Friday, November 22, 2024
Homeರಾಜಕೀಯ | Politicsಸೀಟು ಹಂಚಿಕೆ, ಚುನಾವಣಾ ರಣತಂತ್ರ ಕುರಿತು ಕಾಂಗ್ರೆಸ್‍ ಕಾರ್ಯಕಾರಿ ಸಮಿತಿ ಮಹತ್ವ ಸಭೆ

ಸೀಟು ಹಂಚಿಕೆ, ಚುನಾವಣಾ ರಣತಂತ್ರ ಕುರಿತು ಕಾಂಗ್ರೆಸ್‍ ಕಾರ್ಯಕಾರಿ ಸಮಿತಿ ಮಹತ್ವ ಸಭೆ

ನವದೆಹಲಿ, ಮಾ.19- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ರಣತಂತ್ರ ಹಾಗೂ ಇಂಡಿಯಾ ಮಿತ್ರಕೂಟದ ಜೊತೆ ಕ್ಷೇತ್ರಗಳ ಹಂಚಿಕೆ ಸಂಬಂಧ ಪಟ್ಟಂತೆ ದೆಹಲಿಯಲ್ಲಿಂದು ನಡೆದ ಕಾಂಗ್ರೆಸ್‍ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಕಾಂಗ್ರೆಸ್‍ನ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ, ಸದಸ್ಯರಾದ ಪಿ.ಚಿದಂಬರಂ, ಕೆ.ಸಿ.ವೇಣುಗೋಪಾಲ್, ಅಜಯ್ ಮಕೇನ್, ಕುಮಾರಿ ಸೆಜ್ಜಾ, ಅಂಬಿಕಾ ಸೋನಿ, ಪ್ರಿಯಾಂಕಗಾಂಧಿ, ನಾಸೀರ್ ಹುಸೇನ್, ದಿಗ್ವಿಜಯ್‍ಸಿಂಗ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಲೋಕಸಭೆ ಚುನಾವಣೆಯಲ್ಲಿ ಅನುಸರಿಸಬೇಕಾಗಿರುವ ರಣತಂತ್ರಗಳ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆಗಳಾಗಿವೆ. ಬಿಜೆಪಿಯಲ್ಲಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ 400 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಅಕಾಡಕ್ಕಿಳಿದ್ದಾರೆ. ಕಾಂಗ್ರೆಸ್ ಅಲ್ಲಲ್ಲಿ ಪ್ರಚಾರ ಸಭೆಗಳನ್ನು ನಡೆಸಲಾಗಿದೆಯಾದರೂ ಒಟ್ಟಾಗಿ ರಣಕಹಳೆಗೆ ಚಾಲನೆ ನೀಡಿಲ್ಲ. ರಾಹುಲ್‍ಗಾಂಧಿ ಎರಡು ದಿನಗಳ ಹಿಂದಷ್ಟೆ ತಮ್ಮ ಸುದೀರ್ಘವಾದ ಭಾರತ್ ನ್ಯಾಯಯಾತ್ರೆಯನ್ನು ಸಮಾಪ್ತಿಗೊಳಿಸಿ ಮರಳಿದ್ದಾರೆ.

ಈ ಚುನಾವಣೆಯಲ್ಲಿ ಹೆಚ್ಚು ಚರ್ಚಿಸಬೇಕಾದ ವಿಷಯಗಳ ಕುರಿತು ಸಭೆಯಲ್ಲಿ ವಿಮರ್ಶೆಗಳು ನಡೆದಿವೆ. ಚುನಾವಣಾ ಬಾಂಡ್‍ಗಳ ಮೂಲಕ ಬಿಜೆಪಿ ಹಣ ಸಂಗ್ರಹಿಸಿರುವುದನ್ನು ಸುಪ್ರೀಂಕೋರ್ಟ್ ಮೂಲಕ ಬಹಿರಂಗವಾಗಿದೆ. ವಿರೋಧ ಪಕ್ಷಗಳ ಪಾಲು ಕೂಡ ಚುನಾವಣಾ ಬಾಂಡ್ ಮಾರಾಟದಲ್ಲಿ ಇದೆಯಾದರೂ, ಅಧಿಕಾರ ದುರುಪಯೋಗದ ಸಾಧ್ಯತೆಗಳಿಲ್ಲ.

ಬಿಜೆಪಿ ಬಾಂಡ್‍ಗಳನ್ನು ಖರೀದಿ ಮಾಡಿದವರ ಮೇಲೆ ಆ ಕಾಲಕ್ಕೆ ಕೇಂದ್ರ ತನಿಖಾ ಸಂಸ್ಥೆಗಳ ದಾಳಿಯಾಗಿರುತ್ತದೆ, ಇಲ್ಲವೇ ನೋಟಿಸ್ ನೀಡಿ ಬೆದರಿಸಿರುವ ಕುರುಹುಗಳು ಮೇಲ್ನೋಟಕ್ಕೆ ಕಂಡು ಬರುತ್ತವೆ. ಬಹಳಷ್ಟು ಪ್ರಕರಣಗಳಲ್ಲಿ ಗುತ್ತಿಗೆ ಪಡೆದ ಕಂಪೆನಿಗಳು ಬಿಜೆಪಿಯ ಬಾಂಡ್‍ಗಳನ್ನು ಖರೀದಿಸಿದ್ದಾರೆ. ಬಾಂಡ್‍ಗಳ ಖರೀದಿ ಪಾರದರ್ಶಕತೆ ಎಂದು ಬಿಜೆಪಿ ವಾದಿಸುತ್ತಿದೆ. ಆದರೆ ಯಾರು ಔದಾರ್ಯಕ್ಕೆ ಕೋಟ್ಯಂತರ ರೂಪಾಯಿ ನೀಡಿ ಬಾಂಡ್ ಖರೀದಿ ಮಾಡಿಲ್ಲ. ಸರ್ಕಾರದ ವ್ಯವಸ್ಥೆಗಳ ದುರುಪಯೋಗವಾಗಿದೆ. ಇದು ನೇರವಾದ ಭ್ರಷ್ಟಚಾರದ ವ್ಯಾಪ್ತಿಗೆ ಬರಲಿದೆ ಎಂದು ಕಾಂಗ್ರೆಸ್ ನಾಯಕರು ಸಭೆಯಲ್ಲಿ ಪ್ರತಿಪಾದಿಸಿದ್ದಾರೆ ಎಂದು ಹೇಳಲಾಗಿದೆ.

ಮೋದಿ ಸರ್ಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು, ಚುನಾವಣಾ ಬಾಂಡ್‍ಗಳ ಹಗರಣ, ಅರುಣಾಚಲ ಪ್ರದೇಶದಲ್ಲಿ ಚೀನಾದ ಆಕ್ರಮಣ, ಗಡಿಯಲ್ಲಿ ನಿಲ್ಲದ ಭಯೋತ್ಪಾದನಾ ಚಟುವಟಿಕೆ, ರಾಜಕೀಯ ಪ್ರೇರಿತ ಕೋಮು ಪ್ರಚೋದನೆಯನ್ನೇ ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಸಬೇಕು ಎಂದು ಪ್ರಮುಖ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನೂ ಇಂಡಿಯಾ ಮಿತ್ರಕೂಟಗಳ ನಡುವೆ ಸ್ಥಾನ ಹೊಂದಾಣಿಕೆ ಕುರಿತು ಈಗಾಗಲೇ ಕೆಲವು ನಿರ್ಧಾರಗಳಾಗಿವೆ. ಇಂಡಿಯಾ ಮಿತ್ರಕೂಟದಲ್ಲಿದ್ದರೂ ಸ್ಥಾನ ಹೊಂದಾಣಿಕೆಗೆ ಒಪ್ಪದೆ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್, ಪಂಜಾಬ್‍ನ ಆಪ್ ಪಕ್ಷಗಳ ಜೊತೆ ನೈತಿಕ ಹೊಂದಾಣಿಕೆ ಮುಂದುವರೆಯಲಿದೆ.

ಆದರೆ ಚುನಾವಣಾ ಕಣದಲ್ಲಿ ಮತಗಳ ವಿಭಜನೆಯಾಗದಂತೆ ಎಚ್ಚರಿಕೆ ವಹಿಸಿ ಗೆಲ್ಲುವ ಸಾಧ್ಯತೆಗಳಿರುವ ಕಡೆ ಕಾಂಗ್ರೆಸ್ ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂಬ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಬಾಕಿ ಇರುವ ಅಭ್ಯರ್ಥಿಗಳ ಆಯ್ಕೆ ಕುರಿತಂತೆಯೂ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

RELATED ARTICLES

Latest News