ಬೆಂಗಳೂರು,ಅ.22- ಮೂರು ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಇಂದು ಸಂಜೆಯೊಳ ಗಾಗಿ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದ್ದು, ಇದರ ನಡುವೆ ಕಾಂಗ್ರೆಸ್ನ ರಣತಂತ್ರಗಾರಿಕೆ ಬಗ್ಗೆ ಹಲವು ಅನುಮಾನಗಳು ಕೇಳಿಬಂದಿವೆ.
ಈಗಾಗಲೇ ಅಳೆದೂ ತೂಗಿ ಸಾಕಷ್ಟು ತಯಾರಿಗಳ ಜೊತೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಿದೆ. ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರಕ್ಕೆ ಎರಡು ಹೆಸರನ್ನು ಅಖೈರುಗೊಳಿಸಿದ್ದು, ಸಂಡೂರಿಗೆ ಒಂದು ಹೆಸರನ್ನು ರವಾನಿಸಲಾಗಿದೆ. ಇ.ತುಕಾರಾಂ ಅವರಿಂದ ತೆರವಾಗಿರುವ ಸಂಡೂರು ಕ್ಷೇತ್ರಕ್ಕೆ ಅವರ ಪತ್ನಿ ಅನ್ನಪೂರ್ಣ ಅವರು ಅಭ್ಯರ್ಥಿಯಾಗಲಿದ್ದಾರೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಉಳಿದಂತೆ ಚನ್ನಪಟ್ಟಣ ಕ್ಷೇತ್ರ ಎನ್ಡಿಎ ಮಿತ್ರಕೂಟಕ್ಕಷ್ಟೇ ಅಲ್ಲದೆ ಕಾಂಗ್ರೆಸ್ಗೂ ಇಬ್ಬಂದಿತನವನ್ನು ತಂದಿಟ್ಟಿದೆ. ಸ್ಥಳೀಯ ನಾಯಕರು, ಮುಖಂಡರು ಮಾಜಿ ಸಂಸದ ಡಿ.ಕೆ.ಸುರೇಶ್ ಅಭ್ಯರ್ಥಿಯಾಗಬೇಕು ಎಂಬ ಒತ್ತಡ ಹೇರುತ್ತಿದ್ದಾರೆ.ಈಗಾಗಲೇ ಸಂಡೂರಿಗೆ ತುಕಾರಾಂ ಅವರ ಪತ್ನಿಗೆ ಟಿಕೆಟ್ ನೀಡುವ ನಿರ್ಧಾರದ ಮೂಲಕ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದೆ.
ಚನ್ನಪಟ್ಟಣಕ್ಕೂ ಡಿ.ಕೆ.ಶಿವಕುಮಾರ್ರವರ ಸಹೋದರ ಡಿ.ಕೆ.ಸುರೇಶ್ರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಮತ್ತಷ್ಟು ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬ ಅಳುಕು ಪಕ್ಷದಲ್ಲಿದೆ. ಹೀಗಾಗಿ ರಘುನಂದರಾಮಣ್ಣ, ಮಾಜಿ ಶಾಸಕ ಅಶ್ವತ್ ಮತ್ತು ಪುಟ್ಟಣ್ಣ ಅವರ ಹೆಸರುಗಳು ಚರ್ಚೆಯಲ್ಲಿವೆ. ಬಹುತೇಕ ರಘುನಂದರಾಮಣ್ಣ ಅಥವಾ ಡಿ.ಕೆ.ಸುರೇಶ್ ಅವರ ಪೈಕಿ ಒಬ್ಬರಿಗೆ ಮಣೆ ಹಾಕುವ ಸಾಧ್ಯತೆಯಿದೆ. ಇದರ ನಡುವೆ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿಗಳು ಈಗಲೂ ಚಾಲ್ತಿಯಲ್ಲಿದೆ.
ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ಅಥವಾ ಅನಿತಾ ಕುಮಾರಸ್ವಾಮಿಯವರು ಅಭ್ಯರ್ಥಿಯಾದರೆ ಕಾಂಗ್ರೆಸ್ ಪಕ್ಷ ಡಿ.ಕೆ.ಸುರೇಶ್ ಅವರ ಬದಲಿಗೆ ರಘುನಂದರಾಮಣ್ಣ ಅವರಿಗೆ ಮಣೆ ಹಾಕುವ ಸಾಧ್ಯತೆಯಿದೆ.ಮೂಲಗಳ ಪ್ರಕಾರ, ಜೆಡಿಎಸ್ನ ಅಭ್ಯರ್ಥಿಯನ್ನು ಸೋಲಿಸುವುದು ಕಾಂಗ್ರೆಸ್ನ ಇರಾದೆ ಎನ್ನಲಾಗುತ್ತಿದೆ. ಈಗಾಗಲೇ ಬಿಜೆಪಿಯ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿರುವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ನ ಕದ ತಟ್ಟುತ್ತಿದ್ದಾರೆ.
ಅವರು ಪಕ್ಷೇತರರಾಗಿ ಸ್ಪರ್ಧಿಸಿದರೆ ಕಾಂಗ್ರೆಸ್ ಪ್ರಭಾವಿಯಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಯೋಗೀಶ್ವರ್ ಗೆಲುವಿಗೆ ಮತ್ತು ಜೆಡಿಎಸ್ನ ಸೋಲಿಗೆ ಕಾರಣವಾಗುವ ರಣತಂತ್ರ ರೂಪಿಸಿದೆ. ತನೂಲಕ ರಾಮನಗರ ಜಿಲ್ಲೆಯಿಂದ ಕುಮಾರಸ್ವಾಮಿಯವರ ರಾಜಕೀಯವನ್ನು ಸ್ಥಳಾಂತರಿಸುವ ಒಳಸಂಚು ನಡೆದಿದೆ ಎಂದು ಹೇಳಲಾಗಿದೆ. ಇದಕ್ಕಾಗಿ ಯಾವುದೇ ತ್ಯಾಗವಾದರೂ ಸರಿ ಜೆಡಿಎಸ್ ಅನ್ನು ಸೋಲಿಸುವುದು ಕಾಂಗ್ರೆಸ್ ಪ್ರಮುಖ ನಾಯಕರ ಗುರಿ ಎಂದು ಹೇಳಲಾಗುತ್ತಿದೆ.
ಇದರ ಸುಳಿವರಿತು ಕುಮಾರಸ್ವಾಮಿಯವರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಸಿ.ಪಿ.ಯೋಗೇಶ್ವರ್ ಈ ಮೊದಲು ಕಾಂಗ್ರೆಸ್ನಲ್ಲಿದ್ದು ಮತ್ತೆ ಬಿಜೆಪಿಯತ್ತ ವಲಸೆ ಹೋದವರು. ಮತ್ತೆ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಳ್ಳುವ ಬದಲು ಪಕ್ಷೇತರರಾಗಿ ನಿಂತಾಗ ಪರೋಕ್ಷ ಬೆಂಬಲ ನೀಡಿ ಜೆಡಿಎಸ್ಗೆ ಪಾಠ ಕಲಿಸುವುದು ತಂತ್ರಗಾರಿಕೆ ಅನುಸರಿಸಲಾಗುತ್ತಿದೆ ಎನ್ನಲಾಗಿದೆ.
ಶಿಗ್ಗಾಂವಿಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪರದಾಡುತ್ತಿದೆ. ಮೇಲ್ನೋಟಕ್ಕೆ ಕ್ಷೇತ್ರದ ವಿಚಾರವಾಗಿ ಪರೋಕ್ಷವಾದ ಹೊಂದಾಣಿಕೆ ನಡೆಯುತ್ತಿದೆ ಎಂಬ ವದಂತಿಗಳು ಕಾಂಗ್ರೆಸ್ನಲ್ಲಿ ಕೇಳಿಬಂದಿವೆ.
ಹಲವು ವರ್ಷಗಳಿಂದಲೂ ಬಸವರಾಜ ಬೊಮಾಯಿ ಅವರು ಕಾಂಗ್ರೆಸ್ ನಾಯಕರ ಆತೀಯ ಸಂಬಂಧ ಶಿಗ್ಗಾಂವಿ ಚುನಾವಣೆ ಮೇಲೆ ಪ್ರಭಾವ ಬೀರುತ್ತಲೇ ಬಂದಿದೆ. ಈ ಉಪಚುನಾವಣೆಯಲ್ಲೂ ಅದೇ ರೀತಿಯ ಹೊಂದಾಣಿಕೆ ನಡೆಯಲಿದೆ. ಅದಕ್ಕಾಗಿ ಮತ್ತೊಮೆ ಅಲ್ಪಸಂಖ್ಯಾತರಿಗೆ ಮಣೆ ಹಾಕಿ ಕ್ಷೇತ್ರವನ್ನು ಬಿಜೆಪಿಗೆ ಸುಲಭದ ತುತ್ತು ಮಾಡಿಕೊಡುವ ಸಾಧ್ಯತೆಗಳಿವೆ ಎಂಬ ವದಂತಿಗಳು ಹರಡಿವೆ.
ಮೂರು ಉಪಚುನಾವಣೆ ಪೈಕಿ ಕಾಂಗ್ರೆಸ್ ಸಂಡೂರು ಮತ್ತು ಚನ್ನಪಟ್ಟಣವನ್ನು ಗಂಭೀರವಾಗಿ ಪರಿಗಣಿಸಿದೆ. ಮಿನಿ ಮಹಾಸಮರದಲ್ಲಿ ಕೊಟ್ಟು-ತೆಗೆದುಕೊಳ್ಳುವ ವಹಿವಾಟುಗಳು ತೆರೆಮರೆಯಲ್ಲಿ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.