Sunday, September 8, 2024
Homeರಾಜ್ಯಹಲವು ಜಿಲ್ಲೆಗಳಲ್ಲಿ ಮುಂದುವರೆದ ಮಳೆ ಅಬ್ಬರ, ಶಾಲಾ-ಕಾಲೇಜುಗಳಿಗೆ ರಜೆ, ಜನಜೀವನ ಅಸ್ತವ್ಯಸ್ಥ

ಹಲವು ಜಿಲ್ಲೆಗಳಲ್ಲಿ ಮುಂದುವರೆದ ಮಳೆ ಅಬ್ಬರ, ಶಾಲಾ-ಕಾಲೇಜುಗಳಿಗೆ ರಜೆ, ಜನಜೀವನ ಅಸ್ತವ್ಯಸ್ಥ

ಬೆಂಗಳೂರು,ಜು.25- ಮುಂಗಾರು ಮಳೆ ಅಬ್ಬರ ಮುಂದುವರೆದಿದೆ. ಮಳೆಯ ಆರ್ಭಟಕ್ಕೆ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ.ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಭಾರಿ ಮಳೆಯಿಂದ ಕೃಷ್ಣಾ, ದೂದ್‌ಗಂಗಾ, ವೇದ್‌ಗಂಗಾ, ತುಂಗಾ, ಭದ್ರಾ, ಘಟಪ್ರಭಾ, ಮಲಪ್ರಭಾ, ವರದ, ಅಘನಾಶಿನಿ, ನೇತ್ರಾವತಿ, ಕಾವೇರಿ, ಕಪಿಲ ಸೇರಿದಂತೆ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಮುಂಜಾಗ್ರತಾ ಕ್ರಮವಾಗಿ ನದಿ ತೀರದಲ್ಲಿ ಎನ್‌ಡಿಆರ್‌ ತಂಡಗಳನ್ನು ನಿಯೋಜಿಸಲಾಗಿದೆ.ಈಗಾಗಲೇ ಮಳೆ ಅನಾಹುತಕ್ಕೆ ಮೂವರು ಮೃತಪಟ್ಟಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕಬ್ಬಿನಗದ್ದೆಯ ವಿನಯ್‌ ಮಂಜುನಾಥ್‌ ಗಾಡಿಗ (25) ಮರ ಬಿದ್ದು ಮೃತಪಟ್ಟಿದ್ದಾರೆ. ಮಂಡಗೋಡ ತಾಲ್ಲೂಕಿನ ಮಳಗಿ ಧರ್ಮ ಜಲಾಶಯದಲ್ಲಿ ಈಜಲು ಹೋಗಿದ್ದ ಮುಡಸಾಲಿ ಗ್ರಾಮದ ಶ್ರೀಕಾಂತ ಹರಿಜನ್‌ (20) ನೀರುಪಾಲಾಗಿದ್ದಾರೆ.

ಮುದ್ದೆಬಿಹಾಳ್‌ ತಾಲ್ಲೂಕಿನ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಕಾಲು ಜಾರಿ ಬಿದ್ದಿದ್ದ ಕುರಿಗಾಹಿ ಮಂಜುನಾಥ ಮಾದರ (28) ಮೃತದೇಹ ಯಾದಗಿರಿ ಜಿಲ್ಲೆ ಹೊರಟ್ಟಿ ಗ್ರಾಮದ ಕಾಲುವೆಯಲ್ಲಿ ಪತ್ತೆಯಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ 22, ಮಹಾಲಿಂಗಪುರ ತಾಲ್ಲೂಕಿನಲ್ಲಿ 3 ಸೇತುವೆಗಳು ಮುಳುಗಡೆಯಾಗಿ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ನದಿ ತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡಯ್ಯ ನದಿಗಳ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಮೂಡಲಗಿ ತಾಲ್ಲೂಕಿನ ಘಟಪ್ರಭಾ ನದಿ ಪಾತ್ರದ ಗ್ರಾಮಗಳ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ 427 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಬೋಟ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.02 ಲಕ್ಷ ಕ್ಯೂಸೆಕ್‌ ನೀರು ಹರಿಬಿಟ್ಟಿದ್ದರಿಂದ ಗಡ್ಡೆಗೊಳ್ಳಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಮಳೆ ಆರ್ಭಟ ಮುಂದುವರೆದಿದ್ದು, ಶಿರಸಿ, ಮತ್ತಿಗಟ್ಟಿ ಮಾರ್ಗವಾಗಿ ಆಂಕೋಲಾಕ್ಕೆ ತೆರಳುವ ಮಾರ್ಗದಲ್ಲಿ ಭೂಕುಸಿತ ಉಂಟಾಗಿ ಸಂಚಾರ ಸ್ಥಗಿತವಾಗಿದೆ. ಹಲವೆಡೆ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಮೈಸೂರು ಭಾಗದಲ್ಲಿ ಮಳೆಯ ಅಬ್ಬರ ಕಡಿಮೆಯಾದರೂ ನದಿಗಳ ಅಬ್ಬರ ತಗ್ಗಿಲ್ಲ. ಜಲಾಶಯಗಳಿಂದ ನದಿಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವುದರಿಂದ ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಲಾಗಿದೆ.

ಮಳೆಯ ಆರ್ಭಟದಿಂದ ಉತ್ತರಕನ್ನಡ, ಬೆಳಗಾವಿ, ದಕ್ಷಿಣ ಕನ್ನಡ ಮುಂತಾದೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿಯ ನಿಪ್ಪಾಣಿ ತಾಲ್ಲೂಕಿನ ಕಾರದಗ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ದೂದ್‌ಗಂಗಾ ನದಿ ನೀರು ಗ್ರಾಮಕ್ಕೆ ನುಗ್ಗಿ ಇಲ್ಲಿನ ಹತ್ತಾರು ಮನೆಗಳು ಜಲಾವೃತಗೊಂಡಿವೆ. ಬಾಗಲಕೋಟೆಯಲ್ಲಿ ಭಾರಿ ಮಳೆಯಿಂದ ಡವಳೇಶ್ವರ-ಬೆಳಗಾವಿ ಸಂಪರ್ಕ ಸೇತುವೆ ಕಡಿತಗೊಂಡಿದೆ. ಯಾದಗಿರಿ ವೀರಾಂಜನೇಯ, ಕಂಗಾಲೇಶ್ವರ ದೇವಾಲಯಗಳು ಜಲಾವೃತಗೊಂಡಿವೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಭಾರಿ ಮಳೆಯಿಂದ ಜನ ಹೈರಾಣಾಗಿ ಹೋಗಿದ್ದಾರೆ. ಆಂಕೋಲಾ ತಾಲ್ಲೂಕಿನ ಶಿರೂರು ಬಳಿ ಗುಡ್ಡ ಕುಸಿತ ಉಂಟಾಗಿದ್ದು, ಮಣ್ಣಿನಡಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯಾಚರಣೆ ಹತ್ತನೇ ದಿನಕ್ಕೆ ಕಾಲಿಟ್ಟಿದೆ.

RELATED ARTICLES

Latest News