ಬೆಂಗಳೂರು, ಆ.31- ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿರುವುದರ ಹಿಂದೆ ಪ್ರಭಾವಿಗಳ ಕೈವಾಡವಿದ್ದು, ನಾಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಹತ್ವದ ಮಾಹಿತಿಯನ್ನು ಬಹಿರಂಗಗೊಳಿಸಲಿದ್ದಾರೆ.
ತಮಿಳುನಾಡಿನ ಸತ್ಯಮಂಗಲದಲ್ಲಿ ನೆಲೆಯೂರಿದ್ದ ಚಿನ್ನಯ್ಯ ಅವರನ್ನು ಸಂಪರ್ಕಿಸಿದ ಕೆಲವು ವ್ಯಕ್ತಿಗಳು ಆತನನ್ನು ವಾಪಸ್ ಕರೆ ತಂದು ತಯಾರು ಮಾಡಿದ್ದರು ಎನ್ನಲಾಗಿದೆ. ಜೊತೆಗೆ ಸುಜಾತಾ ಭಟ್ ಅವರನ್ನು ಒಟ್ಟು ಸೇರಿಸಿಕೊಂಡು ಯೋಜನೆ ರೂಪಿಸಲಾಗಿತ್ತು. ಗಿರೀಶ್ ಮಟ್ಟಣ್ಣನವರ್ ಅವರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ತಮ ಅನುಭವದ ಆಧಾರದ ಮೇಲೆ ಒಂದಿಷ್ಟು ದಾಖಲಾತಿಗಳನ್ನು ಕಲೆ ಹಾಕಿದ್ದರು.
ಸೌಜನ್ಯ ಪ್ರಕರಣದಲ್ಲಿ ಹಲವಾರು ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದ ಮಹೇಶ್‌ಶೆಟ್ಟಿ ತಿಮರೋಡಿ ಮುಂದಾಳತ್ವ ವಹಿಸಿದ್ದರು. ಜಯಂತ್ ಟಿ. ಬೆಂಗಳೂರಿನ ಆಗು-ಹೋಗುಗಳ ಮೇಲೆ ನಿಗಾ ಇಟ್ಟಿದ್ದರು. ಇದಕ್ಕೆ ತಕ್ಕ ಹಾಗೆ ಯೂಟ್ಯೂಬರ್ ಸಮೀರ್ ಎಐ ಬಳಸಿ ವೀಡಿಯೋ ಮಾಡುವ ಮೂಲಕ ವ್ಯಾಪಕ ಪ್ರಚಾರ ನೀಡಿ ಜನಾಭಿಪ್ರಾಯ ರೂಢಿಸುತ್ತಿದ್ದರು ಎಂದು ಹೇಳಲಾಗಿದೆ.
ಮಹೇಶ್‌ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ಸಮೀರ್ ಅವರಿಗೆ ದೆಹಲಿಯಲ್ಲಿನ ಖ್ಯಾತ ವಕೀಲರೊಬ್ಬರು ಕಾನೂನು ನೆರವು ನೀಡಿದ್ದರು. ದೆಹಲಿಯಲ್ಲಿ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಕೆಲವರು ಎಸ್‌ಐಟಿ ರಚಿಸಿದ್ದರೆ, ವಿಸ್ತೃತ ತನಿಖೆ ಸಾಧ್ಯ ಎಂಬ ಸಲಹೆ ನೀಡಿದ್ದರು ಎಂದು ಹೇಳಲಾಗಿದೆ.
ಎಸ್‌ಐಟಿ ತನಿಖೆಯ ಬಗ್ಗೆ ಹೆಚ್ಚಿನ ಗಮನ ಸೆಳೆಯಲು ಕೆಲ ಸ್ಥಳಗಳನ್ನು ಗುರುತಿಸಿ ಉತ್ಖನನ ನಡೆಸುವಂತೆ ಮಾಡಲು ಬೆಂಗಳೂರಿನಲ್ಲಿ ಯೋಜನೆ ಸಿದ್ಧವಾಗಿತ್ತು. ಒಂದು ವೇಳೆ ಉತ್ಖನದಲ್ಲಿ ಯಾವ ವಸ್ತುಗಳೂ ಸಿಗದೇ ಇದ್ದರೇ ವಿಷಯಾಂತರ ಮಾಡುವುದು ಹೇಗೆ? ಹೆಚ್ಚಿನ ಸಂಖ್ಯೆಯಲ್ಲಿ ಅಸ್ಥಿಪಂಜರ ಸಿಕ್ಕರೆ ಅದನ್ನು ಬಳಸಿಕೊಂಡು ಮುಂದಿನ ಹೋರಾಟ ನಡೆಸುವ ವಿಚಾರವಾಗಿಯೂ ಚರ್ಚೆಗಳಾಗಿದ್ದವು.
ಎಸ್‌ಐಟಿ ತನಿಖೆ ಒಂದೇ ಮಾರ್ಗವಾಗಿ ಮುನ್ನಡೆಯುವಂತಹ ಒತ್ತಡದ ವಾತಾವರಣ ನಿರ್ಮಿಸಲು ಎಲ್ಲಾ ರೀತಿಯ ಸಂಚುಗಳು ರೂಪುಗೊಂಡಿದ್ದವು ಎಂದು ಮೂಲಗಳು ತಿಳಿಸಿವೆ.
ನಾಳೆ ದೆಹಲಿಯಲ್ಲಿ ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿ ನಡೆಸಿ, ಸಂಚಿನ ರೂವಾರಿಗಳು ಹಾಗೂ ಉನ್ನತ ಮಟ್ಟದಲ್ಲಿ ಕುಳಿತು ಸೂತ್ರ ಆಡಿಸುತ್ತಿರುವವರ ಬಗ್ಗೆ ಮಹತ್ವದ ಮಾಹಿತಿಯನ್ನು ಹೊರಹಾಕಲಿದ್ದಾರೆ ಎಂದು ತಿಳಿದು ಬಂದಿದೆ.