Saturday, November 22, 2025
Homeರಾಜ್ಯಪ್ರಜ್ವಲ್‌ ರೇವಣ್ಣ ವಿರುದ್ಧ ಕಾಂಗ್ರೆಸ್‌ನ ನಾಯಕಿಯರ ಆಕ್ರೋಶ, ಕಠಿಣ ಶಿಕ್ಷೆಗೆ ಆಗ್ರಹ

ಪ್ರಜ್ವಲ್‌ ರೇವಣ್ಣ ವಿರುದ್ಧ ಕಾಂಗ್ರೆಸ್‌ನ ನಾಯಕಿಯರ ಆಕ್ರೋಶ, ಕಠಿಣ ಶಿಕ್ಷೆಗೆ ಆಗ್ರಹ

ಬೆಂಗಳೂರು,ಏ.28- ಹಾಸನದ ಸಂಸದರು ಭಾಗಿಯಾಗಿದ್ದಾರೆಂದು ಹೇಳಲಾದ ಪ್ರಕರಣದ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕಾಂಗ್ರೆಸ್‌ನ ನಾಯಕಿಯರು ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯ್ಡು, ಕವಿತಾ ರೆಡ್ಡಿ, ಭವ್ಯಾ ನರಸಿಂಹಮೂರ್ತಿ ಸೇರಿದಂತೆ ಹಲವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಅತ್ಯಂತ ಪ್ರಭಾವಿ ಕುಟುಂಬದಿಂದ ಬಂದವರು, ಅವರ ತಾತ ಪ್ರಧಾನಿಯಾಗಿದ್ದರು, ಚಿಕ್ಕಪ್ಪ ಮುಖ್ಯಮಂತ್ರಿಯಾಗಿದ್ದರು, ತಂದೆ ಸಚಿವರಾಗಿದ್ದರು, ಪ್ರಜ್ವಲ್‌ ರೇವಣ್ಣ ಖುದ್ದು ಸಂಸದರಾಗಿದ್ದಾರೆ. ಅವರ ವಿರುದ್ಧ ಹೋರಾಟ ನಡೆಸುವುದು ಸಾಮಾನ್ಯ ಮಹಿಳೆಯರಿಗೆ ಸುಲಭದ ವಿಚಾರವಲ್ಲ. ಹೀಗಾಗಿ ಸರ್ಕಾರ ಸಂತ್ರಸ್ತ ಮಹಿಳೆಯರಿಗೆ ಮತ್ತು ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲ ಎಂದ ಕವಿತಾ ರೆಡ್ಡಿಯವರು ರೇವಣ್ಣ ಜರ್ಮನಿಗೆ ಪರಾರಿಯಾಗಿದ್ದಾರೆ, ಜೆಡಿಎಸ್‌-ಬಿಜೆಪಿ ನಾಯಕರು ಈ ಬಗ್ಗೆ ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಮಂಜುಳಾ ನಾಯ್ಡು ಮಾತನಾಡಿ, ಪ್ರಧಾನಿಯವರು ಮಹಿಳೆಯರ ಮಾಂಗಲ್ಯ ಸರ ಕಿತ್ತುಕೊಳ್ಳುತ್ತಾರೆ ಎಂದು ಮಾತನಾಡುತ್ತಾರೆ, ಇಂತಹ ವಿಚಾರದ ಬಗ್ಗೆ ಏಕೆ ಪ್ರತಿಕ್ರಿಯಿಸುವುದಿಲ್ಲ? ಎಂದು ಪ್ರಶ್ನಿಸಿದರು.

ಭವ್ಯ ನರಸಿಂಹಮೂರ್ತಿಯವರು, ಪ್ರಜ್ವಲ್‌ ರೇವಣ್ಣ ಅವರಿಗೆ ಶಿಕ್ಷೆಯಾಗುವುದನ್ನು ನೋಡಿ ಬೇರೆ ಯಾರೂ ಇಂತಹ ಕೃತ್ಯಗಳಿಗೆ ಯೋಚಿಸಬಾರದು, ಆ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ನಡುವೆ ರೇಸ್‌ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಕಚೇರಿ ಬಳಿ ಪಕ್ಷದ ಕಾರ್ಯಕರ್ತರು ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರತಿಭಟನೆ ನಡೆಸಿ, ಪ್ರತಿಕೃತಿಯನ್ನು ದಹಿಸಿದರು.

RELATED ARTICLES
- Advertisment -

Latest News