ದೇಹದ ಅತ್ಯಂತ ಪ್ರಮುಖ ಭಾಗಗಳಲ್ಲಿ ಯಕೃತ್ ಅಥವಾ ಪಿತ್ತಜನಕಾಂಗ ಒಂದಾಗಿದೆ. ನಿರ್ವಿಷೀಕರಣ, ಪೋಷಕಾಂಶಗಳ ಚಯಾಪಚಯ (ಮೆಟಬಾಲಿಸಮ್), ರೋಗನಿರೋಧಕ ವ್ಯವಸ್ಥೆ ನಿಯಂತ್ರಣ ಸೇರಿದಂತೆ ಮಾನವ ದೇಹದಲ್ಲಿನ 500ಕ್ಕೂ ಹೆಚ್ಚಿನ ಕಾರ್ಯಗಳ ಜವಾಬ್ದಾರಿಯನ್ನು ಯಕೃತ್ ಹೊಂದಿರುತ್ತದೆ.
ಪಿತ್ತ ಜನಕಾಂಗದ ಪ್ರಾಮುಖ್ಯತೆಯನ್ನು ಅನೇಕರು ಅರಿತಿದ್ದರೂ, ಈ ಅಂಗದ ಆರೋಗ್ಯ ನಮ್ಮ ಕರುಳಿನ ಸ್ಥಿತಿಯೊಂದಿಗೆ ಹತ್ತಿರದ ಸಂಬoಧ ಹೊಂದಿರುತ್ತದೆ ಎಂದು ಕೆಲವರಿಗೆ ಮಾತ್ರ ತಿಳಿದಿರಬಹುದು. ಕರುಳು ಮತ್ತು ಯಕೃತ್ ನಡುವಿನ ಸತತ ಸಂವಹನವನ್ನು ಗಟ್-ಲಿವರ್ ಆ್ಯಕ್ಸಿಸ್ (ಕರುಳು – ಯಕೃತ್ ಅಕ್ಷ) ಎನ್ನುವರು.ದೇಹದ ಒಟ್ಟಾರೆ ಚಯಾಪಚಯ ಮತ್ತು ರೋಗನಿರೋಧಕತೆಯ ಸಮತೋಲನವನ್ನು ನಿರ್ವಹಿಸಲು ಇದು ಮೂಲಾಧಾರವಾಗಿರುತ್ತದೆ.
ಯಕೃತ್ತಿಗೆ ರಕ್ತ ಪೂರೈಕೆಯ ಸುಮಾರು ಶೇ.70ರಷ್ಟು ಭಾಗ ಪೋರ್ಟಲ್ ಅಬಿಧಮನಿ ಮೂಲಕ ಬರುತ್ತದೆ. ಅಂದರೆ ಕರುಳಿನಲ್ಲಿ ಹೀರಿಕೊಳ್ಳಲಾಗುವ ಪೋಷಕಾಂಶಗಳು, ವಿಷ ಪದಾರ್ಥಗಳು ಮತ್ತು ಸೂಕ್ಷ್ಮಜೀವಿಯ ಉಪ ಉತ್ಪನ್ನಗಳು ಮುಂತಾದವುಗಳು ಯಕೃತ್ ಮೂಲಕ ಸಾಗುತ್ತವೆ. ಆರೋಗ್ಯಕರ ಕರುಳು ಗೇಟ್‌ಕೀಪರ್ ರೀತಿಯಲ್ಲಿ ಕೆಲಸ ಮಾಡುತ್ತದೆ ಅಲ್ಲದೆ, ರಕ್ತವನ್ನು ಪ್ರವೇಶಿಸುವ ಮತ್ತು ಅಂತಿಮವಾಗಿ ಯಕೃತ್ ಅನ್ನು ತಲುಪುವ ಯಾವ ವಸ್ತುವನ್ನಾದರೂ ಇದು ನಿಯಂತ್ರಿಸುತ್ತದೆ. ಆದರೆ, ಕರುಳಿನ ಕೋಮಲವಾದ ಸೂಕ್ಷ್ಮಜೀವಿಯ ಸಮತೋಲನಕ್ಕೆ ಅಡ್ಡಿಯಾದಲ್ಲಿ(ಈ ಸ್ಥಿತಿಯನ್ನು ಡಿಸ್‌ಬಯೋಸಿಸ್ ಎನ್ನುವರು) ಇದರಿಂದ ಯಕೃತ್‌ನ ಕಾರ್ಯಗಳ ಮೇಲೆ ದೂರಗಾಮಿ ಪರಿಣಾಮಗಳು ಉಂಟಾಗಬಹುದು.
ಡಿಸ್‌ಬಯೋಸಿಸ್ ಸ್ಥಿತಿಯಿಂದಾಗಿ ಕರುಳಿನ ಗೋಡೆಗಳ ಮೂಲಕ ಪ್ರವೇಶ ಸಾಧ್ಯತೆಯನ್ನು ಹೆಚ್ಚಿಸುವುದಕ್ಕೆ ದಾರಿಯಾಗಬಹುದು. ಇದಕ್ಕೆ `ಲೀಕಿ ಗಟ್’ (ಸೋರುವ ಕರುಳು) ಎನ್ನುವರು. ಇಂತಹ ಸ್ಥಿತಿಯಲ್ಲಿ ಕರುಳಿನ ಮೂಲಕ ಬ್ಯಾಕ್ಟಿರಿಯಾ, ಎಂಡೊಟಾಕ್ಸಿನ್‌ಗಳು ಮತ್ತು ಇತರೆ ಹಾನಿಕಾರಕ ವಸ್ತುಗಳು ಕರುಳಿನ ಗೋಡೆಯ ಮೂಲಕ ಸಾಗಿ ಪೋರ್ಟಲ್ ರಕ್ತ ಪರಿಚಲನೆಯನ್ನು ಪ್ರವೇಶಿಸುತ್ತದೆ.
ಇವು ಯಕೃತ್ ಅನ್ನು ತಲುಪಿದಾಗ ಉರಿಯೂತಕ್ಕೆ ಚಾಲನೆ ನೀಡಬಹುದು ಅಲ್ಲದೆ, ಅಲ್ಲಿ ಕೊಬ್ಬು ಶೇಖರಣೆಯಾಗಲು ಕೊಡುಗೆ ನೀಡಬಹುದು. ಜೊತೆಗೆ ಪಿತ್ತಜನಕಾಂಗಕ್ಕೆ ಹಾನಿವುಂಟಾಗುವುದರ ವೇಗವನ್ನು ಹೆಚ್ಚಿಸಬಹುದು. ಆಲ್ಕೋಹಾಲ್‌ಯೇತರ ಫ್ಯಾಟಿಲಿವರ್ ರೋಗ(ಎನ್‌ಎಎಫ್‌ಎಲ್‌ಡಿ), ಆಲ್ಕೋಹಾಲಿಕ್ ಲಿವರ್ ರೋಗ ಮತ್ತು ಲಿವರ್ ಸಿರಾಸಿಸ್‌ಗಳಂತಹ ಸ್ಥಿತಿಗಳಲ್ಲಿ ವಿಶೇಷವಾಗಿ ಈ ಸಂಪರ್ಕ ಸ್ಪಷ್ಟವಾಗಿ ಕಂಡುಬರುತ್ತದೆ.
ಸoಸ್ಕರಿತ ಆಹಾರಗಳು ಮತ್ತು ಸಕ್ಕರೆಗಳನ್ನೊಳಗೊಂಡ ಆಹಾರಕ್ರಮ, ಅತಿಯಾದ ಮದ್ಯಸೇವನೆ, ಆಲಸಿ ಅಭ್ಯಾಸಗಳು, ದೀರ್ಘಕಾಲದ ಒತ್ತಡ, ಆ್ಯಂಟಿಬಯಾಟಿಕ್ಸ್ಗಳನ್ನು ಪದೇ ಪದೇ ಬಳಸುವುದು ಮುಂತಾದ ಅಂಶಗಳು ಅನಾರೋಗ್ಯಕರ ಕರುಳು ಮತ್ತು ಅಂತಿಮವಾಗಿ ಅನಾರೋಗ್ಯಕರ ಪಿತ್ತಜನಕಾಂಗಕ್ಕೆ ಕೊಡುಗೆ ನೀಡುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಕರುಳು ಸ್ನೇಹಿಯಾದ ಜೀವನಶೈಲಿಯು ಯಕೃತ್ ಆರೋಗ್ಯಕ್ಕೆ ಗಮನಾರ್ಹವಾಗಿ ಬೆಂಬಲ ನೀಡಬಹುದು.
ನಾರಿನಂಶಗಳು, ಮೊಸರು ಮತ್ತು ಕೆಫಿರ್ (ಹುಳಿಗೊಳಿಸಲಾದ ಹಾಲಿನ ಪೇಯ) ಹುದುಗುಹಾಕಿದ ಆಹಾರಗಳು ಮತ್ತು ಪ್ರೀಬಯಾಟಿಕ್ ಸಮೃದ್ಧ ತರಕಾರಿಗಳನ್ನು ಒಳಗೊಂಡ ಆಹಾರಕ್ರಮ ಕರುಳಿಗೆ ಲಾಭ ತರುವಂತಹ ಬ್ಯಾಕ್ಟಿರಿಯಾಗಳನ್ನು ಪೋಷಿಸಲು ಸಹಾಯ ಮಾಡುತ್ತದೆ. ಸಾಕಷ್ಟು ನೀರು, ದ್ರವ ಪದಾರ್ಥಗಳನ್ನು ಸೇವಿಸುವುದು(ಹೈಡ್ರೇಷನ್) ಮತ್ತು ನಿಯಮಿತ ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಗಳು ಕೂಡ ಕರುಳಿನಲ್ಲಿ ಸಮತೋಲಿತ ಪ್ರಮಾಣದಲ್ಲಿ ಸೂಕ್ಷ್ಮಜೀವಿಗಳನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇತ್ತೀಚಿನ ವರ್ಷಗಳಲ್ಲಿ, ಯಕೃತ್ತಿನ ರೋಗಗಳನ್ನು ತಡೆಯುವ ಕಾರ್ಯತಂತ್ರಗಳು ಮತ್ತು ಚಿಕಿತ್ಸೆಗಳಲ್ಲಿ ಕರುಳಿನ ಆರೋಗ್ಯವನ್ನು ವೈದ್ಯಕೀಯ ಸಮುದಾಯ ಹೆಚ್ಚಾಗಿ ಸೇರಿಸಿಕೊಳ್ಳುತ್ತಿದೆ. ಪ್ರೊಬಯಾಟಿಕ್‌ಗಳು, ಆಹಾರಕ್ರಮ ಹಸ್ತಕ್ಷೇಪಗಳು ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳ ಬಳಕೆಯು ರೋಗಿಗಳು ಗುಣ ಹೊಂದುವ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಪರಿಣಾಮಕಾರಿ ಎಂದು ನಿರೂಪಿತವಾಗಿವೆ. ಕರುಳಿನ ಸೂಕ್ಷ್ಮಜೀವಿಗಳನ್ನು ಆಧರಿಸಿದ ಚಿಕಿತ್ಸೆಗಳು, ಯಕೃತ್ತಿನ ಆರೈಕೆಯ ಮುಖ್ಯವಾಹಿನಿಯಾಗುವ ಸಮಯ ಹತ್ತಿರವಾಗುತ್ತಿದೆ. ಜೊತೆಗೆ ಈ ಚಿಕಿತ್ಸಾ ವಿಧಾನಗಳ ಆವಿಷ್ಕಾರ ಪ್ರಸ್ತುತ ನಡೆಯುತ್ತಿದೆ.
ಕರುಳು-ಯಕೃತ್ ಸಂಬoಧವನ್ನು ಅರ್ಥ ಮಾಡಿಕೊಳ್ಳುವುದರಿಂದ ಯಕೃತ್ತಿನ ರೋಗ ತಡೆಯುವಲ್ಲಿ ಶಕ್ತಿಶಾಲಿ ಅವಕಾಶ ಲಭಿಸುತ್ತದೆಯಲ್ಲದೆ, ದೀರ್ಘಕಾಲೀನ ಯೋಗಕ್ಷೇಮವನ್ನು ಪ್ರೋತ್ಸಾಹಿಸಬಹುದು. ಆರೊಗ್ಯಕರ ಆಯ್ಕೆಗಳೊಂದಿಗೆ ನಮ್ಮ ಕರುಳನ್ನು ಪೋಷಿಸುವುದರಿಂದ, ನಾವು ಪಚನಕ್ರಿಯೆಯನ್ನು ಬೆಂಬಲಿಸುವುದು ಮಾತ್ರವಲ್ಲದೆ, ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾದ ಯಕೃತ್ ಅನ್ನು ಕೂಡ ಸಂರಕ್ಷಿಸುತ್ತೇವೆ. ಹೆಚ್ಚು ಆರೋಗ್ಯಕರ ಜೀವನಶೈಲಿಯ ಕಡೆಗೆ ಸತತವಾದ ಹೆಜ್ಜೆಗಳನ್ನು ಹಾಕುವುದರಿಂದ ಪಿತ್ತಜನಕಾಂಗದ ಕಾರ್ಯ ಮತ್ತು ಒಟ್ಟಾರೆ ಆರೋಗ್ಯದಲ್ಲಿ ಅರ್ಥ ಪೂರ್ಣ ವ್ಯತ್ಯಾಸ ಉಂಟು ಮಾಡಬಹುದಾಗಿದೆ.
ಡಾ. ಭೂಷಣ್ ಚಿತ್ತವಾಡಗಿ,
ಸಲಹೆಗಾರ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜನ್,
ಟ್ರೈಲೈಫ್ ಆಸ್ಪತ್ರೆ