Home ಇದೀಗ ಬಂದ ಸುದ್ದಿ ನವಿಲೆ ಬಳಿ ಸಮತೋಲಿತ ಜಲಾಶಯ ನಿರ್ಮಾಣ : ಡಿಕೆಶಿ

ನವಿಲೆ ಬಳಿ ಸಮತೋಲಿತ ಜಲಾಶಯ ನಿರ್ಮಾಣ : ಡಿಕೆಶಿ

0
ನವಿಲೆ ಬಳಿ ಸಮತೋಲಿತ ಜಲಾಶಯ ನಿರ್ಮಾಣ : ಡಿಕೆಶಿ

ಕೊಪ್ಪಳ,ಆ.21– ತುಂಗಭದ್ರಾ ಅಣೆಕಟ್ಟಿಗೆ ಪರ್ಯಾಯವಾಗಿ ನೀರು ಸಂಗ್ರಹಿಸಲು ನವಿಲೆ ಬಳಿ ಸಮತೋಲಿತ ಜಲಾಶಯ ನಿರ್ಮಿಸಲು ಚರ್ಚೆ ನಡೆಸುವುದಾಗಿ ಜಲಸಂಪನೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದ್ದಾರೆ.

ಗಿಣಿಗೇರ ಏರ್‌ಸ್ಟ್ರಿಪ್ಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಅಣೆಕಟ್ಟು ದುರಸ್ತಿ ಕಾರ್ಯದಲ್ಲಿ ಯಾರೂ ವಿಶ್ರಾಂತಿ ಪಡೆಯದೆ ಸಂಘಟನಾತಕವಾಗಿ ಕೆಲಸ ಮಾಡಿದ್ದಾರೆ. ಸಿಬ್ಬಂದಿಗಳು, ಸಚಿವರಾದಿಯಾಗಿ ಎಲ್ಲರೂ ಶ್ರಮಿಸಿದ್ದರಿಂದ ನಾಲ್ಕು ದಿನಗಳಲ್ಲಿ ಗೇಟ್‌ ಅಳವಡಿಕೆ ಯಶಸ್ವಿಯಾಗಿದೆ. ಅದೃಷ್ಟವಶಾತ್‌ ನಮ ಬಳಿಯೇ ಗೇಟ್‌ನ ವಿನ್ಯಾಸ ಇತ್ತು. ಖಾಸಗಿ ಕಂಪನಿಗಳು ಕಾಲಮಿತಿಯಲ್ಲಿ ಗೇಟ್‌ ಮಾಡಿಕೊಟ್ಟವು ಎಂದು ಹೇಳಿದರು.

ಕೇಂದ್ರ ಸರ್ಕಾರ ಸೇರಿದಂತೆ ಹಲವರ ಸಹಕಾರದೊಂದಿಗೆ ಕಾರ್ಯಾಚರಣೆ ಯಶಸ್ವಿಯಾಗಿದೆ. ಈಗ ಜಲಾಶಯದಲ್ಲಿ ನೀರು ತುಂಬುತ್ತಿದೆ. ಇಂದು ವಿಮಾನದಲ್ಲಿ ಬರುವಾಗ ವೀಕ್ಷಣೆ ನಡೆಸಿದ್ದೇವೆ. ಜಲಾಶಯದಲ್ಲಿ ನೀರು ಹೆಚ್ಚಾಗಿದೆ. ಶೀಘ್ರವೇ ಭರ್ತಿಯಾಗಲಿದೆ ಎಂದರು.

ಮುಖ್ಯಮಂತ್ರಿ ಜೊತೆಗೂಡಿ ಶೀಘ್ರವೇ ಬಂದು ಬಾಗಿನ ಅರ್ಪಿಸುತ್ತೇವೆ. ತುರ್ತು ಕಾರ್ಯಾಚರಣೆಯಿಂದ ರೈತರನ್ನು ಉಳಿಸಲಾಗಿದೆ. ಬಿಜೆಪಿಯ, ವಿರೋಧಪಕ್ಷಗಳ ಟೀಕೆಗಳು ನಶಿಸಿವೆ. ನಮ ಕೆಲಸಗಳು ಉಳಿದಿವೆ ಎಂದು ಹೇಳಿದರು.

ಜಲಾಶಯದಲ್ಲಿ ಹೂಳು ತುಂಬಿದೆ. ಹೀಗಾಗಿ ಪರ್ಯಾಯವಾಗಿ ನವಿಲೆ ಬಳಿ ಸಮತೋಲಿತ ಅಣೆಕಟ್ಟು ನಿರ್ಮಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಶೀಘ್ರವೇ ಈ ನಿಟ್ಟಿನಲ್ಲಿ ಪ್ರವಾಸ ಕೈಗೊಂಡು ಅಣೆಕಟ್ಟು ನಿರ್ಮಾಣದ ಚರ್ಚೆಯನ್ನು ಮುಂದುವರೆಸುತ್ತೇವೆ ಎಂದರು.

ಪ್ರತಿವರ್ಷ ಒಂದು ಟಿಎಂಸಿ ನೀರು ತಗ್ಗುವಷ್ಟು ಹೂಳು ತುಂಬುತ್ತದೆ ಎಂದು ಎಂ.ಬಿ.ಪಾಟೀಲ್‌ ಅವರು ಸಚಿವರಾಗಿದ್ದಾಗಲೇ ವರದಿ ಇತ್ತು. ಈ ಹಿನ್ನೆಲೆಯಲ್ಲಿ ಪರ್ಯಾಯ ಅಣೆಕಟ್ಟಿನ ಬಗ್ಗೆ ಚರ್ಚೆಗಳು ನಡೆದಿವೆ ಎಂದರು.ರಾಜ್ಯದ ಅಣೆಕಟ್ಟೆಗಳ ಸುರಕ್ಷತೆಗೆ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಅದು ಈಗಾಗಲೇ ರಾಜ್ಯಾದ್ಯಂತ ಪ್ರವಾಸ ನಡೆಸುತ್ತಿದ್ದು, ವರದಿ ನೀಡಿದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಇದೇ ವೇಳೆ ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ, ಅಣೆಕಟ್ಟಿನಲ್ಲಿ ಅರ್ಧ ಟಿಎಂಸಿ ನೀರನ್ನು ತಗ್ಗಿಸುವಷ್ಟು ಹೂಳು ಪ್ರತಿವರ್ಷ ತುಂಬುತ್ತದೆ. ತುಂಗಭದ್ರಾ ನಿರ್ಮಿಸಿ 75 ವರ್ಷ ಕಳೆದಿವೆ. 35 ಟಿಎಂಸಿ ನೀರು ನಿಲ್ಲುವಷ್ಟು ಜಾಗದಲ್ಲಿ ಹೂಳು ತುಂಬಿದೆ. ನಮ ಸರ್ಕಾರ ಈ ಬಗ್ಗೆ ಗಮನ ಹರಿಸಿ ಹೆಚ್ಚು ನೀರು ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.