ಬೆಂಗಳೂರು,ಅ.6- ಕೆಲವರು ಹಿಂದೂ ಧರ್ಮ ಮತ್ತು ವೀರಶೈವ ಲಿಂಗಾಯತರನ್ನು ಒಡೆಯುವ ಷಡ್ಯಂತ್ರ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದರಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಕೆಲವರು ಪ್ರತ್ಯೇಕ ವೀರಶೈವ ಲಿಂಗಾಯಿತ ಧರ್ಮ ಮಾಡುವ ಮೂಲಕ ನಮ ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡಿದ್ದರು. ಇದರಲ್ಲಿ ಅವರು ಯಶಸ್ವಿಯಾಗಲಿಲ್ಲ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯನವರ ಹೆಸರು ಹೇಳದೆ ಕಿಡಿಕಾರಿರು.
ಮತ್ತೆ ರಾಜ್ಯದಲ್ಲಿ ಪ್ರತ್ಯೇಕ ವೀರಶೈವ ಲಿಂಗಾಯಿತ ಧರ್ಮ ರಚನೆಯಾಗಬೇಕೆಂಬ ಕೂಗು ಕೇಳಿಬರುತ್ತಿದೆ. ಇದ್ದಕ್ಕಿದ್ದಂತೆ ಇದು ಮುನ್ನಲೆಗೆ ಬಂದಿದ್ದು, ಯಾವ ಕಾರಣಕ್ಕಾಗಿ ಎಂಬುದು ಯಾರಿಗೂ ಗೊತ್ತಿಲ್ಲ. ತೆರೆಯ ಹಿಂದೆ ಕುಳಿತವರೇ ಇದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದೆಯೂ ವೀರಶೈವ ಲಿಂಗಾಯಿತ ಸಮುದಾಯವನ್ನು ಒಡೆದು ಧರ್ಮ ಮಾಡಲು ಹೊರಟ್ಟಿದ್ದರು. ಪರಿಣಾಮ ಏನಾಯಿತು ಎಂಬುದು ಗೊತ್ತು. ಯಾವುದೇ ಕಾರಣಕ್ಕೂ ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಮುಂದೆಯೂ ಆಗುವುದಿಲ್ಲ ಎಂದು ಎಚ್ಚರಿಸಿದ ಅವರು, ಇದಕ್ಕಾಗಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಮುಖ್ಯವಾಗಿ ಆರ್ಥಿಕ, ಸಾಮಾಜಿಕ ಸಮೀಕ್ಷೆ ವಿಚಾರದಲ್ಲಿ ಸರ್ಕಾರಕ್ಕೆ ಯಾಕಿಷ್ಟು ಆತುರ? ಒಕ್ಕಲಿಗ ಸಮುದಾಯ, ವೀರಶೈವ ಲಿಂಗಾಯತ ಸಮುದಾಯ ಎಲ್ಲದರಲ್ಲೂ ಬಡವರಿದ್ದಾರೆ. ಮುಖ್ಯಮಂತ್ರಿಗಳು ಯಾಕೆ 15 ದಿನದಲ್ಲೇ ಸಮೀಕ್ಷೆ ಮುಗಿಸಬೇಕೆಂಬ ತರಾತರಿಯಲ್ಲಿದ್ದಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು. ನಮ ಮೆಟ್ರೋಗೆ ಬಸವ ಮೆಟ್ರೋ ಎಂಬ ಹೆಸರಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದನ್ನು ಬಹಿರಂಗವಾಗಿ ಹೇಳುವುದು ಬೇರೆ.
ಆದರೆ ಅಂತರಂಗದಲ್ಲಿ ಏನು ಇದೆ ಅದನ್ನು ಮಾಡುವುದು ಬೇರೆ. ಹಿಂದೆ ಸಿಎಂ ಆಗಿದ್ದಾಗ ಬಸವೇಶ್ವರರ ಫೋಟೋ ಇಡಬೇಕೆಂದು ಹೇಳಿ ಆದೇಶ ಮಾಡಿಸಿದ್ದರು. ಬಳಿಕ ಪ್ರತ್ಯೇಕ ಧರ್ಮಮಾಡಲು ಹೊರಟರು ಎಂದು ಟೀಕಿಸಿದರು. ನಮ ಮೆಟ್ರೋಗೆ ಬಸವೇಶ್ವರರ ಹೆಸರಿಡುವುದಕ್ಕೆ ಸ್ವಾಗತವಿದೆ. ಆದರೆ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವುದು ಎಷ್ಟು ಸರಿ? ಎಂದು ವಿಜಯೇಂದ್ರ ಪ್ರಶ್ನಿಸಿದರು.