Sunday, September 8, 2024
Homeರಾಜ್ಯಮಲೆನಾಡು-ಕರಾವಳಿ ಭಾಗಗಳಲ್ಲಿ ಮುಂದುವರೆದ ಮಳೆ ಆರ್ಭಟ,ಜನಜೀವನ ಅಸ್ತವ್ಯಸ್ತ

ಮಲೆನಾಡು-ಕರಾವಳಿ ಭಾಗಗಳಲ್ಲಿ ಮುಂದುವರೆದ ಮಳೆ ಆರ್ಭಟ,ಜನಜೀವನ ಅಸ್ತವ್ಯಸ್ತ

ಬೆಂಗಳೂರು,ಜು.6-ಮಲೆನಾಡು, ಕರಾವಳಿ, ಉತ್ತರಕನ್ನಡ ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹೊಲಗದ್ದೆಗಳು ಜಲಾವೃತಗೊಂಡಿವೆ. ಹಲವೆಡೆ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಭಾರೀ ಗಾತ್ರದ ಮರಗಳು ಧರೆಗುರುಳಿದ್ದು, ಹಲವೆಡೆ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.

ದಕ್ಷಿಣಕನ್ನಡ, ಉತ್ತರಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರಿ, ಅನುದಾನಿತ, ಖಾಸಗಿ, ಪ್ರಾಥಮಿಕ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲೈಮುಗಿಲನ್‌ ತಿಳಿಸಿದ್ದಾರೆ.

ಸಂಭಾವ್ಯ ಪ್ರವಾಹ, ಭೂಕುಸಿತ ಪ್ರದೇಶಗಳನ್ನು ಗುರುತಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಸಿಗರು ಜಾಗ್ರತೆ ವಹಿಸುವುದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ವಿದ್ಯುತ್‌ ಕಂಬ ಮತ್ತು ತಂತಿಗಳ ಸಮೀಪ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ದಾಖಲೆಯ ಮಳೆಯಾಗಿದೆ. ಚಾರ್ಮುಡಿಘಾಟ್‌ ಹೆದ್ದಾರಿ ಸಂಚಾರಕ್ಕೆ ಅಡಚಣೆಯಾಗಿದೆ. ಬಾಳೂರು, ಮಲೆಮನೆ, ಮದುಗುಂಡಿ, ಜಾವಳಿ ಕೋಗ್ರೆ ಮುಂತಾದ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಕಳಸ, ಕುದುರೆಮುಖ ಭಾಗದಲ್ಲಿಯೂ ಭಾರೀ ಮಳೆ ಸುರಿಯುತ್ತಿದ್ದು, ತುಂಗಭದ್ರ, ಹೇಮಾವತಿ ನದಿನೀರಿನ ಮಟ್ಟ ಏರಿಕೆಯಾಗಿದೆ.

ಉತ್ತರಕನ್ನಡ ಭಾಗದಲ್ಲೂ ಕೂಡ ಮಳೆಯ ಆರ್ಭಟ ಮುಂದುವರೆದಿದ್ದು, ಹಲವು ಗ್ರಾಮಗಳು ಜಲಾವೃತಗೊಂಡಿವೆ. ಹೊಲಗದ್ದೆಗಳು ನೀರಿನಿಂದ ತುಂಬಿದ್ದು, ಜನ ಮನೆಯಲ್ಲಿ ಇರಲಾರದೆ ಹೊರಗೂ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.ದೇವಾಲಯಗಳು, ಶಾಲಾಕಾಲೇಜುಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವೆಡೆ ಶಾಲಾಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಸ್ತೆ ಸಂಚಾರದಲ್ಲೂ ಕೂಡ ವ್ಯತ್ಯವಾಗಿದ್ದು, ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಜನಜಾನುವಾರುಗಳ ಸಾವುನೋವು ಸಂಭವಿಸದಂತೆ ಎಚ್ಚರ ವಹಿಸಲಾಗಿದೆ.ಇತ್ತ ಕೊಡಗು, ಕಾವೇರಿ, ಜಲಾನಯನ ಪ್ರದೇಶದಲ್ಲೂ ಕೂಡ ಮಳೆ ಮುಂದುವರೆದಿದೆ. ಜಲಾನಯನ ಪ್ರದೇಶದ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

RELATED ARTICLES

Latest News