ಬೆಂಗಳೂರು, ಸೆ.25- ಸಾಹಿತಿ ಎಸ್.ಎಲ್. ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲಾಗು ವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪ ಅವರ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇರು ಸಾಹಿತಿಯ ನಿಧನದಿಂದ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶೋಕಿಸಿದರು.
ಭೈರಪ್ಪ 25ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಇವರ ಸಾಹಿತ್ಯ 40 ಭಾಷೆಗಳಿಗೆ ಭಾಷಾಂತರಗೊಂಡಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬೇರೆ ಸಾಹಿತಿಗಳ ಪುಸ್ತಕಗಳು ತುರ್ಜುಮೆಗೊಂಡಿರುವ ಉದಾಹರಣೆಗಳಿಲ್ಲ ಎಂದರು.
ಪ್ರೌಢಶಾಲೆಯಿಂದ ಸ್ನಾತಕೋತ್ತರವರೆಗೂ ಮೈಸೂರಿನಲ್ಲೇ ವಿದ್ಯಾಭ್ಯಾಸ ಮಾಡಿದ್ದರು. ಕಷ್ಟಪಟ್ಟು ಮೇಲೆ ಬಂದವರು. ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ಬೋಧನೆ ಹಾಗೂ ಬರೆವಣಿಗೆ ಎರಡನ್ನೂ ಏಕಕಾಲಕ್ಕೆ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಿದರು.
ಪದಶ್ರೀ, ಸರಸ್ವತಿ ಸನಾನ್, ನಾಡೋಜ, ರಾಜ್ಯೋತ್ಸವ, ಪಂಪಾ ಸೇರಿದಂತೆ ಅನೇಕ ಪ್ರಶಸ್ತಿಗಳು ಆವರಿಗೆ ಲಭಿಸಿದ್ದವು. ಎಲ್ಲದಕ್ಕೂ ಅವರು ಅರ್ಹರಿದ್ದರು. ಜ್ಞಾನಪೀಠ ಪ್ರಶಸ್ತಿ ಸಿಗಲಿಲ್ಲ ಎಂಬ ನೋವು ಉಳಿದಿತ್ತು, ನನ್ನ ಪ್ರಕಾರ ಅವರಿಗೆ ಜ್ಞಾನಪೀಠ ಸಿಗಬೇಕಿತ್ತು ಎಂದರು.
ಭೈರಪ್ಪ ಹಾಗೂ ನನ್ನ ವಿಚಾರಗಳ ನಡುವೆ ವ್ಯತ್ಯಾಸವಿದ್ದರೂ ಸ್ನೇಹಕ್ಕೆ ಕುಂದಾಗಿರಲಿಲ್ಲ. ಸಾಹಿತ್ಯ ಹಾಗೂ ದೃಷ್ಟಿಕೋನಗಳು ಬೇರೆ ಬೇರೆಯಾಗಿರಬಹುದು, ಒಂದೇ ಆಗಿರಬೇಕೆಂಬ ನಿಯಮಗಳೂ ಇಲ್ಲ. ಅಭಿಪ್ರಾಯ ಬೇರೆ ಇದೆ ಎಂಬ ಕಾರಣಕ್ಕೆ ಅಭಿಮಾನಿಯಾಗಿರಬಾರದು ಎಂದೇನಿಲ್ಲ ಎಂದರು.
ಸಚಿವರಾದ ಮಧುಬಂಗಾರಪ್ಪ, ಶಿವರಾಜ ತಂಗಡಗಿ ಶಾಸಕರಾದ ರಾಘವೇಂದ್ರ ಹಿಟ್ನಾಳ್, ಅಲ್ಲಮಪ್ರಭು ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಭೈರಪ್ಪ ಅವರ ಕುಟುಂಬದ ಸದಸ್ಯರನ್ನು ಸಿದ್ದರಾಮಯ್ಯ ಭೇಟಿ ಮಾಡಿ, ಸಾಂತ್ವಾನ ಹೇಳಿದರು.