ಬೆಳಗಾವಿ,ಡಿ.17- ರಾಜಧಾನಿ ಬೆಂಗಳೂರಿನ ಸುತ್ತಮುತ್ತಲಿನ ಸೂಕ್ತವಾದ ಸ್ಥಳದಲ್ಲಿ ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸರ್ಕಾರ ನಿರ್ಮಾಣ ಮಾಡಲಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ವಿಧಾನಪರಿಷತ್ನಲ್ಲಿ ಹೇಳಿದ್ದಾರೆ.
ಜೆಡಿಎಸ್ನ ಜವರಾಯಿಗೌಡರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ನಿರ್ಮಾಣ ಮಾಡಲು 3 ರಿಂದ 4 ಕಡೆ ಸ್ಥಳವನ್ನು ಗುರುತಿಸಿದ್ದೇವೆ. ಈಗಾಗಲೇ 4 ಬಾರಿ ಸಭೆಗಳನ್ನು ನಡೆಸಲಾಗಿದೆ. ಬೆಳೆಯುತ್ತಿರುವ ಬೆಂಗಳೂರನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಹಾಗೂ ಉದ್ಯಮಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ನೂತನ ವಿಮಾನನಿಲ್ದಾಣ ನಿರ್ಮಾಣ ಮಾಡುವುದಾಗಿ ತಿಳಿಸಿದರು.
2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣ ಮಾಡುವ ಸಂಬಂಧ ಅಧ್ಯಯನ ನಡೆಸಿ ವರದಿ ನೀಡುವಂತೆ ಐಡೆಕ್ ಸಂಸ್ಥೆಗೆ ಸೂಚಿಸಲಾಗಿದೆ.
ಇನ್ನೊಂದು ವಾರದಲ್ಲಿ ಈ ಸಂಸ್ಥೆಯವರು ಕಾರ್ಯಗಳ ಬಗ್ಗೆವರದಿ ನೀಡಲಿದ್ದಾರೆ ಎಂದರು. ಈ ವರದಿಯನ್ನು ಸರ್ಕಾರ ಸ್ವೀಕರಿಸಿ ಇದನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸಿಕೊಡಲಿದ್ದೇವೆ. ನಂತರ ಅಲ್ಲಿನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ನಾವು ಗುರುತಿಸಿದ ಸ್ಥಳಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಅಂತಿಮವಾಗಿ ಯಾವುದಾದರೂ ನಿಗದಿಪಡಿಸಿದ ಸ್ಥಳವನ್ನು ಗುರುತಿಸಿದರೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ವಿವರಿಸಿದರು.
ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಿಸಬೇಕಾದರೆ ತಾಂತ್ರಿಕ ಸಂಭಾವ್ಯತೆ, ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಗುಡ್ಡಗಾಡು ಪ್ರದೇಶ, ಸಂಪರ್ಕ ರಸ್ತೆ, ರೈಲು, ಮೆಟ್ರೋ ರೈಲು ಸಂಪರ್ಕ, ಬಳಕೆದಾರರಿಗೆ ನಿಲ್ದಾಣ ತಲುಪುವ ಸ್ಥಳ ಹಾಗೂ ಸಮಯ ಇದೆಲ್ಲವನ್ನೂ ನಾವು ಗಮನದಲ್ಲಿಟ್ಟುಕೊಳ್ಳಬೇಕು.
ಭೂಸ್ವಾಧೀನವನ್ನು ಏಕಾಏಕಿ ನಡೆಸಲು ಸಾಧ್ಯವಿಲ್ಲ. ಸ್ಥಳ ಗುರುತಿಸಿ ಅಂತಿಮವಾದ ನಂತರ ನಾವು ಅಧಿಸೂಚನೆ ಹೊರಡಿಸುತ್ತೇವೆ. 2033 ಕ್ಕೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಜನ ಸಾಂದ್ರತೆ ಪ್ರಮಾಣ ಹೆಚ್ಚಾಗುತ್ತದೆ. ಅದಕ್ಕೆ ಪರ್ಯಾಯವಾಗಿ 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಿಸಲೇಬೇಕಾಗಿದೆ ಎಂದು ಸಚಿವರು ಸಮರ್ಥನೆ ಮಾಡಿಕೊಂಡರು.