ಚಿಕ್ಕಬಳ್ಳಾಪುರ, ಮೇ 28- `ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ಸಾಂಸ್ಕೃತಿಕ ರಂಗಚಟುವಟಿಕೆಗಳಿಗೆ ಹೆಚ್ಚು ಉಪಯೋಗವಾಗಲಿ ಎಂಬ ಕಾರಣಕ್ಕೆ ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿ 18.20 ಕೋಟಿ ರೂ. ವೆಚ್ಚದಲ್ಲಿ ಸುಂದರ ಹಾಗೂ ಭವ್ಯ ಕನ್ನಡ ಭವನ ನಿರ್ಮಾಣ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ನಗರದ ಬಿಬಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕನ್ನಡ ಭವನ ಉದ್ಘಾಟಿಸಿ ಮಾತನಾಡಿದ ಅವರು, `ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪಮೊಯಿಲಿ ಅವರ ಕಾಲದಲ್ಲಿ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿತ್ತು. ಆದರೆ ಅನುದಾನದ ಕೊರತೆಯಿಂದ ಕಾಮಗಾರಿ ಮಂದಗತಿಯಲ್ಲಿ ಸಾಗಿತ್ತು ಕೊನೆಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಷ್ಕರಣೆ ಮಾಡಿ ಅನುದಾನ ಒದಗಿಸಿ ಜಿಲ್ಲೆಗೆ ಅಗತ್ಯವಾಗಿದ್ದ ಕನ್ನಡ ಭವನ ಈಗ ಲೋಕಾರ್ಪಣೆ ಆಗಿದೆ’ ಎಂದು ತಿಳಿಸಿದರು.
`ಇನ್ನು ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಜಗತ್ತಿನ 6,500 ಭಾಷೆಗಳ ಪೈಕಿ 27 ನೇ ಸ್ಥಾನದಲ್ಲಿದ್ದು, ಅತ್ಯಂತ ವೈವಿಧ್ಯಮಯ ಭಾಷೆಯಾಗಿದೆ . ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಮತ್ತು ಸಾಹಿತ್ಯ ಅತ್ಯಂತ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಸಮನ್ವಯತೆಯ ಗುಣವನ್ನು ಹೊಂದಿರುವ ಕನ್ನಡ ಭಾಷೆ ಮತ್ತು ಸಾಹಿತ್ಯ ಜನಪರ ಕಾಳಜಿಯನ್ನು ಮೆರೆದಿದೆ’ ಎಂದು ಹೇಳಿದರು.
`ಭೂಸಿರಿವಲಯ ಖ್ಯಾತಿಯ ಕುಮುದೇಂದು, ಗೂಳೂರು ನಿಡುಮಾಮಿಡಿ ಮಠದ ಡಾ.ಜಚನಿ ಮಹಾಸ್ವಾಮಿಗಳು, ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಂ, ಹಿರಿಯ ಕವಿ ಬಿ.ಆರ್.ಲಕ್ಷ್ಮಣರಾವ್ ಸೇರಿದಂತೆ ಹಲವು ಸಾಹಿತಿಗಳ ದೊಡ್ಡ ಪರಂಪರೆಯ ಹೆಮೆ ಚಿಕ್ಕಬಳ್ಳಾಪುರ ಜಿಲ್ಲೆಗಿದ್ದು, ಅತ್ಯಾಧುನಿಕ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಕನ್ನಡ ಭವನ ಆಂಧ್ರದ ಗಡಿಭಾಗದಲ್ಲಿ ಹತ್ತು ಹಲವು ಕನ್ನಡ ಕಾರ್ಯಕ್ರಮಗಳ ಮೂಲಕ ಕನ್ನಡದ ಕಂಪನ್ನು ಪಸರಿಸಲು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪಮೊಯ್ಲಿ ಮಾತನಾಡಿ, `ಕನ್ನಡ ಭಾಷೆ ಮತ್ತು ಸಾಹಿತ್ಯದ ವಿಚಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಅನೇಕ ಕವಿಗಳು ಈ ಜಿಲ್ಲೆಯಲ್ಲಿ ಜನಿಸಿದ್ದಾರೆ. ಸಾಹಿತ್ಯ ಸಮೇಳನಗಳು ಸಮಕಾಲೀನ ಸಮಸ್ಯೆಗಳ ಪರಿಹಾರಕ್ಕೆ ಮುಖಾಮುಖಿಯಾಗಬೇಕು. ಸಮೇಳನಗಳು ಕೇವಲ ಯಾಂತ್ರಿಕ ಕಾರ್ಯಕ್ರಮಗಳಾಗದೆ ಜನಸಾಮಾನ್ಯರನ್ನು ಪ್ರೇರೇಪಿಸುವಂತ ಹಾಗೂ ಸಮಾಜದ ಮೇಲೆ ಪರಿಣಾಮ ಬೀರುವಂತಹ ಕಾರ್ಯಕ್ರಮಗಳಾಗಬೇಕು. ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ಭಾಷೆ ಮತ್ತು ಸಾಹಿತ್ಯ ಮುಂದಿನ ಪೀಳಿಗೆಗೂ ತಲುಪಬೇಕು’ ಎಂದು ಹೇಳಿದರು.
`ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿ ಜನಿಸಿದ ವಿಚಾರವಾದಿ, ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಅವರು ಜನರನ್ನು ಮೌಢ್ಯಗಳ ಕಡೆಗೆ ಹೋಗದಂತೆ ಎಚ್ಚರಿಸಿದರು. ಅವರ ಚಿಂತನೆ, ತತ್ವ ಆಶಯಗಳನ್ನು ಮುಂದುವರೆಸಲು ಸರ್ಕಾರ ಡಾ.ಎಚ್.ಎನ್.ಅವರ ಹೆಸರಿನಲ್ಲಿ ಪ್ರಾಧಿಕಾರವೊಂದನ್ನು ರಚಿಸಿದೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮೇಳನದ ಅಧ್ಯಕ್ಷ ಗೋಪಾಲಗೌಡ ಕಲ್ಪಮಂಜಲಿ, ಶಾಸಕ ಪ್ರದೀಪ್ ಈಶ್ವರ್ ಮತ್ತಿತರ ಗಣ್ಯರು,ಸಾಹಿತಿಗಳು ಹಾಜರಿದ್ದರು.