ಪಾಟ್ನಾ,ಜೂ.30- ಬಿಹಾರದಲ್ಲಿ ಕಳೆದ 9 ದಿನಗಳಲ್ಲಿಯೇ ಐದು ಸೇತುವೆಗಳು ಕುಸಿದುಬಿದ್ದಿವೆ. ಒಂದರ ಹಿಂದೊಂದರಂತೆ ನಡೆಯುತ್ತಿರುವ ಈ ಸೇತುವೆ ಕುಸಿತ ಘಟನೆಗಳ ಹಿಂದೆ ಸಂಚು ಇದೆ ಎಂದು ಕೇಂದ್ರ ಸಚಿವ, ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಶಂಕೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ಫಲಿತಾಂಶಕ್ಕೂ ಈ ಸರಣಿ ಕುಸಿತಕ್ಕೂ ನಂಟು ಇದೆ ಎಂದು ಅನುಮಾನ ವ್ಯಕ್ತಪಡಿಸಿರುವ ಅವರು, ಲೋಕಸಭಾ ಚುನಾವಣೆ ಬಳಿಕವಷ್ಟೇ ಸೇತುವೆಗಳು ಕುಸಿಯಲು ಆರಂಭಿಸಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.
ಇಂತಹ ಘಟನೆಗಳು 15 ಅಥವಾ 30 ದಿನಗಳ ಮುಂಚೆ ಏಕೆ ನಡೆದಿರಲಿಲ್ಲ? ಲೋಕಸಭಾ ಚುನಾವಣೆ ಮುಗಿದ ನಂತರವಷ್ಟೇ ಸೇತುವೆಗಳು ಕುಸಿಯಲಾರಂಭಿಸಿರುವುದು ಏಕೆ? ಅವು ಏಕೆ ಈಗ ಕುಸಿಯುತ್ತಿವೆ? ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯಾವುದಾದರೂ ಸಂಚು ನಡೆದಿದೆಯೇ? ಎಂದು ಗುಮಾನಿ ಇದೆ ಎಂದಿದ್ದಾರೆ.
ಬಿಹಾರದ ಅರಾರಿಯಾ, ಸಿವಾನ್, ಪೂರ್ವ ಚಂಪಾರಣ್, ಕಿಶನ್‌ಗಂಜ್ ಮತ್ತು ಮಧುಬನಿ ಜಿಲ್ಲೆಗಳಲ್ಲಿ ಕಳೆದ 9 ದಿನಗಳಲ್ಲಿ ಐದು ಸೇತುವೆಗಳು ತುಂಡಾಗಿ ನೀರಿಗೆ ಬಿದ್ದಿವೆ.ಶುಕ್ರವಾರ ಮಧುಬನಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು ಬಿದ್ದಿದೆ.
2021ರಿಂದಲೂ ಬಿಹಾರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆಯು 75 ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸುತ್ತಿತ್ತು. ಈ ಲೋಪದಲ್ಲಿ ಭಾಗಿಯಾದವರನ್ನು ಶಿಕ್ಷಿಸಲಾಗುವುದು ಎಂದು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿರುವ ಮಾಂಝಿ ತಿಳಿಸಿದ್ದಾರೆ.
ಇಂತಹ ಘಟನೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ. ಅಕ್ರಮಗಳಲ್ಲಿ ಭಾಗಿಯಾದ ಗುತ್ತಿಗೆದಾರರು ಅಥವಾ ಎಂಜಿನಿಯರ್‌ಗಳಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ಒಂದೇ ವಾರದಲ್ಲಿ ಮೂರನೇ ಘಟನೆ:
ಸೇತುವೆ ನಿರ್ಮಾಣ ಕಾರ್ಯಗಳಲ್ಲಿ ಗುತ್ತಿಗೆದಾರರು ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿರುವುದೇ ಘಟನೆಗಳಿಗೆ ಕಾರಣ. ಅಂತಹ ಗುತ್ತಿಗೆದಾರರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ರಾಜ್ಯದ ಅಧಿಕಾರಿಗಳು ಕೂಡ ಘಟನೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸಂಚಿನ ಆಯಾಮದಿಂದಲೂ ತನಿಖೆ ನಡೆಸುವಂತೆ ಅವರಿಗೆ ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು ಸರಣಿ ಸೇತುವೆ ಕುಸಿತ ಅವಘಡಗಳ ಬಗ್ಗೆ ವಿರೋಧ ಪ್ರತಿಪಕ್ಷಗಳು ಬಿಜೆಪಿ-ಜೆಡಿಯು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಬಿಹಾರದಲ್ಲಿನ ಡಬಲ್ ಎಂಜಿನ್ ಸರ್ಕಾರದ ಡಬಲ್ ಪವರ್‌ನಿಂದಾಗಿ ಕೇವಲ 9 ದಿನಗಳಲ್ಲಿ 5 ಸೇತುವೆಗಳು ಮಾತ್ರ ಕುಸಿದಿವೆ ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ನಿತೀಶ್ ಕುಮಾರ್ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.
12 ಕೋಟಿ ರೂ. ನೀರು ಪಾಲು:
ಸೇತುವೆ ಕುಸಿತದ ಸರಣಿ ಘಟನೆಗಳು ಕಿಶನ್‌ಗಂಜ್ ಜಿಲ್ಲೆಯಲ್ಲಿ ಸೇತುವೆ ಕುಸಿದ ಮರುದಿನವೇ ಮಧುಬನಿ ಜಿಲ್ಲೆಯ ಘಟನೆ ನಡೆದಿದೆ. ಜೂನ್ 23ರಂದು ಪೂರ್ವ ಚಂಪಾರಣ್ ಜಿಲ್ಲೆಯ ಘೋದಸಹಾನ್ ಬ್ಲಾಕ್‌ನಲ್ಲಿ ಸೇತುವೆ ಕುಸಿತದ ಮೂರನೇ ಘಟನೆ ನಡೆದಿತ್ತು. ಜೂನ್ 22ರಂದು ಸಿವಾನ್‌ನಲ್ಲಿ ದಾರೌಂದಾ ಮತ್ತು ಮಹಾರಾಜ್‌ಗಂಜ್ ಬ್ಲಾಕ್‌ಗಳನ್ನು ಸಂಪರ್ಕಿಸುವ ಕಾಲುವೆ ಮೇಲಿನ ಸೇತುವೆ ನೀರು ಪಾಲಾಗಿತ್ತು. ಇದಕ್ಕೂ ಮನ್ನ ಜೂನ್ 18ರಂದು ಆರಾರಿಯಾ ಜಿಲ್ಲೆಯ ಸಿಕ್ತಿ ಬ್ಲಾಕ್‌ನಲ್ಲಿ ಬಾಕ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ 12 ಕೋಟಿ ರೂ. ವೆಚ್ಚದ ಸೇತುವೆ ನೆಲಕಚ್ಚಿತ್ತು.