ಬೆಂಗಳೂರು,ಫೆ.16– ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್ ಮಂಡನೆಗೆ ಕೆಲವೇ ದಿನ ಬಾಕಿ ಇರುವ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಅಸಮಾಧಾನಗಳು ಕೇಳಿಬರಲಾರಂಭಿಸಿವೆ.
ಪಂಚಖಾತ್ರಿ ಯೋಜನೆಗಳನ್ನೇ ನಂಬಿಕೊಂಡು ಕುಳಿತರೆ ದೆಹಲಿಯಲ್ಲಾದಂತೆ ಕರ್ನಾಟಕದಲ್ಲೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುಗ್ಗರಿಸಬೇಕಾಗುತ್ತದೆ. ಹೀಗಾಗಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳತ್ತ ಗಮನ ಹರಿಸಬೇಕು ಎಂದು ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಿರಿಯ ನಾಯಕರು ಪದೇಪದೇ ಎಚ್ಚರಿಸಲಾರಂಭಿಸಿದ್ದಾರೆ.
ಪಂಚಖಾತ್ರಿ ಯೋಜನೆಗಳಿಗೆ ಸರಿಸುಮಾರು 59 ಸಾವಿರ ಕೋಟಿ ರೂ.ಗಳು ಖರ್ಚಾಗುತ್ತಿದ್ದು, ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲದಂತಾಗಿದೆ. ಅದರಲ್ಲೂ ಶಾಸಕರ ಕ್ಷೇತ್ರಗಳಿಗೆ ಅನುದಾನದ ಕೊರತೆಯಾಗಲಿದ್ದು, ಹಲವಾರು ಮಂದಿ ಬಹಿರಂಗವಾಗಿಯೇ ತಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಪಂಚಖಾತ್ರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿಯೇ ವಿಧಾನಸಭೆಯ ಮೂರು ಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂಬುದು ಮುಖಂಡರ ವಾದ. ಆದರೆ ಇದನ್ನು ಅಲ್ಲಗಳೆದಿರುವ ಬಹುತೇಕ ನಾಯಕರು ಅರವಿಂದ್ ಕೇಜ್ರಿವಾಲ್ ದೇಶದಲ್ಲೇ ಮೊದಲ ಬಾರಿಗೆ ಉಚಿತ ಕೊಡುಗೆಗಳನ್ನು ಆರಂಭಿಸಿದ ನಾಯಕ. ಆದರೆ ಜನ ವಿಧಾನಸಭೆ ಚುನಾವಣೆಯಲ್ಲಿ ಅವರ ಕೈ ಹಿಡಿಯಲಿಲ್ಲ. ಈಗಲೂ ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಸಾಕಷ್ಟು ಹಾನಿಯನ್ನು ಅನುಭವಿಸಬೇಕಾಗುತ್ತದೆ ಎಂದು ಮುಖಂಡರುಗಳು ಎಚ್ಚರಿಕೆ ನೀಡುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮುಂಬರುವ ಬಜೆಟ್ನಲ್ಲಿ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಆಧರಿಸಿದ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಕೆಲ ಮುಖಂಡರು ಒತ್ತಾಯಿಸುತ್ತಿದ್ದಾರೆ.
ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಬೇರೆ ಯಾವುದೇ ರೀತಿಯ ಆರ್ಥಿಕ ಹೊರೆಯನ್ನು ನಿಭಾಯಿಸುವುದು ಸುಲಭಸಾಧ್ಯವಲ್ಲ ಎಂದು ಸಿದ್ದರಾಮಯ್ಯ ಎಲ್ಲರನ್ನೂ ಸಮಾಧಾನಪಡಿಸುತ್ತಲೇ ಇದ್ದಾರೆ.
ಕೆಲ ಶಾಸಕರು ಸಿದ್ದರಾಮಯ್ಯನವರಿಗೆ ಪ್ರತಿಯಾಗಿ ಮಾತನಾಡಲಾಗದೆ ಮೌನಕ್ಕೆ ಶರಣಾಗಿದ್ದರೆ ಇನ್ನೂ ಕೆಲವರು ಮುಲಾಜಿಲ್ಲದೆ ತಮ ಅಭಿಪ್ರಾಯಗಳನ್ನು ಹೇಳಿ ಮುಜುಗರ ಉಂಟುಮಾಡುತ್ತಿದ್ದಾರೆ.
ಈ ಬಾರಿ 16ನೇ ಬಜೆಟ್ ಮಂಡಿಸುವ ಸಿದ್ದರಾಮಯ್ಯ ಅವರು ಪಂಚಖಾತ್ರಿ ಯೋಜನೆಗಳನ್ನು ಅನಿವಾರ್ಯವಾಗಿ ಮುಂದುವರೆಸುವ ಒತ್ತಡಕ್ಕೆ ಸಿಲುಕಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಶಾಸಕರ ಬೇಡಿಕೆಗಳನ್ನು ಪರಿಗಣಿಸಬೇಕಾಗಿದೆ. ಅನಾರೋಗ್ಯದ ನಡುವೆಯೂ ಬಜೆಟ್ ಮಂಡನೆಗೆ ಸಾಕಷ್ಟು ಪೂರ್ವ ತಯಾರಿ ನಡೆಸಿರುವ ಸಿದ್ದರಾಮಯ್ಯ ಎಲ್ಲವನ್ನೂ ಸಂಭಾಳಿಸುವ ಭರವಸೆ ನೀಡಿದ್ದಾರೆ.
ಸಚಿವ ಸ್ಥಾನದಲ್ಲಿ ಅಸಮಾಧಾನಗೊಂಡಿರುವ ಹಲವಾರು ನಾಯಕರು ಪಂಚಖಾತ್ರಿ ಯೋಜನೆಗಳ ವಿರುದ್ಧವೇ ಪರೋಕ್ಷವಾಗಿ ವಾಗ್ದಾಳಿ ನಡೆಸಿ ಸ್ವಪಕ್ಷದಲ್ಲೇ ಅಸಹನೆ ಸೃಷ್ಟಿಸುತ್ತಿದ್ದಾರೆ.
ಒಂದೆಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನೆಪದಲ್ಲಿ ಸಾಕಷ್ಟು ಗೊಂದಲಗಳಾಗುತ್ತಿವೆ. ಅಲ್ಲಲ್ಲಿ ಗುಂಪುಗಾರಿಕೆ, ಪ್ರತ್ಯೇಕ ಸಭೆಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಅವರ ಬಣ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂದು ಒಳಗೊಳಗೇ ವದಂತಿಗಳನ್ನು ಹರಿಯಬಿಡುತ್ತಿದೆ.
ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಆಮ್ಆದಿ ಪಕ್ಷಗಳಿಗಾದ ಸೋಲು ರಾಜಕೀಯ ಪಾಠವಾಗಬೇಕು. ಕಾಂಗ್ರೆಸ್ ಪಕ್ಷ ಕೇವಲ ಪಂಚಖಾತ್ರಿ ಯೋಜನೆಗಳನ್ನೇ ನಂಬಿಕೊಂಡು ಕುಳಿತುಕೊಂಡರೆ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಪದೇಪದೇ ಎಚ್ಚರಿಕೆಗಳನ್ನು ನೀಡುತ್ತಿದ್ದು, ಕೆಲವರು ಪತ್ರ ಬರೆದು ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.