೆಪಿಯ 25 ಮಂದಿ ಸಂಸದರು ಮತ್ತು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಆರ್ಥಿಕ ತಾರತಮ್ಯದ ವಿರುದ್ಧ ಬಾಯಿ ಬಿಡುತ್ತಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದ ಪ್ರತಿಯೊಂದು ಬಡ ಕುಟುಂಬಕ್ಕೂ ವರ್ಷಕ್ಕೆ 50 ರಿಂದ 55 ಸಾವಿರ ರೂ.ಗಳಷ್ಟು ಆರ್ಥಿಕ ನೆರವನ್ನು ನೀಡುತ್ತಿದೆ. ಇದಕ್ಕಾಗಿ ಬಜೆಟ್‍ನಲ್ಲಿ 52 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ದೇಶ ಮತ್ತು ರಾಜ್ಯ ದಿವಾಳಿಯಾಗಲಿದೆ ಎಂದು ಟೀಕಿಸಿದ್ದವರೇ ನಮ್ಮ ಗ್ಯಾರಂಟಿ ಪದವನ್ನು ಹೈಜಾಕ್ ಮಾಡಿದ್ದಾರೆ ಎಂದು ಪ್ರಧಾನಿ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರ ನಿರ್ಮಾಣದಲ್ಲಿ ವಕೀಲರ ಪಾತ್ರ ಮಹತ್ವದ್ದು : ಚಂದ್ರಚೂಡ್
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಕಾರ್ಯಕರ್ತರು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ನಾವು ಜನರ ಬದುಕಿನ ಸುಧಾರಣೆಗಾಗಿ ಪ್ರಯತ್ನ ಮಾಡುತ್ತಿದ್ದೇವೆ. ಬಿಜೆಪಿಯವರು ಭಾವನಾತ್ಮಕ ರಾಜಕಾರಣದ ಮೂಲಕ ಸಮಾಜವನ್ನು ವಿಭಜಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.