ಬೆಂಗಳೂರು,ಸೆ.26-ರಾಹುಲ್ ಗಾಂಧಿ ಯವರ ಭಾರತ ಐಕ್ಯತಾ ಯಾತ್ರೆಗೆ ಪ್ರತಿಯಾಗಿ ಪ್ರತಿಭಟನೆ ಹಾಗೂ ಪತ್ರಿಕಾಗೋಷ್ಟಿಗಳನ್ನು ನಡೆಸಲು ಮುಂದಾಗಿರುವ ಬಿಜೆಪಿಗೆ ಮುಂದಿನ ದಿನಗಳಲ್ಲಿ ತಿರುಗೇಟು ನೀಡಲು ಕಾಂಗ್ರೆಸ್ ತಯಾರಿ ನಡೆಸಿದೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 350 ಕಿ.ಮೀ ಉದ್ದದ ಪಾದಯಾತ್ರೆಯನ್ನು ರಾಹುಲ್ ಗಾಂ ಹಮ್ಮಿಕೊಂಡಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ, ಅಗತ್ಯವಸ್ತುಗಳ ಮೇಲೆ ಜಿಎಸ್ಟಿ ಹೇರಿಕೆ, ಕೋಮುಗಲಭೆಗಳು ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಭಾರತ ಐಕ್ಯತಾ ಯಾತ್ರೆ ನಡೆಯುತ್ತಿದೆ.
ಇದುವರೆಗೂ ತಮಿಳುನಾಡಿನಲ್ಲಿ ಯಾತ್ರೆ ಸುಗಮವಾಗಿ ನಡೆದಿದ್ದು, ಕೇರಳದಲ್ಲಿ ನಾನಾ ಜಿಲ್ಲೆಗಳನ್ನು ಹಾದು ಸೆ.30ರಂದು ಕರ್ನಾಟಕ ಪ್ರವೇಶಿಸಲಿದೆ. ರಾಜ್ಯದಲ್ಲಿ 21 ದಿನಗಳ ಯಾತ್ರೆಯನ್ನು ದುರ್ಬಲಗೊಳಿಸಲು ಬಿಜೆಪಿ ಹಲವು ರೀತಿಯ ತಯಾರಿಗಳನ್ನು ನಡೆಸಿದೆ. ಪ್ರತಿದಿನ ಪ್ರತಿಕಾಗೋಷ್ಠಿಗಳ ಮೂಲಕ ರಾಹುಲ್ ಗಾಂಯವರಿಗೆ ಪ್ರಶ್ನೆ ಕೇಳುವುದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಅವಯಲ್ಲಿನ ಭ್ರಷ್ಟಾಚಾರಗಳನ್ನು ಪ್ರಸ್ತಾಪಿಸುವುದು ಸೇರಿದಂತೆ ಹಲವು ತಯಾರಿಗಳನ್ನು ಬಿಜೆಪಿ ನಡೆಸಿದೆ.
ಕಾಂಗ್ರೆಸ್ ನಾಯಕರಿಗೆ ಇದು ಬಿಸಿ ತುಪ್ಪವಾಗಿದ್ದು, ಬಿಜೆಪಿಗೆ ಈಗಾಗಲೇ ಪೇ ಸಿಎಂ ಅಭಿಯಾನದ ಮೂಲಕ ಬಿಸಿ ಮುಟ್ಟಿಸಲಾಗಿದೆ. ರಾಹುಲ್ ಗಾಂಧಿಯವರ ಯಾತ್ರೆಗೆ ಅಡ್ಡಿಪಡಿಸುವ ಯತ್ನ ನಡೆಸಿದರೆ ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ಕೂಡ ತಯಾರಿ ಮಾಡಿಕೊಳ್ಳುತ್ತಿದೆ.
ಭಾರತ ಐಕ್ಯತಾ ಯಾತ್ರೆಯ ಬಳಿಕ ನವೆಂಬರ್ ಮೊದಲ ವಾರದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಅದಕ್ಕೆ ಪ್ರಧಾನಿ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಸಚಿವರು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಉದ್ಯಮಿಗಳು ಭಾಗವಹಿಸುವ ನಿರೀಕ್ಷೆ ಇದೆ.ಆ ವೇಳೆ ಪೇ ಸಿಎಂ ಸೇರಿದಂತೆ ಬಿಜೆಪಿಯ ಭ್ರಷ್ಟಾಚಾರದ ಹಗರಣಗಳನ್ನು ವೈಭವೀಕರಿಸಿ ತಕ್ಕ ಪಾಠ ಕಲಿಸಲು ನಾವು ಸಿದ್ದರಿದ್ದೇವೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶಗಳಿವೆ. ಇದುವರೆಗೂ ರಾಹುಲ್ ಗಾಂಯವರ ಯಾತ್ರೆಯನ್ನು ವಿಫಲಗೊಳಿಸಲು ಬಿಜೆಪಿ ವ್ಯಾಪಕ ಅಪಪ್ರಚಾರ ಮಾಡುವ ಯತ್ನ ನಡೆಸಿದೆ. ಎಲ್ಲವನ್ನು ಮೀರಿ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳಿಂದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ
ರಾಜ್ಯದಲ್ಲೂ ಯಾತ್ರೆಯ ಯಶಸ್ಸಿಗೆ ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಎಲ್ಲ ನಾಯಕರು ಹಗಲುರಾತ್ರಿ ಶ್ರಮಿಸುತ್ತಿದ್ದಾರೆ. ಈ ನಡುವೆ ಏನಾದರೂ ತೊಂದರೆ ಮಾಡಲು ಬಿಜೆಪಿ ಯತ್ನಿಸಿದರೆ ಅದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಲಿದೆ.
ಈ ಮೊದಲು ಸಿದ್ದರಾಮಯ್ಯ ಅವರು ಕೊಡಗಿಗೆ ಭೇಟಿ ನೀಡಿ ನೆರೆ ಅನಾಹುತಗಳನ್ನು ವೀಕ್ಷಿಸುವಾಗ ಮೊಟ್ಟೆ ಎಸೆದು ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಯತ್ನ ನಡೆದಿತ್ತು. ಆ ವೇಳೆಯೇ ಬಿಜೆಪಿಯ ಸಚಿವರ ಮತ್ತು ನಾಯಕರ ಪ್ರವಾಸಗಳಿಗೆ ಅಡ್ಡಿಪಡಿಸುವ ಎಚ್ಚರಿಕೆಯನ್ನು ಕಾಂಗ್ರೆಸ್ ನೀಡಿತ್ತು.
ಪ್ರಜಾಪ್ರಭುತ್ವದಲ್ಲಿ ಸಂಘರ್ಷ ಬೇಡ ಎಂಬ ಕಾರಣಕ್ಕಾಗಿ ತಾಳ್ಮೆಯಿಂದ ಇದ್ದೇವೆ. ಒಂದು ವೇಳೆ ಐಕ್ಯತಾ ಯಾತ್ರೆಗೆ ಅಡ್ಡಿಪಡಿಸಿದರೆ ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಹೈಕಮಾಂಡ್ಗಷ್ಟೇ ಅಲ್ಲ ರಾಜ್ಯನಾಯಕರಿಗೂ ಯಾತ್ರೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ ಬಿಜೆಪಿಯ ಷಡ್ಯಂತ್ರಗಳಿಗೆ ಕಾಂಗ್ರೆಸ್ ಗಂಭೀರ ತಿರುಗೇಟು ನೀಡಲು ಮುಂದಾಗಲಿದೆ ಎಂದು ನಾಯಕರು ತಿಳಿಸಿದ್ದಾರೆ.
ಇದನ್ನೂ ಓದಿ : ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್, ಯದುವೀರ್ ಸಿಂಹಾಸನಾರೋಹಣ
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ್ದಾಗಿದೆ. ಹೆಚ್ಚು ಬಂಡವಾಳ ರಾಜ್ಯಕ್ಕೆ ಹರಿದುಬರಬೇಕು, ಅಭಿವೃದ್ಧಿ ವೇಗ ಪಡೆಯಬೇಕು ಎಂಬುದು ಕಾಂಗ್ರೆಸ್ನ ಅಭಿಲಾಷೆ ಕೂಡ. ಬಿಜೆಪಿ ಇದನ್ನು ಮರೆತು ಎಲ್ಲದರಲ್ಲೂ ರಾಜಕೀಯ ಮಾಡುತ್ತಾ ಅಭಿವೃದ್ಧಿಯನ್ನು ಕಡೆಗಣಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಪ್ರತ್ಯುತ್ತರಿಸುವುದು ಅನಿವಾರ್ಯವಾಗಬಹುದು ಎಂಬ ಎಚ್ಚರಿಕೆ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.